ಮೇವಾನಿ ಕಾರ್ಯಕ್ರಮಕ್ಕೆ ಅನುಮತಿ ನಿರಾಕರಿಸಿದ ಕಾಲೇಜು: ಪ್ರಾಂಶುಪಾಲ, ಉಪ ಪ್ರಾಂಶುಪಾಲರ ರಾಜೀನಾಮೆ

Update: 2019-02-12 08:16 GMT

ಹೊಸದಿಲ್ಲಿ, ಫೆ.12: ಶಾಸಕ ಜಿಗ್ನೇಶ್ ಮೆವಾನಿ ಅವರಿಗೆ ಅಹ್ಮದಾಬಾದ್ ನಗರದ ಎಚ್ ಕೆ ಆರ್ಟ್ಸ್ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಡಳಿತ ಮಂಡಳಿ ಅವಕಾಶ ನಿರಾಕರಿಸಿದ ಹಿನ್ನೆಲೆಯಲ್ಲಿ ನೈತಿಕ ತಳಹದಿಯ ಮೇಲೆ ಕಾಲೇಜಿನ ಉಸ್ತುವಾರಿ ಪ್ರಾಂಶುಪಾಲರು ಮತ್ತು ಉಪ ಪ್ರಾಂಶುಪಾಲರು ರಾಜೀನಾಮೆ ನೀಡಿದ್ದಾರೆ.

ವಡ್ಗಾಮ್ ಕ್ಷೇತ್ರದ ಶಾಸಕರಾಗಿರುವ ಮೆವಾನಿ ಬ್ರಹ್ಮಚಾರಿ ವಾಡಿ ಟ್ರಸ್ಟ್ ನಡೆಸುವ ಈ ಕಾಲೇಜಿನ ಹಳೆ ವಿದ್ಯಾರ್ಥಿಯಾಗಿದ್ದಾರೆ.

“ನಾನು ವೈಯಕ್ತಿಕ ಸ್ವಾತಂತ್ರ್ಯದ ಪರ ಇರುವವನು ಹಾಗೂ ಕಾಲೇಜಿನ ಪ್ರಾಂಶುಪಾಲನಾಗಿ ವರ್ತಿಸಬೇಕಾದ ರೀತಿಯಲ್ಲಿ ವರ್ತಿಸಿಲ್ಲ. ಸೋಮವಾರದ ಕಾರ್ಯಕ್ರಮಕ್ಕೆ ಅನುಮತಿ ರದ್ದುಗೊಳಿಸಿ ಟ್ರಸ್ಟಿಯಿಂದ ರವಿವಾರ ಪತ್ರ ಬಂದಿತ್ತು. ಇದಕ್ಕೆ ನೀಡಲಾದ ಕಾರಣ-ಈಗಿನ ರಾಜಕೀಯ ಸನ್ನಿವೇಶ. ಆದರೆ ಈ ಸನ್ನಿವೇಶವೇನು ಎಂದು ನಾನು ಕೇಳಲು ಬಯಸುತ್ತೇನೆ'' ಎಂದು  ಉಸ್ತುವಾರಿ ಪ್ರಾಂಶುಪಾಲ ಹಾಗೂ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಹೇಮಂತ್ ಕುಮಾರ್ ಶಾ ಹೇಳಿದ್ದಾರೆ.

ಕಾಲೇಜಿಗೆ ಈ ಹಿಂದೆ ವಿವಿಧ ರಾಜಕೀಯ ಪಕ್ಷದ ನಾಯಕರನ್ನು ವಿವಿಧ ಕಾರ್ಯಕ್ರಮಗಳಿಗೆ ಆಹ್ವಾನಿಸಿರುವುದರಿಂದ ಮೇವಾನಿಗೆ ಆಹ್ವಾನ ನೀಡಿದ್ದರಲ್ಲಿ ತಪ್ಪಿಲ್ಲ ಎಂದು ಶಾ ಹೇಳಿದ್ದಾರೆ.

ಕಾಲೇಜು ಪ್ರಾಂಶುಪಾಲರ ರಾಜೀನಾಮೆ ನಿರ್ಧಾರವನ್ನು ಸ್ವಾಗತಿಸಿ ಮೇವಾನಿ ಟ್ವೀಟ್ ಮಾಡಿದ್ದಾರೆ.

ಮೇವಾನಿಯನ್ನು ಆಹ್ವಾನಿಸಿದರೆ ಕಾರ್ಯಕ್ರಮಕ್ಕೆ ಅಡ್ಡಿ ಪಡಿಸುವುದಾಗಿ ಕೆಲ ವಿದ್ಯಾರ್ಥಿಗಳು ಬೆದರಿಸಿದ್ದರು. “ಕಾಲೇಜಿನ ಟ್ರಸ್ಟಿಗಳು ಕಾರ್ಯಕ್ರಮಕ್ಕೆ ಅನುಮತಿಸಬೇಕಿತ್ತು, ಆದರೆ ಅವರು ರಾಜಕೀಯ ಒತ್ತಡದಿಂದಾಗಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ತಮ್ಮ ಕೈಯ್ಯಾರೆ ಹಿಚುಕಿದ್ದಾರೆ'' ಎಂದು ಪ್ರಾಂಶುಪಾಲರು ಹೇಳಿದರೆ, ಉಪ ಪ್ರಾಂಶುಪಾಲ ಮೋಹನಲಾಲ್ ಪರ್ಮಾರ್ ಕೂಡ ತಮ್ಮ ರಾಜೀನಾಮೆಗೆ ಇದೇ ಕಾರಣ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News