ಕಡಂಗ ಕೊಕ್ಕಂಡಬಾಣೆ ಉರೂಸ್‍ಗೆ ಫೆ.15 ರಂದು ಚಾಲನೆ

Update: 2019-02-12 11:20 GMT

ಮಡಿಕೇರಿ, ಫೆ.12: ಕಡಂಗ ಕೊಕ್ಕಂಡಬಾಣೆಯಲ್ಲಿ ಅಂತಿಮ ವಿಶ್ರಾಂತಿ ಪಡೆಯುತ್ತಿರುವ ವಲಿಯುಲ್ಲಾಹಿರವರ ಹೆಸರಿನಲ್ಲಿ ಭಾವೈಕ್ಯತೆಯ ಸಂಕೇತವಾಗಿ ವರ್ಷಂಪ್ರತಿ ಆಚರಿಸಿಕೊಂಡು ಬರುತ್ತಿರುವ ಮಖಾಂ ಉರೂಸ್ ಇದೇ ಫೆ.15 ರಿಂದ 19ರ ವರೆಗೆ ನಡೆಯಲಿದೆ.

ಕಡಂಗ ಮುಹಿಯುದ್ದೀನ್ ಜುಮ್ಮಾ ಮಸೀದಿಯ ಮದರಸದ ಪ್ರಾಂಶುಪಾಲರಾದ ಸುಹೈಬ್ ಫೈಝಿ ಅವರು ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿ, ಗ್ರಾಮಸ್ಥರು ಯಾವುದೇ ಜಾತಿ, ಧರ್ಮಗಳ ಭೇದವಿಲ್ಲದೆ ಹಲವು ವರ್ಷಗಳಿಂದ ಪವಿತ್ರ ದರ್ಗಾದ ಉರೂಸ್‍ನಲ್ಲಿ ಪಾಲ್ಗೊಳ್ಳುತ್ತಾ ಬಂದಿದ್ದು, ಕಳೆದ ಜನವರಿ 28 ರಂದು ಊರಿನ ಉಸ್ತಾದರು, ಜಮಾಅತ್‍ನ ಪದಾಧಿಕಾರಿಗಳು, ಸದಸ್ಯರ ಹಾಗೂ ಪಾಲಚಂಡ ಕುಟುಂಬಸ್ಥರ ಸಮ್ಮುಖದಲ್ಲಿ ಉರೂಸ್ ದಿನಾಂಕವನ್ನು ನಿಗದಿಪಡಿಸಲಾಗಿದೆ ಎಂದರು.

ಆರಂಭಿಕ ದಿನವಾದ ಫೆ.15 ರಂದು ಮಧ್ಯಾಹ್ನ 2.30ಕ್ಕೆ ಕಡಂಗ ಜುಮ್ಮಾ ಮಸೀದಿಯಿಂದ ಉರೂಸ್ ಪ್ರಯುಕ್ತ ಜಾಥಾ ಪ್ರಾರಂಭವಾಗಲಿದ್ದು, ಸಂಜೆ 3 ಗಂಟೆಗೆ ಧ್ವಜಾರೋಹಣವನ್ನು ಮುಹಿಯುದ್ದೀನ್ ಜುಮ್ಮಾ ಮಸೀದಿ ಅಧ್ಯಕ್ಷರಾದ ಕೆ.ಎ.ಇಬ್ರಾಹಿಂ ನೆರವೇರಿಸಲಿದ್ದಾರೆ. 3.15ಕ್ಕೆ ಮುಖಾಂ ಅಲಂಕಾರ ಮತ್ತು ಸಾಮೂಹಿಕ ಪ್ರಾರ್ಥನೆ ನಡೆಯಲಿದ್ದು, ಇದರ ನೇತೃತ್ವವನ್ನು ಮಸೀದಿಯ ಮುದರ್ರಿಸ್ ಶೈಖುನಾ ಮುಹ್‍ಯಿದ್ದೀನ್ ಫೈಝಿ ವಹಿಸಲಿದ್ದಾರೆ ಎಂದು ತಿಳಿಸಿದರು.

ಅಂದು ರಾತ್ರಿ 8.30ಕ್ಕೆ ಸಯ್ಯಿದ್ ಪಾಣಕ್ಕಾಡ್ ಅಬ್ದುರ್ರಶೀದಲಿ ಶಿಹಾಬ್ ತಙಳ್ ಅವರ ನೇತೃತ್ವದಲ್ಲಿ ದ್ಸಿಕ್ರ್ ಹಲ್ಕಾ ಮತ್ತು ಕಡಂಗ ಮುಹಿಯುದ್ದೀನ್ ಜುಮ್ಮಾ ಮಸೀದಿಯ ಮುದರ್ರಿಸ್ ಶೈಖುನಾ ಮುಹ್‍ಯಿದ್ದೀನ್ ಫೈಝಿ ಅವರು ಧಾರ್ಮಿಕ ಪ್ರವಚನ ಮಾಡಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಮಸ್ತ ಕೊಡಗು ಜಿಲ್ಲಾ ನಾಇಬ್ ಖಾಝಿ ಶೈಖುನಾ ಎಂ.ಎಂ. ಅಬ್ದುಲ್ಲಾ ಫೈಝಿ  ವಹಿಸಲಿದ್ದಾರೆ ಎಂದರು.

ಫೆ.16 ರಂದು ರಾತ್ರಿ 8 ಗಂಟೆಗೆ ದುಆ ಮಜ್‍ಲಿಸಿಗೆ ಸಯ್ಯಿದ್ ಅಬ್ದುಲ್ ಹಕೀಂ ತ್ವಯ್ಯಿಬ್ ತಂಙಳ್ ಜಮಲುಲ್ಲೈಲಿ ಅವರು ನೇತೃತ್ವ ವಹಿಸಲಿದ್ದಾರೆ. ರಾತ್ರಿ 8.30ಕ್ಕೆ ‘ನೀದಿ ಪೀಡತ್ತಿಲೆ ನಿರಪರಾಧಿ’ ಎಂಬ ವಿಷಯದಲ್ಲಿ ಅಬ್ದುಸ್ಸಮದ್ ದಾರಿಮಿ ಕೋಳತ್ತರ ಹಾಗೂ ಸಂಗಡಿಗರು ಇಸ್ಲಾಮಿಕ್ ಕಥಾ ಪ್ರಸಂಗವನ್ನು ನಡೆಸಿಕೊಡಲಿದ್ದಾರೆಂದರು.

ಫೆ.17 ರಂದು ರಾತ್ರಿ 8.30ಕ್ಕೆ ಸುಪ್ರಸಿದ್ಧ ವಾಗ್ಮಿ ಅಶ್ರಫ್ ರಹ್ಮಾನಿ ಚೌಕಿ ಕಾಸರಗೋಡು, ಫೆ.18 ರಂದು ರಾತ್ರಿ 8.30ಕ್ಕೆ ಅಂತರಾಷ್ಟ್ರೀಯ ಪ್ರಭಾಷಣಗಾರ ಅಲ್ ಹಾಫಿಳ್ ಕುಮ್ಮಾನಂ ನಿಝಾಮುದ್ದೀನ್ ಅಝ್‍ಹರಿ ಅವರು ಭಾಷಣ ಮಾಡಲಿದ್ದಾರೆ. ಫೆ.18 ರಂದು ಮಧ್ಯಾಹ್ನ 2 ಗಂಟೆಗೆ ಸೌಹಾರ್ದ ಸಮ್ಮೇಳನ ನಡೆಯಲಿದೆ ಎಂದರು.

ಫೆ.18 ಮತ್ತು 19 ರಂದು ಸಂಜೆ 3 ಗಂಟೆಗೆ ಮೌಲಿದ್ ಪಾರಾಯಣ ಹಾಗೂ ಅನ್ನಸಂತರ್ಪಣೆ ನಡೆಯಲಿದೆ. ಅಲ್ಲದೆ ಪ್ರತೀ ದಿನ ರಾತ್ರಿ ಮಗ್‍ರಿಬ್ ನಮಾಝಿನ ಬಳಿಕ ರಾತೀಬ್ ಸಂಘ ಮತ್ತು ಎಂ.ಯು. ಮದರಸ ವಿದ್ಯಾರ್ಥಿಗಳ  ದಫ್ ಪ್ರದರ್ಶನ ನಡೆಯಲಿದೆ. ಕಾರ್ಯಕ್ರಮದಲ್ಲಿ ಮಹಿಳೆಯರಿಗೆ ಪ್ರತ್ಯೇಕ ಸ್ಥಳಾವಕಾಶ ಮತ್ತು ಎಲ್‍ಸಿಡಿ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಮುಹಿಯುದ್ದೀನ್ ಜುಮ್ಮಾ ಮಸೀದಿಯ ಅಧ್ಯಕ್ಷರಾದ ಕೆ.ಎ. ಇಬ್ರಾಹಿಂ, ಪ್ರಧಾನ ಕಾರ್ಯದರ್ಶಿ ಸಿ.ಹೆಚ್. ಮಮ್ಮು, ಕಾರ್ಯದರ್ಶಿ ಪಿ.ಎ. ಅಬ್ದುಲ್ಲ ಹಾಜಿ, ಸದಸ್ಯರುಗಳಾದ ಟಿ.ಎಂ.ರಹೀಂ ಹಾಗೂ ಕೆ.ಯು.ಅಬ್ದುಲ್ ರೆಹಮಾನ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News