ದೇವೇಗೌಡರ ಬಗ್ಗೆ ಆಕ್ಷೇಪಾರ್ಹ ಮಾತು: ಶಾಸಕ ಪ್ರೀತಂ ಗೌಡ ಮನೆ ಮೇಲೆ ದಾಳಿ, ಕಲ್ಲು ತೂರಾಟ

Update: 2019-02-13 14:08 GMT

ಹಾಸನ,ಫೆ.13: ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಮತ್ತು ಸಿಎಂ ಹೆಚ್.ಡಿ. ಕುಮಾರಸ್ವಾಮಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆಂದು ಆರೋಪಿಸಿ ಬುಧವಾರ ಬೆಳಿಗ್ಗೆ ಜೆಡಿಎಸ್ ಕಾರ್ಯಕರ್ತರು ಶಾಸಕ ಪ್ರೀತಮ್ ಜೆ.ಗೌಡ ಮನೆ ಮುಂದೆ ಪ್ರತಿಭಟನೆ ನಡೆಸಿ, ಮನೆಗೆ ಕಲ್ಲು ತೂರಿದ ಪರಿಣಾಮ ಓರ್ವನ ಕಣ್ಣಿನ ಭಾಗಕ್ಕೆ ಗಾಯಗಳಾದ ಘಟನೆ ನಡೆದಿದೆ.

ಬೆಂಗಳೂರಿನಲ್ಲಿ ಬಿಡುಗಡೆಯಾದ ಆಡಿಯೋದಲ್ಲಿ ಪ್ರೀತಮ್‍ ಗೌಡ ಮಾತನಾಡಿದ ಭಾಗವೂ ಇದ್ದು, ಅದರಲ್ಲಿ ದೇವೇಗೌಡರ ಬಗ್ಗೆ ಹಾಗೂ ಸಿಎಂ ಹೆಚ್.ಡಿ. ಕುಮಾರಸ್ವಾಮಿ ವಿರುದ್ಧ ಆಕ್ಷೇಪಾರ್ಹ ರೀತಿಯಲ್ಲಿ ಅವರು ಮಾತನಾಡಿರುವುದು ಜೆಡಿಎಸ್ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ನೂರಾರು ಜೆಡಿಎಸ್ ಕಾರ್ಯಕರ್ತರು ವಿದ್ಯಾನಗರದಲ್ಲಿರುವ ಶಾಸಕ ಪ್ರೀತಂ ಗೌಡ ಅವರ ಮನೆ ಮುಂದೆ ಜಮಾಯಿಸಿ ಧರಣಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ವಿರುದ್ಧ ಶಾಸಕ ಪ್ರೀತಂ ಗೌಡ ಅವರು ಮಾತನಾಡಿರುವುದು ನಿಜಕ್ಕೂ ಖಂಡನೀಯ. ಆದ್ದರಿಂದ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಹಿರಂಗವಾಗಿ ಕ್ಷಮೆಯಾಚಿಸುವಂತೆ ಘೋಷಣೆ ಕೂಗಿದರು. ಈ ಸಂದರ್ಭದಲ್ಲಿ ಬಿಜೆಪಿಯ ಕೆಲ ಮುಖಂಡರು ಪ್ರೀತಂಗೌಡ ಪರವಾಗಿ ಘೋಷಣೆ ಕೂಗಿದರು. ಇದರಿಂದ ಕುಪಿತಗೊಂಡ ಜೆಡಿಎಸ್‍ನ ಕಾರ್ಯಕರ್ತರು, ಪ್ರೀತಂ ಗೌಡ ಅವರ ಮನೆಗೆ ನುಗ್ಗಲು ಯತ್ನಿಸಿದರು. ಪೊಲೀಸರು ಇವರನ್ನು ತಡೆಯಲು ಹರಸಾಹಸ ಪಡಬೇಕಾಯಿತು. ನಂತರ ಗುಂಪಿನಲ್ಲಿದ್ದಂತಹ ಕೆಲ ಜೆಡಿಎಸ್ ಕಾರ್ಯಕರ್ತರು ಕಲ್ಲು ತೂರಾಟ ನಡೆಸಿದರು. ಇದರಿಂದ ಬಿಜೆಪಿ ಕಾರ್ಯಕರ್ತ ರಾಹುಲ್ ಕೇಣಿಯ ಕಣ್ಣಿನ ಭಾಗಕ್ಕೆ ತೀವ್ರ ಪೆಟ್ಟಾಗಿದ್ದು, ಗಾಯಗೊಂಡ ಆತನನ್ನು ತಕ್ಷಣವೇ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಯಿತು. ಮನೆ ಮುಂದೆ ಇದ್ದ ಕಾರಿಗೂ ಕೂಡ ಕಲ್ಲು ಎಸೆದಿದ್ದು, ಇದರಿಂದ ಪ್ರೀತಂ ಗೌಡ ಅವರ ಮನೆ ಮುಂದೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಪೊಲೀಸರು ಎರಡೂ ಪಕ್ಷದ ಕಾರ್ಯಕರ್ತರನ್ನು ಸಮಾಧಾನಪಡಿಸಲು ಹರಸಾಹಸಪಟ್ಟರು.

'ಜೆಡಿಎಸ್ ವರಿಷ್ಠ ದೇವೇಗೌಡರಿಗೆ ರಾಜಕೀಯದಲ್ಲಿ ಆಗಿರುವಷ್ಟು ಅನುಭವ ಅವರಿಗೆ ವಯಸ್ಸಾಗಿಲ್ಲ. ಸಾಂದರ್ಭಿಕವಾಗಿ ಈ ಕ್ಷೇತ್ರದ ಶಾಸಕರಾಗಿದ್ದಾರೆ. ಅವರ ಬಗ್ಗೆ ಲಘುವಾಗಿ ಮಾತನಾಡಿದವರೆಲ್ಲ ಠೇವಣಿ ಇಲ್ಲದಂತೆ ಹೆಸರಿಲ್ಲದೆ ಕಣ್ಮರೆಯಾಗಿದ್ದಾರೆ. ಪ್ರೀತಂಗೌಡ ಕೂಡಲೆ ಜಿಲ್ಲೆಯ ಜನತೆಯ ಮುಂದೆ ಭಹಿರಂಗವಾಗಿ ಕ್ಷಮೆ ಕೇಳಬೇಕು. ಇಲ್ಲವಾದರೆ ಜಿಲ್ಲೆಯ ಜನತೆ ಧಂಗೆ ಹೇಳಬೇಕಾಗುತ್ತದೆ ಎಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ನಗರಸಭೆಯ ಮಾಜಿ ಶಾಸಕ ಹೆಚ್.ಎಸ್. ಅನಿಲ್‍ ಕುಮಾರ್, ಜೆಡಿಎಸ್ ಮುಖಂಡ ಎಸ್.ದ್ಯಾವೇಗೌಡ, ಜಿಲ್ಲಾ ಪಂಚಾಯತ್ ಸದಸ್ಯ ಸ್ವರೂಪ್, ಗಿರೀಶ್ ಚನ್ನವೀರಪ್ಪ, ಕಮಲ್ ಕುಮಾರ್ ಸೇರಿದಂತೆ ನೂರಾರು ಕಾರ್ಯಕರ್ತರು ಇದ್ದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಎ.ಎನ್ ಪ್ರಕಾಶ್ ಗೌಡ ಅವರು ಶಾಸಕರ ಮನೆಗೆ ಆಗಮಿಸಿ ಪರಿಶೀಲನೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುವ ಭರವಸೆ ನೀಡಿದರು. ಅಲ್ಲದೆ ಶಾಸಕರ ನಿವಾಸಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆಯನ್ನು ಕಲ್ಪಿಸುವುದಾಗಿ ಹೇಳಿದರು. ನಂತರ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ್ ಗೌಡ ಅವರು ಆಸ್ಪತ್ರೆಗೆ ದಾಖಲಾಗಿದ್ದ ಗಾಯಾಳುಗಳನ್ನು ವಿಚಾರಿಸಿದರು.

ಜೆಡಿಎಸ್ ವಿರುದ್ಧ ಹೋರಾಟಕ್ಕೆ ಬಿಜೆಪಿ ಚಿಂತನೆ

ವಿದ್ಯಾನಗರದಲ್ಲಿರುವ ಪ್ರೀತಮ್‍ಗೌಡರ ಮನೆಯಲ್ಲಿ ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರು ಸಭೆ ನಡೆಸುತ್ತಿದ್ದು, ಜೆಡಿಎಸ್‍ನ ವಿರುದ್ದ ಇಂದು ಗುರುವಾರ ಹಾಸನ ಬಂದ್ ಕರೆ ಕೊಡಬೇಕೋ ? ಅಥವಾ ಪ್ರತಿಭಟನೆ ನಡೆಸಬೇಕು ಎಂದು ಚರ್ಚಿಸಲಾಗುತ್ತಿದ್ದು, ಮುಂದಿನ ಹೋರಾಟದ ಬಗ್ಗೆ ಬಿಜೆಪಿ ರೂಪುರೇಷೆ ತಯಾರು ಮಾಡಿಕೊಳ್ಳಲಾಗುತ್ತಿದೆ ಎನ್ನಲಾಗಿದೆ. 

ಬೆಂಗಳೂರಿನಲ್ಲಿರುವ ಪ್ರೀತಮ್ ಗೌಡ ಮಾತನಾಡಿ, ಜೆಡಿಎಸ್‍ನ ಇಂತಹ ಗೂಂಡಾಗಿರಿಗೆ ಹೆದರುವುದಿಲ್ಲ. ಹೆದರುತ್ತೇನೆ ಎಂದು ತಿಳಿದುಕೊಂಡರೆ ಅದು ಜೆಡಿಎಸ್‍ನ ಭ್ರಮೆ. ಇಂತಹ ಗೂಂಡಾಗಿರಿ ಧಮನಗೊಳಿಸುವ ಶಕ್ತಿ ಬಿಜೆಪಿಗಿದೆ. ಇಂತಹ ಪುಂಡಾಟಿಕೆಗೆ ಬೆನ್ನು ತೋರಿ ಓಡಿಹೋಗುವ ವ್ಯಕ್ತಿ ನಾನಲ್ಲ. ನನ್ನ ಹೆತ್ತವರನ್ನು ಕೊಲ್ಲಲು ಜೆಡಿಎಸ್‍ನವರು ಯತ್ನಿಸುತ್ತಿದ್ದಾರೆ. ಈ ಬಗ್ಗೆ ಹಾಸನದಲ್ಲಿ ಸಭೆ ನಡೆಸಿ ಪ್ರತ್ಯುತ್ತರ ನೀಡುತ್ತೇನೆ. ನಮ್ಮ ಬೆಂಬಲಿಗರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವುದನ್ನು ಖಂಡಿಸಿ ಹೋರಾಟ ಮಾಡಲಾಗುವುದು ಎಂದು ಮಾಹಿತಿ ತಿಳಿದು ಬಂದಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News