ದೇಶ ಪ್ರಗತಿಪಥದತ್ತ ಸಾಗಲು ಯುವಜನತೆ ಓದುವುದು ಅತ್ಯಗತ್ಯ: ಸಾಹಿತಿ ಕುಂದೂರು ಅಶೋಕ್

Update: 2019-02-13 11:54 GMT

ಚಿಕ್ಕಮಗಳೂರು, ಫೆ.13: ದೇಶ ಪ್ರಗತಿಪಥದತ್ತ ಓಡಬೇಕಾದರೆ ಯುವಜನತೆ ಹೆಚ್ಚು ಹೆಚ್ಚು ಓದಬೇಕು. ವಿದ್ಯಾರ್ಥಿಗಳು ಜ್ಞಾನವನ್ನು ವಿಸ್ತರಿಸಿಕೊಳ್ಳಬೇಕಾದರೆ ಸಾಹಿತ್ಯದ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಕುಂದೂರು ಅಶೋಕ್ ಸಲಹೆ ಮಾಡಿದರು.

ಉದ್ಭವ ಪ್ರಕಾಶನ ಟ್ರಸ್ಟ್ ಮತ್ತು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ನಗರದ ಎಂಇಎಸ್ ಕಾಲೇಜಿನ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ಸಾಹಿತಿ ಬೆಳವಾಡಿ ಮಂಜುನಾಥ್ ಅವರ ಸಾಹಿತ್ಯ ಮತ್ತು ಕಾವ್ಯಾನುಸಂಧಾನ ಪುಸ್ತಕಗಳ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಅಮೇರಿಕಾ, ಫ್ರಾನ್ಸ್, ಜಪಾನ್ ಸೇರಿದಂತೆ ಅನೇಕ ರಾಷ್ಟ್ರಗಳು ಪ್ರಗತಿ ಪಥದಲ್ಲಿ ಓಡುತ್ತಿರುವುದಕ್ಕೆ ಮೂಲಕಾರಣ ಅವು ಓದುವ ದೇಶಗಳಾಗಿರುವುದು, ಅದೇ ರೀತಿ ನಮ್ಮ ರಾಷ್ಟ್ರವೂ ಓಡಬೇಕಾದರೆ ನಮ್ಮ ವಿದ್ಯಾರ್ಥಿಗಳು ಓದಬೇಕು ಎಂದು ಕಿವಿಮಾತು ಹೇಳಿದ ಅವರು, ತಂತ್ರಜ್ಞಾನ ಬಂದ ಮೇಲೆ ನಮ್ಮಲ್ಲಿ ಓದುವ ಹವ್ಯಾಸ ಕ್ಷೀಣಿಸುತ್ತಿದೆ. ಸಾಹಿತ್ಯದ ಓದು ಬದುಕನ್ನು ರೂಪಿಸುತ್ತದೆ ಎಂದ ಅವರು ಸಮಕಾಲೀನ ಪುಸ್ತಕಗಳನ್ನು ಓದುವ ಮೂಲಕ ನಮ್ಮನ್ನು ನಾವು ಅಪ್‍ಡೇಟ್ ಮಾಡಿಕೊಳ್ಳಬೇಕು. ಇಲ್ಲದಿದ್ದಲ್ಲಿ ನಾವು ಔಟ್‍ಡೇಟೆಡ್‍ಗಳಾಗಿ ಬಿಡುತ್ತೇವೆ ಎಂದು ಎಚ್ಚರಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕಾಲೇಜಿನ ಗೌರವ ಕಾರ್ಯದರ್ಶಿ ಡಾ.ಡಿ.ಎಲ್.ವಿಜಯ ಕುಮಾರ್, ವಿದ್ಯಾರ್ಜನೆಗೆ ಅಗತ್ಯವಾದ ಸಂಪತ್ತು ಸಾಹಿತ್ಯದ ಪುಸ್ತಕಗಳು. ಅವು ಮುಂದಿನ ತಲೆಮಾರಿಗೆ ತಲುಪಬೇಕಾದರೆ ಹೆಚ್ಚು ಬಿಡುಗಡೆಯಾಗಬೇಕು ಎಂದರು.

ಪುಸ್ತಕಗಳನ್ನು ಬಿಡುಗಡೆಗೊಳಿಸಿ ಮಾತನಾಡಿದ ಪದವಿ ಕಾಲೇಜಿನ ಪ್ರಾಚಾರ್ಯ ಡಾ.ವಿಷ್ಣುವರ್ಧನ್ ಬೆಳವಾಡಿ, ಮಂಜುನಾಥ್ ಅವರ ವಿಮರ್ಶಾ ಗ್ರಂಥಗಳು ವಿದ್ಯಾರ್ಥಿಗಳಿಗೆ ಹೆಚ್ಚು ಆಸಕ್ತಿಯನ್ನು ಉಂಟು ಮಾಡುವ ಪುಸ್ತಕಗಳಾಗಿವೆ ಎಂದು ಹೇಳಿದರು.

ಪುಸ್ತಕಗಳ ಕುರಿತು ಮಾತನಾಡಿದ ಐಡಿಎಸ್‍ಜಿ ಕಾಲೇಜಿನ ಸಹಪ್ರಾಧ್ಯಾಪಕ ಡಾ.ಎಚ್.ಎಂ.ಮಹೇಶ್, ಕವಿ ಮತ್ತು ಕಾವ್ಯವನ್ನು ಓದುಗರಿಗೆ ಸಮರ್ಥವಾಗಿ ತಲುಪಿಸುವಲ್ಲಿ ಬೆಳವಾಡಿ ಮಂಜುನಾಥ್ ಅವರು ಈ ಕೃತಿಗಳ ಮೂಲಕ ಸಂಪರ್ಕ ಸೇತುವಾಗಿದ್ದಾರೆ ಎಂದು ತಿಳಿಸಿದರು.

ಸಾಹಿತಿ ಬೆಳವಾಡಿ ಮಂಜುನಾಥ್ ಮಾತನಾಡಿ, ನಾನು ಓದುವ ಸಂದರ್ಭದಲ್ಲಿ ದೊರಕಿದ ಪ್ರೊ.ಎ.ಎಸ್.ಕಾಳೇಗೌಡರ ಪ್ರೋತ್ಸಾಹದಿಂದಾಗಿ ಸಾಹಿತ್ಯ ಕ್ಷೇತ್ರದಲ್ಲಿ ಬೆಳೆಯಲು ಸಾಧ್ಯವಾಯಿತು ಎಂದರು.

ಇದೇ ವೇಳೆ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಸಾಹಿತಿ ಬೆಳವಾಡಿ ಮಂಜುನಾಥ್ ಅವರನ್ನು ಸನ್ಮಾನಿಸಲಾಯಿತು. ಉದ್ಭವ ಪ್ರಕಾಶನದ ವ್ಯವಸ್ಥಾಪಕ ಟ್ರಸ್ಟಿ ನಟರಾಜ್ ಅಧ್ಯಕ್ಷತೆ ವಹಿಸಿದ್ದರು. ಮೂಡಿಗೆರೆ ಪ್ರಾಥಮಿಕ ಕೃಷಿ ಸಹಕಾರಿ ಬ್ಯಾಂಕ್‍ನ ಅಧ್ಯಕ್ಷ ಹಳಸೆ ಶಿವಣ್ಣ, ಕಾಲೇಜಿನ ಆಡಳಿತಾಧಿಕಾರಿ ಎಸ್.ಶಾಂತಕುಮಾರಿ, ತಾ.ಕಸಾಪ ಅಧ್ಯಕ್ಷ ಹಿರೇಮಗಳೂರು ಪುಟ್ಟಸ್ವಾಮಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News