ತುಮಕೂರು: ಫೆ.15,16 ರಂದು ಬೃಹತ್ ಉಚಿತ ಆರೋಗ್ಯ ಮೇಳ

Update: 2019-02-12 11:24 GMT

ತುಮಕೂರು, ಫೆ.12: ತುಮಕೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನದ ವತಿಯಿಂದ ಫೆ.15,16 ರಂದು ಬೃಹತ್ ಉಚಿತ ಆರೋಗ್ಯ ಮೇಳವನ್ನು ಸಿದ್ಧಾರ್ಥ ಮೆಡಿಕಲ್ ಕಾಲೇಜು ಆವರಣದಲ್ಲಿ ಆಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ರಾಕೇಶ್‍ಕುಮಾರ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು ಬೃಹತ್ ಆರೋಗ್ಯ ಮೇಳದಲ್ಲಿ ಅರಿವು ಮತ್ತು ಆರೋಗ್ಯ ಶಿಕ್ಷಣ, ಸಾಮಾನ್ಯ ಆರೋಗ್ಯ ತಪಾಸಣೆ, ಆಯುಶ್ ಸೇವೆ, ಪ್ರಯೋಗಶಾಲಾ ಸೇವೆಗಳನ್ನು ಒದಗಿಸಲಾಗುವುದು, ಉಚಿತ ಚಿಕಿತ್ಸೆಯ ಜೊತೆಗೆ ಔಷಧಿಗಳನ್ನು ವಿತರಿಸುವುದರ ಜೊತೆಗೆ ಆಯುಷ್ಮಾನ್ ಭಾರತ, ಆರೋಗ್ಯ ಕರ್ನಾಟಕ ಯೋಜನೆಯಡಿಯಲ್ಲಿ ಸೇವೆಯನ್ನು ಒದಗಿಸಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಫೆ.15ರಂದು ಗರ್ಭಿಣಿಯರಿಗೆ ಮಡಿಲು ತುಂಬುವ ಕಾರ್ಯಕ್ರಮ ಹಾಗೂ ಫೆ.16ರಂದು ಆರೋಗ್ಯವಂತ ಶಿಶುಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದ್ದು, ಆರೋಗ್ಯವಂತ ಶಿಶುವಿನ ಪೋಷಕರಿಗೆ ನೆನಪಿನ ಕಾಣಿಕೆಯೊಂದಿಗೆ ನಗದು ಬಹುಮಾನವನ್ನು ನೀಡಲಾಗುವುದು ಎಂದು ತಿಳಿಸಿದರು.

ಉಚಿತ ವಾಹನ ವ್ಯವಸ್ಥೆ: ಆರೋಗ್ಯ ಮೇಳಕ್ಕೆ ಆಗಮಿಸುವವರಿಗಾಗಿ ನಗರದಿಂದ ಸಿದ್ಧಾರ್ಥ ಮೆಡಿಕಲ್ ಕಾಲೇಜು ಆವರಣಕ್ಕೆ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದಿಂದ ಉಚಿತ ವಾಹನ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

ಅಪೌಷ್ಠಿಕ ಮಕ್ಕಳಿಗೆ ಎನ್‍ಆರ್‍ಇಯಲ್ಲಿ ಚಿಕಿತ್ಸೆ ನೀಡುವುದರ ಜೊತೆಗೆ ಕೂಲಿ ಕಾರ್ಮಿಕ ಪೋಷಕರಿಗೆ 250 ರೂ ಸಹಾಯಧನ ನೀಡಲಾಗುತ್ತಿದ್ದು, 14 ದಿನಗಳ ಚಿಕಿತ್ಸೆಯನ್ನು ಪಡೆದುಕೊಂಡರೆ, ಅಪೌಷ್ಠಿಕ ಮಕ್ಕಳು ಆರೋಗ್ಯವಂತರಾಗಲಿದ್ದಾರೆ. ಮಧುಗಿರಿ ಅಂಗನವಾಡಿಯೊಂದರಲ್ಲಿ ಶಿಶು ಆಹಾರವನ್ನು ದುರುಪಯೋಗಪಡಿಸಿಕೊಂಡ ಅಂಗನವಾಡಿ ಕಾರ್ಯಕರ್ತೆಯನ್ನು ಸೇವೆಯಿಂದ ವಜಾಗೊಳಿಸಲಾಗಿದೆ ಎಂದು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಚಂದ್ರಕಲಾ ಸೇರಿದಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News