ಯಾವುದೇ ಜಾತಿ, ಧರ್ಮಕ್ಕೆ ಸೇರಿದವರಲ್ಲವೆಂಬ ಪ್ರಮಾಣ ಪತ್ರ ಪಡೆದ ಮಹಿಳೆ

Update: 2019-02-14 07:34 GMT

ಚೆನ್ನೈ, ಫೆ.14: ತಿರುಪತ್ತೂರಿನ ಎಂ.ಎ. ಸ್ನೇಹಾ ತಾವು ಯಾವುದೇ ಜಾತಿ ಧರ್ಮಕ್ಕೆ ಸೇರಿದವರಲ್ಲವೆಂಬ ಅಧಿಕೃತ ಪ್ರಮಾಣಪತ್ರವನ್ನು ಕೊನೆಗೂ ಫೆಬ್ರವರಿ 5ರಂದು ಪಡೆದಿದ್ದು, ಇದು ಅವರು ಈ ನಿಟ್ಟಿನಲ್ಲಿ ನಡೆಸಿದ ದೀರ್ಘ ಕಾಲದ ಹೋರಾಟಕ್ಕೆ ಸಂದ ಜಯವಾಗಿದೆ. ಇಂತಹ ಪ್ರಮಾಣಪತ್ರವನ್ನು ಇದೇ ಮೊದಲ ಬಾರಿಗೆ ನೀಡಲಾಗಿದೆ.

ಮೂವತ್ತೈದು ವಯಸ್ಸಿನ ಸ್ನೇಹಾ ವೃತ್ತಿಯಲ್ಲಿ ವಕೀಲೆಯಾಗಿದ್ದು, ಆಕೆಯ ಹೆತ್ತವರು ಕೂಡ ಯಾವುದೇ ಜಾತಿ ಧರ್ಮವನ್ನು ನಂಬಿಲ್ಲ ಹಾಗೂ ಎಲ್ಲಾ ಅರ್ಜಿಗಳಲ್ಲೂ ಈ ಅಂಕಣವನ್ನು ಖಾಲಿ ಬಿಡುತ್ತಿದ್ದರು. ಸ್ನೇಹಾ ಕೂಡ ಇದನ್ನೇ ಅನುಸರಿಸಿಕೊಂಡು ಬಂದಿದ್ದರು.

ಫೆಬ್ರವರಿ 5ರಂದು ತಿರುಪತ್ತೂರಿನ ತಹಶೀಲ್ದಾರ್ ಟಿ.ಎಸ್. ಸತ್ಯಮೂರ್ತಿ ಅವರಿಗೆ ಈ ಪ್ರಮಾಣ ಪತ್ರ ನೀಡಿದ್ದು, ಇದು ಸಾಮಾಜಿಕ ಪರಿವರ್ತನೆಯತ್ತ ಒಂದು ಹೆಜ್ಜೆಯಾಗಿದೆ ಎಂದು ಸ್ನೇಹ ನಂಬಿದ್ದಾರೆ.

ಸ್ನೇಹಾರ ಜನನ ಮತ್ತು ಶಾಲಾ ಪ್ರಮಾಣಪತ್ರಗಳಲ್ಲೂ ಜಾತಿ ಧರ್ಮ ನಮೂದಿಸಿಲ್ಲ. ಆದರೆ ಯಾವುದೇ ಅರ್ಜಿ ಸಲ್ಲಿಸುವಾಗ ಜಾತಿ, ಧರ್ಮ ಕೇಳುವುದರಿಂದ ಆಕೆ ಅಫಿಡವಿಟ್ ಸಲ್ಲಿಸುವುದು ಅಗತ್ಯವಾಗಿತ್ತು. ಆಗ ಆಕೆ ತಾನು ಯಾವುದೇ ಜಾತಿ ಧರ್ಮಕ್ಕೆ ಸೇರಿದವಳಲ್ಲ ಎಂಬ ಪ್ರಮಾಣಪತ್ರ ಪಡೆಯಲು ನಿರ್ಧರಿಸಿದ್ದರು.

ಈ ನಿಟ್ಟಿನಲ್ಲಿ ಆಕೆ 2010ರಿಂದ ಹೋರಾಟ ಆರಂಭಿಸಿ ಅನೇಕ ಅರ್ಜಿ ಸಲ್ಲಿಸಿದ್ದರೂ ಅವುಗಳನ್ನು ತಿರಸ್ಕರಿಸಲಾಗಿತ್ತು. ಕೊನೆಗೆ 2017ರಲ್ಲಿ ಆಕೆ ಮುಖತಃ ಅಧಿಕಾರಿಗಳನ್ನು ಕಂಡು ತನ್ನ ನಿಲುವನ್ನು ಸಮರ್ಥಿಸಿದ್ದರಲ್ಲದೆ, ತಾವು ಯಾವುದೇ ಸರಕಾರಿ ಯೋಜನೆಗಳ ಯಾ ಮೀಸಲಾತಿಯ ಫಲಾನುಭವಿಯಲ್ಲ ಎಂದೂ ಸ್ಪಷ್ಟ ಪಡಿಸಿದ್ದರು.

ಕೊನೆಗೆ ತಿರುಪತ್ತೂರಿನ ಸಬ್-ಕಲೆಕ್ಟರ್ ಬಿ ಪ್ರಿಯಾಂಕ ಪಂಕಜಂ ಆಕೆಯ ಅರ್ಜಿಗಳನ್ನು ಪರಿಗಣಿಸಿ ಆಕೆಯ ಎಲ್ಲಾ ಶಾಲಾ ಕಾಲೇಜು ದಾಖಲೆಗಳನ್ನು ಪರಿಶೀಲಿಸಿ ಎಲ್ಲ ಕಡೆಯೂ ಜಾತಿ ಧರ್ಮವನ್ನು ನಮೂದಿಸಿಲ್ಲವೆಂದು ದೃಢ ಪಡಿಸಿಕೊಂಡ ನಂತರ ಆಕೆಗೆ ಪ್ರಮಾಣ ಪತ್ರ ನೀಡಲು ತೀರ್ಮಾನಿಸಲಾಯಿತು.

ತಮ್ಮ ಮೂವರು ಹೆಣ್ಣು ಮಕ್ಕಳ ಶಾಲಾ ಅರ್ಜಿಗಳಲ್ಲೂ ಸ್ನೇಹಾ ಜಾತಿ ಧರ್ಮ ನಮೂದಿಸಿಲ್ಲ. ಅವರ ಹೆಸರುಗಳು ಎರಡು ಧರ್ಮಗಳ ಹೆಸರುಗಳನ್ನು ಹೊಂದಿವೆ-ಆಧಿರೈ ನಸ್ರೀನ್, ಆಧಿಲಾ ಐರೀನ್ ಹಾಗೂ ಆರಿಫಾ ಜೆಸ್ಸಿ. ಸ್ನೇಹಾರ ಪತಿ ಕೆ. ಪಾರ್ಥಿಬಾ ರಾಜಾ ತಮಿಳು ಪ್ರೊಫೆಸರ್ ಆಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News