ಬಿಜೆಪಿ-ಆರೆಸ್ಸೆಸ್ ಸಂವಿಧಾನದ ವಿರೋಧಿ: ಪ್ರೊ.ರವಿವರ್ಮ ಕುಮಾರ್

Update: 2019-02-12 14:57 GMT

ಬೆಂಗಳೂರು, ಫೆ.12: ಆರೆಸ್ಸೆಸ್ ಹಾಗೂ ಸಂಘಪರಿವಾರ, ಬಿಜೆಪಿ ಸಂವಿಧಾನದ ವಿರೋಧಿಗಳಾಗಿದ್ದಾರೆ ಎಂದು ಹಿರಿಯ ನ್ಯಾಯವಾದಿ ಪ್ರೊ.ರವಿವರ್ಮಕುಮಾರ್ ಹೇಳಿದ್ದಾರೆ.

ಮಂಗಳವಾರ ನಗರದ ಅಂಬೇಡ್ಕರ್ ಭವನದಲ್ಲಿ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ)ಯಿಂದ ಆಯೋಜಿಸಿದ್ದ ‘ಸಂವಿಧಾನದ ಸಂರಕ್ಷಣಾ ಸಮಾವೇಶ ಗಣರಾಜ್ಯದ ಆಶಯಗಳು’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಸಂಘಪರಿವಾರವು ಸಂವಿಧಾನ ಜಾರಿಯಾದ ಸಂದರ್ಭದಿಂದ ಆರಂಭವಾಗಿ ಇಂದಿಗೂ ಸಂವಿಧಾನವನ್ನು ವಿರೋಧಿಸುತ್ತಿದೆ. ಸಂವಿಧಾನದ ಅಡಿಯಲ್ಲಿ ಅಧಿಕಾರಕ್ಕೆ ಬಂದಿರುವವರು ಇಂದು ಸಂವಿಧಾನವನ್ನೇ ಬುಡಮೇಲು ಮಾಡಲು ಮುಂದಾಗಿದ್ದಾರೆ. ಮತ್ತೊಂದು ಕಡೆ ಸಂವಿಧಾನದ ಪ್ರತಿಗಳನ್ನು ಸುಟ್ಟು, ಅದನ್ನು ಧಿಕ್ಕರಿಸಿ ಎಂದು ಕರೆ ಕೊಡುತ್ತಿದ್ದರೂ ಮಾತನಾಡದ ಸ್ಥಿತಿಯಲ್ಲಿ ಆಡಳಿತ ವ್ಯವಸ್ಥೆಯಿದೆ ಎಂದು ದೂರಿದರು.

ನಮ್ಮ ದೇಶವು ಹಸಿವು, ಅಸಮಾನತೆ, ಅನಕ್ಷರತೆ, ಬಡತನ ಎಲ್ಲವೂ ಸಂವಿಧಾನ ಜಾರಿಯಿಂದ ಮುಕ್ತಿ ಹೊಂದಿವೆ. ಆದರೆ, ಇಂದು ಸಂವಿಧಾನ ನೀಡಿದ ಹಕ್ಕುಗಳನ್ನಾಧರಿಸಿ ಅಧಿಕಾರಕ್ಕೆ ಬಂದವರು ಸಂವಿಧಾನವನ್ನು ಬದಲಾವಣೆ ಮಾಡುತ್ತೇವೆ ಎನ್ನುವವರನ್ನು ರಕ್ಷಣೆ ಮಾಡುತ್ತಿದ್ದಾರೆ ಎಂದ ಅವರು, ದೇಶದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ನಂತರ ಸಾಂವಿಧಾನಿಕ ಸಂಸ್ಥೆಗಳನ್ನು ದಮನ ಮಾಡಲು ಮುಂದಾಗಿದ್ದಾರೆ ಎಂದು ಆಪಾದಿಸಿದರು.

ಭಾರತದ ಸಂವಿಧಾನದಲ್ಲಿ ಎಲ್ಲರಿಗೂ ಬದುಕಲು ಅವಕಾಶ ಕಲ್ಪಿಸಬೇಕು, ಹಸಿವಿನಿಂದ ರಕ್ಷಿಸುವುದು ಎಲ್ಲವೂ ನಮ್ಮನ್ನಾಳುವವರ ಕರ್ತವ್ಯ ಎಂದು ಹೇಳಲಾಗಿದೆ. ಹೀಗಾಗಿ, ಹಿಂದಿನ ಸರಕಾರದ ಅನ್ನಭಾಗ್ಯ ಯೋಜನೆಯು ರಾಜ್ಯದಲ್ಲಿ ಪರಿಣಾಮಕಾರಿಯಾಗಿದೆ ಎಂದ ಅವರು, ನಮ್ಮ ನೆರೆ ರಾಜ್ಯವಾದ ತೆಲಂಗಾಣದಲ್ಲಿ ಕಳೆದ ವರ್ಷ 4 ಸಾವಿರಕ್ಕೂ ಅಧಿಕ ಜನರು ಹಸಿವಿನಿಂದ ಮೃತಪಟ್ಟಿದ್ದಾರೆ ಎಂದು ಅವರು ಹೇಳಿದರು.

ಸಮಾಜದಲ್ಲಿ ಎಲ್ಲರನ್ನೂ ಸಮಾನವಾಗಿ ಕಾಣುವ ಮೂಲಕ ಅಸಮಾನತೆಯನ್ನು ತೊಡೆದು ಹಾಕಬೇಕಿದೆ. ನಮ್ಮ ವ್ಯವಸ್ಥೆಯಲ್ಲಿ ರಾಷ್ಟ್ರಪತಿಯಿಂದ ಹಿಡಿದು ಸಾಮಾನ್ಯನವರೆಗೂ ಎಲ್ಲರಿಗೂ ಸಮಾನವಾದ ಮತದಾನ ಹಕ್ಕಿದೆ. ಅದೇ ರೀತಿ ಸಂವಿಧಾನ ನೀಡಿರುವ ಹಕ್ಕುಗಳನ್ನು ಪಡೆಯುವ ಮೂಲಕ ಎಲ್ಲರೂ ಶೈಕ್ಷಣಿಕವಾಗಿ, ಸಾಮಾಜಿಕ ಮತ್ತು ಆರ್ಥಿಕವಾಗಿ ಸಮಾನರಾಗಬೇಕು ಎಂದರು.

ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಎಚ್.ಕಾಂತರಾಜ್ ಮಾತನಾಡಿ, ಸಂವಿಧಾನದಲ್ಲಿ ಮೀಸಲಾತಿ ಶಾಶ್ವತವಲ್ಲ. ಎಲ್ಲಿಯವರೆಗೂ ಶೋಷಣೆ, ಅನ್ಯಾಯವಾಗುತ್ತದೆಯೋ ಅಲ್ಲಿಯವರೆಗೆ ಮೀಸಲಾತಿ ಕೊಡಬೇಕಾದ ಅಗತ್ಯವಿದೆ. ಮೇಲ್ಜಾತಿಯವರ ಬಡವರಿಗೆ ಶೇ.10 ರಷ್ಟಲ್ಲ ಶೇ.20 ರಷ್ಟು ಮೀಸಲಾತಿ ನೀಡಿ. ಆದರೆ, ಅದಕ್ಕೆ ಇರಬೇಕಾದ ಮಾನದಂಡ ಮತ್ತು ಅಂಕಿಅಂಶಗಳನ್ನು ಸಾರ್ವಜನಿಕವಾಗಿ ಮಂಡಿಸಿ ಎಂದು ಹೇಳಿದರು.

ಜನಸಂಖ್ಯೆ ಆಧರಿತವಾಗಿ ಮೀಸಲಾತಿ ನೀಡಿ ಎಂದು ಹಲವಾರು ವರ್ಷಗಳಿಂದ ತಳ ಸಮುದಾಯದ ಜನರು ಒತ್ತಾಯಿಸುತ್ತಿದ್ದಾರೆ. ಅದರ ಪರವಾಗಿ ಧ್ವನಿ ಎತ್ತಲಿಲ್ಲ, ಶೇ.50 ರಷ್ಟು ಮೀಸಲಾತಿ ನೀಡಲು ಅವಕಾಶವಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ. ಆದರೆ, ನಿಖರವಾದ ಅಂಕಿ ಅಂಶಗಳಿಲ್ಲದೆ ಜಾರಿ ಮಾಡಿರುವುದು ಸರಿಯಲ್ಲ ಎಂದ ಅವರು, ಆರ್ಥಿಕ ಸ್ಥಿತಿ-ಗತಿ ಆಧರಿಸಿ ಮೀಸಲಾತಿ ನೀಡುವುದು ಅಸಂವಿಧಾನಿಕ ಎಂದು ನುಡಿದರು. ಕಾರ್ಯಕ್ರಮದಲ್ಲಿ ಡಿಎಸ್‌ಎಸ್‌ನ ಮಾವಳ್ಳಿ ಶಂಕರ್, ಇಂದಿರಾ ಕೃಷ್ಣಪ್ಪ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಮೀಸಲಾತಿ ಹಾಗೂ ಸಾಮಾಜಿಕ ನ್ಯಾಯದಿಂದ ಸಂವಿಧಾನ ರಕ್ಷಣೆಯಾಗಿದೆ. ಮೀಸಲಾತಿ ನೀಡದೇ ಇದ್ದಿದ್ದರೆ ದೇಶದಲ್ಲಿ ಅರಾಜಕತೆ ಸೃಷ್ಟಿಯಾಗುತ್ತಿತ್ತು. ಭಾರತವು ಬಹುಸಂಸ್ಕೃತಿ, ವಿವಿಧ ಧರ್ಮಗಳು, ಸಾವಿರಾರು ಜಾತಿಗಳನ್ನು ಒಳಗೊಂಡಿದ್ದು, ಎಲ್ಲದಕ್ಕೂ ಸಂವಿಧಾನದಲ್ಲಿ ಸಮಾನ ಅವಕಾಶಗಳಿವೆ. ಪ್ರಪಂಚದ ಅನೇಕ ರಾಷ್ಟ್ರಗಳಲ್ಲಿ ಸಾಮಾಜಿಕ ನ್ಯಾಯ ಜಾರಿಯಲ್ಲಿದೆ. ಅದಕ್ಕೆ ಮೂಲ ಭಾರತದ ಸಂವಿಧಾನ.

-ಪ್ರೊ.ರವಿವರ್ಮ ಕುಮಾರ್, ಮಾಜಿ ಅಡ್ವೋಕೇಟ್ ಜನರಲ್

ಮೇಲ್ಜಾತಿ ಬಡವರಿಗೆ ಮೀಸಲಾತಿ ನೀಡಲು ಸಂವಿಧಾನ ಬದಲಾವಣೆ ಮಾಡಿದ ಮಾತ್ರಕ್ಕೆ ತಿದ್ದುಪಡಿ ಕಾಯ್ದೆ ಉಳಿಯುತ್ತದೆ ಎನ್ನುವುದು ಸುಳ್ಳು. ಸಂವಿಧಾನದ 46 ನೆ ಅನುಚ್ಛೇದವನ್ನು ತಿದ್ದುಪಡಿ ಮಾಡಲಾಗಿದೆ ಎನ್ನುತ್ತಿದ್ದಾರೆ. ಆದರೆ, ಆ ಅನುಚ್ಛೇದನದಲ್ಲಿ ಸಾಮಾಜಿಕ ಅನ್ಯಾಯಕ್ಕೆ ಒಳಗಾದವರಿಗೆ, ತುಳಿತಕ್ಕೆ ಒಳಗಾದವರಿಗೆ ಸಿಲುಕಿ ನಲುಗುತ್ತಿರುವವರಿಗೆ ಸೌಲಭ್ಯ ಕಲ್ಪಿಸುವುದಾಗಿದೆ. ಹೀಗಾಗಿ, ಈ ತಿದ್ದುಪಡಿ ಕಾಯ್ದೆ ಉಳಿಯುವುದಿಲ್ಲ.

-ಎಚ್.ಕಾಂತರಾಜ್, ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News