ವಿದ್ಯಾರ್ಥಿನಿ ನಾಪತ್ತೆ ಪ್ರಕರಣದ ಪೊಲೀಸ್ ತನಿಖೆಯಲ್ಲಿ ವಿಳಂಬ ಆರೋಪ: ಬೃಹತ್ ಪ್ರತಿಭಟನೆಯ ಎಚ್ಚರಿಕೆ

Update: 2019-02-11 18:36 GMT

ಸಿದ್ದಾಪುರ (ಕೊಡಗು), ಫೆ.11: ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯೋರ್ವಳು ನಿಗೂಢವಾಗಿ ನಾಪತ್ತೆಯಾಗಿರುವ ಪ್ರಕರಣದಲ್ಲಿ ಪೊಲೀಸರು ತನಿಖೆ ನಡೆಸಲು ವಿಳಂಬ ಮಾಡುತ್ತಿದ್ದಾರೆ ಎಂದು ವಿವಿಧ ಸಂಘ ಸಂಸ್ಥೆಗಳು ಹಾಗೂ ರಾಜಕೀಯ ಪಕ್ಷಗಳು ಆರೋಪ ಮಾಡಿವೆ.

ಸಿದ್ದಾಪುರ ಸಮೀಪದ ನೆಲ್ಯಹುದಿಕೇರಿ ಕಾಲೇಜಿನಿಂದ ಫೆ. 4 ರಂದು ಕಾಲೇಜು ಮುಗಿಸಿ ಮನೆಗೆ ತೆರಳುತ್ತಿದ್ದ ವೇಳೆ ಟಾಟಾ ಕಾಫಿ ಸಂಸ್ಥೆಯ ಸಿದ್ದಾಪುರ ಎಸ್ಟೇಟ್‍ನ ತೋಟದ ಮನೆಯ ಸಮೀಪದ ಕೆರೆಯ ಬಳಿಯಿಂದ ವಿದ್ಯಾರ್ಥಿನಿ ನಾಪತ್ತೆಯಾಗಿದ್ದಳು. ಮನೆಗೆ ತೆರಳುತ್ತಿದ್ದ ವೇಳೆ ಮುಂಬಯಿಯಲ್ಲಿ ಕೆಲಸದಲ್ಲಿರುವ ತನ್ನ ಸಂಬಂಧಿ ಯುವಕನೊಂದಿಗೆ ದೂರವಾಣಿಯಲ್ಲಿ ಮಾತನಾಡುತ್ತಿದ್ದಂತೆ ಜೋರಾಗಿ ಕಿರುಚಿದ ಶಬ್ದ ಕೇಳಿಸಿದ್ದು, ಬಳಿಕ ಮೊಬೈಲ್ ಸಂಕರ್ಪ ಕಡಿತಗೊಂಡಿತ್ತು ಎನ್ನಲಾಗಿದೆ. 7 ದಿನಗಳಿಂದ ವಿದ್ಯಾರ್ಥಿನಿಯ ಯಾವುದೇ ಸುಳಿವು ಇಲ್ಲದೆ ಗ್ರಾಮಸ್ಥರು ಹಾಗೂ ಪೋಷಕರು ಆತಂಕದಲ್ಲಿದ್ದರು. ಆದರೆ ಫೆ.10 ರಂದು ಸಿದ್ದಾಪುರ ಎಸ್ಟೇಟ್‍ನ ಕಾಫಿ ತೋಟದ ಪೊದೆಯೊಂದರಲ್ಲಿ ವಿದ್ಯಾರ್ಥಿನಿಯ ಬ್ಯಾಗ್ ಮತ್ತು ಶೂ ಪತ್ತೆಯಾಗುವ ಮೂಲಕ ಪ್ರಕರಣವು ತಿರುವುಪಡೆದುಕೊಂಡಿತ್ತು.

ಕೂಡಲೇ ತನಿಖೆಯನ್ನು ಚುರುಕುಗೊಳಿಸಿದ ಪೊಲೀಸರು ಶ್ವಾನ ದಳ ಹಾಗೂ ಬೆರಳಚ್ಚು ತಜ್ಞರ ಸಹಕಾರ ಕೂಡ ಪಡೆದಿದ್ದರು. 7 ದಿನಗಳ ನಂತರ ಬ್ಯಾಗ್ ಮತ್ತು ಶೂ ಪತ್ತೆಯಾಗುತ್ತಿದ್ದಂತೆ ಪೊಲೀಸರಿಗೆ ಪ್ರಮುಖ ಸುಳಿವು ಲಭಿಸಿರುವುದರಿಂದ ಪ್ರಕರಣವನ್ನು ಆದಷ್ಟು ಬೇಗ ಬೇಧಿಸುವ ವಿಶ್ವಾಸ ಗ್ರಾಮಸ್ಥರಲ್ಲಿ ಮೂಡಿತ್ತು. ಆದರೆ ವಿದ್ಯಾರ್ಥಿನಿಯ ನಾಪತ್ತೆ ಪ್ರಕರಣ ಹಲವು ಸಂಶಯಗಳಿಗೆ ಎಡೆಮಾಡಿರುವುದರಿಂದ ಆದಷ್ಟು ಬೇಗ ವಿದ್ಯಾರ್ಥಿನಿಯನ್ನು ಪತ್ತೆ ಹಚ್ಚಬೇಕೆಂದು ಗ್ರಾಮಸ್ಥರು ಹಾಗೂ ವಿವಿಧ ಸಂಘ ಸಂಸ್ಥೆಗಳು ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದ್ದು, ಇಲ್ಲದಿದ್ದಲ್ಲಿ ಸಿದ್ದಾಪುರದಲ್ಲಿ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳುವುದಾಗಿ ಎಚ್ಚರಿಸಿದ್ದಾರೆ. 

ನಾಪತ್ತೆಯಾಗಿರುವ ವಿದ್ಯಾರ್ಥಿನಿಯ ಕುಟುಂಬವು ಆರ್ಥಿಕವಾಗಿ ಪ್ರಬಲವಲ್ಲದ ಬಡ ಕುಟುಂಬವಾಗಿರುವುದರಿಂದ ತನಿಖೆಯು ಮಂದಗತಿಯಲ್ಲಿ ಸಾಗುತ್ತಿರುವ ಸಂಶಯವಿದೆ. ಈಗಾಗಲೇ ಘಟನೆಯ ಬಗ್ಗೆ ಶಾಸಕರ ಗಮನಕ್ಕೂ ತರಲಾಗಿದೆ. ತನಿಖೆಯನ್ನು ಚುರುಕುಗೊಳಿಸುವ ಮೂಲಕ ವಿದ್ಯಾರ್ಥಿನಿಯನ್ನು ಪತ್ತೆ ಹಚ್ಚುವುದರ ಜೊತೆಗೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕಾಗಿದೆ. ಇಲ್ಲದಿದ್ದರೆ ಪೊಲೀಸ್ ಠಾಣಾ ಮುಂಭಾಗದಲ್ಲಿ ಪ್ರತಿಭಟಿಸಲಾಗುವುದು ಎಂದು ಬಿಜೆಪಿ ಜಿಲ್ಲಾ ಕಾರ್ಯದರ್ಶಿ ವಿ.ಕೆ ಲೋಕೇಶ್ ಎಚ್ಚರಿಸಿದ್ದಾರೆ.

ನಾಪತ್ತೆಯಾಗಿರುವ ವಿದ್ಯಾರ್ಥಿನಿಯನ್ನು ಪೊಲೀಸರು ಶೀಘ್ರ ಪತ್ತೆ ಹಚ್ಚುವ ವಿಶ್ವಾಸವಿತ್ತು. ಆದರೆ ನಾಪತ್ತೆಯಾಗಿ 8 ದಿನಗಳು ಕಳೆದಿರುವುದರಿಂದ ಪೊಲೀಸ್ ತನಿಖೆ ವಿಳಂಬ ಆಗುತ್ತಿರುವಂತೆ ಗೋಚರಿಸುತ್ತಿದೆ. ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ದುರ್ಬಲವಾಗಿದ್ದರು ಕೂಡಾ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಕೊಡಿಸುವ ಸಂವಿಧಾನಿಕ ಆಜ್ಞೆಯನ್ನು ಪರಿಪಾಲಿಸುತ್ತಿರುವ ಹೆಗ್ಗಳಿಕೆ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಪೊಲೀಸ್ ಇಲಾಖೆಗೆ ಒಳ್ಳೆಯ ಹೆಸರಿದೆ. ಕೊಡಗು ಜಿಲ್ಲೆಯಲ್ಲೂ ಉತ್ತಮ ಪೊಲೀಸರಿದ್ದು, ಕೂಡಲೇ ಪ್ರಕರಣವನ್ನು ಬೇಧಿಸಬೇಕೆಂದು ಎಸ್‍ಡಿಪಿಐ ರಾಜ್ಯ ಸಮಿತಿ ಸದಸ್ಯ ಅಮೀನ್ ಮೊಹಿಸಿನ್ ಒತ್ತಾಯಿಸಿದ್ದಾರೆ. 

ವಿದ್ಯಾರ್ಥಿನಿ ನಾಪತ್ತೆಯಾಗಿ 8 ದಿನಗಳು ಕಳೆದರೂ ವಿದ್ಯಾರ್ಥಿನಿಯ ಸುಳಿವು ಲಭಿಸದೆ ಇರುವುದು ಖೇದಕರ. ಹಗಲಿನಲ್ಲೇ ವಿದ್ಯಾರ್ಥಿಗಳು ಕಣ್ಮರೆಯಾಗುವುದಾದರೆ ಮುಂದಿನ ದಿನಗಳಲ್ಲಿ ತೋಟ ಕಾರ್ಮಿಕರ ಮಕ್ಕಳನ್ನು ಯಾವ ಧೈರ್ಯದಲ್ಲಿ ದೂರದ ಶಾಲಾ ಕಾಲೇಜುಗಳಿಗೆ ಕಳಿಸುವುದು ಎಂಬ ಭಯ ಪೋಷಕರಲ್ಲಿ ಕಾಡಿದೆ. ಇಡೀ ಗ್ರಾಮದ ಜನತೆಯಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ. ಕಾಡಾನೆ ದಾಳಿ ಹಾಗೂ ಹುಲಿ ದಾಳಿಯಿಂದ ಭಯಬೀತರಾಗಿದ್ದ ಕಾರ್ಮಿಕರಲ್ಲಿ ವಿದ್ಯಾರ್ಥಿನಿಯ ನಿಗೂಡ ನಾಪತ್ತೆ ಪ್ರಕರಣ ಮತ್ತಷ್ಟು ಆತಂಕವನ್ನು ಉಂಟು ಮಾಡಿದೆ. ತನಿಖೆಯು ಆಮೆಗತಿಯಲ್ಲಿ ನಡೆಯುತ್ತಿದ್ದು, ಜನರಿಗೆ ಧೈರ್ಯ ನೀಡುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ತನಿಖೆಯನ್ನು ಚುರುಕುಗೊಳಿಸಬೇಕಾಗಿದೆ. ಇಲ್ಲದಿದ್ದರೆ ನೊಂದ ಕುಟುಂಬದೊಂದಿಗೆ ಕಾರ್ಮಿಕರನ್ನು ಒಟ್ಟುಗೂಡಿಸಿ ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತದ ವಿರುದ್ಧ ಹೋರಾಟ ಮಾಡುವುದಾಗಿ ಕಾರ್ಮಿಕ ಮುಖಂಡ ಪಿ.ಆರ್ ಭರತ್ ಎಚ್ಚರಿಸಿದ್ದಾರೆ.

ವಿದ್ಯಾರ್ಥಿನಿಯ ಬ್ಯಾಗ್ ಮತ್ತು ಶೂ ಪತ್ತೆಯಾದ ಬಳಿಕ ಟಾಟಾ ಕಾಫಿ ಸಂಸ್ಥೆಯ ಸಿದ್ದಾಪುರ ಎಸ್ಟೇಟ್‍ನ ತೋಟದಲ್ಲಿರುವ ಲೈನ್ ಮನೆಗಳಲ್ಲಿ ಪೊಲೀಸರು ತಪಾಸಣೆ ನಡೆಸಿದ್ದು, ಹಲವಾರು ವ್ಯಕ್ತಿಗಳನ್ನು ಪ್ರಶ್ನೆ ಮಾಡಿದ್ದಾರೆ. ಅಲ್ಲದೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಇಲಾಖೆ ಕೂಡಲೇ ಪ್ರಕರಣವನ್ನು ಬೇಧಿಸಲಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News