ಆಕಸ್ಮಿಕ ಬೆಂಕಿ: 150 ಎಕರೆ ಅರಣ್ಯ ಪ್ರದೇಶ ಭಸ್ಮ

Update: 2019-02-13 10:53 GMT

ಚಾಮರಾಜನಗರ,ಫೆ.13: ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿ ದೇಪಾಪುರ ಸಮೀಪದ ಅರಣ್ಯ ಇಲಾಖೆಗೆ ಸೇರಿದ ನೆಡುತೋಪಿಗೆ ಬೆಂಕಿ ಬಿದ್ದು ಸುಮಾರು 150 ಎಕರೆಗೂ ಹೆಚ್ಚಿನ ಪ್ರದೇಶ ಭಸ್ಮವಾಗಿದೆ.

ಬಂಡೀಪುರ ಬಫರ್ ವಲಯಕ್ಕೆ ಸೇರಿದ ನೆಡುತೋಪಿನಲ್ಲಿ ಸುಮಾರು 30 ವರ್ಷಕ್ಕೂ ಹಳೆಯ ಮರಗಳು ಒಣಗಿ ನಿಂತಿದ್ದರೂ ಇದನ್ನು ತೆರವುಗೊಳಿಸಿಲ್ಲ. ಮಧ್ಯಾಹ್ನದ ವೇಳೆಗೆ ಕಾಣಿಸಿಕೊಂಡ ಬೆಂಕಿ ನಂದಿಸಲು ಅರಣ್ಯ ಸಿಬ್ಬಂದಿ ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಸಮೀಪದ ಗೋಮಾಳ, ಕಾಡಂಚಿನ ಜಮೀನುಗಳು, ಒಣಗಿದ ಹುಲ್ಲು, ಗಿಡಗಳನ್ನು ಸುಡುತ್ತಾ ಸಾಗಿದ ಬೆಂಕಿ ಒಣಮರಗಳಿಗೂ ಹರಡಿ ಇಡೀ ಅರಣ್ಯಪ್ರದೇಶವೇ ಹೊಗೆಯಿಂದ ಆವರಿಸಿತು. ಅಗ್ನಿಶಾಮಕ ದಳದ ನೆರವಿನಿಂದ ಸುಮಾರು ಎರಡು ಗಂಟೆಗಳಿಗೂ ಹೆಚ್ಚಿನ ಕಾರ್ಯಾಚರಣೆ ನಡೆಸಿದ ನಂತರ ಬೆಂಕಿಯು ಹರಡುವುದನ್ನು ನಿಯಂತ್ರಿಸಲಾಯಿತು.

ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ದಳದ ಚೆಲುವರಾಜು, ಬಫರ್ ವಲಯದ ಆರ್.ಎಫ್.ಒ. ರಾಜೇಶ್, ತೆರಕಣಾಂಬಿ ಠಾಣೆಯ ಸಿಬ್ಬಂದಿ ಹಾಗೂ ಅರಣ್ಯ ಸಿಬ್ಬಂದಿಗಳು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News