ಶಸ್ತ್ರಕ್ರಿಯೆ ಮಾಡಲು ಮಗುವನ್ನು ಗರ್ಭಕೋಶದಿಂದ ತೆಗೆದು ಮತ್ತೆ ಇಟ್ಟರು !

Update: 2019-02-12 10:42 GMT

ಲಂಡನ್, ಫೆ. 12 : ಅತ್ಯಂತ ವಿರಳ ಆರೋಗ್ಯ ಸಮಸ್ಯೆಯೊಂದನ್ನು ಎದುರಿಸುತ್ತಿದ್ದ ಶಿಶುವಿಗೆ ಅದು ತಾಯಿಯ ಗರ್ಭದಲ್ಲಿರುವಾಗಲೇ ಶಸ್ತ್ರಕ್ರಿಯೆ ನಡೆಸಿದ ಅಪರೂಪದ ವಿದ್ಯಮಾನ ಇಂಗ್ಲೆಂಡ್ ನಿಂದ ವರದಿಯಾಗಿದೆ.

ಎಸ್ಸೆಕ್ಸ್ ಬರ್ನ್ ಹ್ಯಾಮ್ ಎಂಬಲ್ಲಿನ 26 ವರ್ಷದ ಬೆಥಾನ್ ಸಿಂಪ್ಸನ್ ಎಂಬ ಮಹಿಳೆಯೇ ತನ್ನ ಇನ್ನಷ್ಟೇ ಹುಟ್ಟಬೇಕಿರುವ ಮಗುವಿಗೆ ಈ ಅಪರೂಪದ ಶಸ್ತ್ರಕ್ರಿಯೆ ನಡೆಸಲು ಒಪ್ಪಿದ ಮಹಿಳೆಯಾಗಿದ್ದಾಳೆ.

ಆಕೆಯ ಗರ್ಭಕ್ಕೆ 20 ವಾರಗಳಾದ ಸಂದರ್ಭ ಸ್ಕ್ಯಾನಿಂಗ್ ಮಾಡಿದಾಗ ಮಗು ಸ್ಪೈನಾ ಬಿಫಿಡಾ ಎಂಬ ಅಪರೂಪದ ಸಮಸ್ಯೆ ಎದುರಿಸುತ್ತಿತ್ತೆಂದು ತಿಳಿದು ಬಂದಿತ್ತು. ಮಗುವಿನ ತಲೆಯ ಗಾತ್ರ ಸರಿಯಾಗಿಲ್ಲ ಎಂದು ತಿಳಿದು ಬಂದ ನಂತರ ಆಕೆಯನ್ನು  ಬ್ರೂಮ್ ಫೀಲ್ಡ್ ಆಸ್ಪತ್ರೆಗೆ  ಭೇಟಿ ನೀಡಲು ತಿಳಿಸಲಾಯಿತು. ಅಲ್ಲಿನ ವೈದ್ಯರು ಮಗು ಅಪರೂಪದ ಸ್ಪೈನಾ ಬಿಫಿಡಾ ಸಮಸ್ಯೆಯಿಂದ ಬಳಲುತ್ತಿದೆ ಎಂದು ತಿಳಿಸಿ  ಒಂದೋ ಗರ್ಭಪಾತ ಮಾಡಿಸಬೇಕು ಇಲ್ಲವೇ ಗರ್ಭದಲ್ಲಿರುವಾಗಲೇ ಮಗುವಿಗೆ ಶಸ್ತ್ರಕ್ರಿಯೆ ನಡೆಸಬೇಕು ಎಂದು ಎರಡು ಆಯ್ಕೆಗಳನ್ನು ನೀಡಿದಾಗ ಆಕೆ ಎರಡನೇ ಆಯ್ಕೆಗೆ ಒಪ್ಪಿಕೊಂಡಿದ್ದಳು.

ನಂತರ ಹಲವಾರು ಸ್ಕ್ಯಾನ್ ಮತ್ತು ವೈದ್ಯಕೀಯ ಪರೀಕ್ಷೆಗಳನ್ನು ನಡೆಸಿ ಬೆಥಾನ್ ಈ ಶಸ್ತ್ರಕ್ರಿಯೆಗೊಳಗಾಗಬಹುದೆಂದು ವೈದ್ಯರು ಹೇಳಿದರು. ಅಂತೆಯೇ ಆಕೆಯ ಗರ್ಭಕ್ಕೆ 24 ವಾರಗಳಾದಾಗ ಶಸ್ತ್ರಕ್ರಿಯೆ ನಡೆದು ಮಗುವಿನ ಬೆನ್ನು ಹುರಿ ಸರಿಯಾದ ಸ್ಥಳದಲ್ಲಿರುವಂತೆ ಮಾಡಲಾಯಿತು. ಈ ಶಸ್ತ್ರಕ್ರಿಯೆ ಯಶಸ್ವಿಯಾಗಿದ್ದು ಆಕೆ ಎಪ್ರಿಲ್ ತಿಂಗಳಲ್ಲಿ ಮಗುವಿಗೆ ಜನ್ಮ ನೀಡಲಿದ್ದಾಳೆ.

ಇದೀಗ ಬೆಥಾನ್ ಆರೋಗ್ಯದಿಂದಿದ್ದು ಆಕೆಯ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಮಗುವೂ ಆರೋಗ್ಯದಿಂದಿದೆ ಎಂದು ವೈದ್ಯರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News