ಅನಿಲ್ ಅಂಬಾನಿ ಕುರಿತಾದ ಆದೇಶ ತಿರುಚಿದ ಸುಪ್ರೀಂ ಕೋರ್ಟ್ ನ ಇಬ್ಬರು ಅಧಿಕಾರಿಗಳು ಅಮಾನತು

Update: 2019-02-14 09:00 GMT

ಹೊಸದಿಲ್ಲಿ, ಫೆ. 14: ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ರಿಲಯನ್ಸ್ ಕಮ್ಯುನಿಕೇಶನ್ಸ್ ಅಧ್ಯಕ್ಷ ಅನಿಲ್ ಅಂಬಾನಿ ಪರ ಇರುವಂತೆ ಕಾಣುವ ಸಲುವಾಗಿ ಕೋರ್ಟ್ ಆದೇಶವನ್ನು ತಿರುಚುವ ಕೆಲಸದಲ್ಲಿ ಶಾಮೀಲಾಗಿದ್ದಾರೆಂದು ಕಂಡು ಬಂದ ಇಬ್ಬರು ಸಹಾಯಕ ರಿಜಿಸ್ಟ್ರಾರ್ ರನ್ನು  ಸುಪ್ರೀಂ ಕೋರ್ಟ್ ಅಮಾನತುಗೊಳಿಸಿದೆ.

ನ್ಯಾಯಾಧೀಶರು ಆದೇಶವನ್ನು ಬರೆದ ನಂತರ ಅದನ್ನು ವೆಬ್ ಸೈಟ್ ನಲ್ಲಿ ಅಪ್ ಲೋಡ್ ಮಾಡಿದ್ದ ಈ ಇಬ್ಬರನ್ನು ಅಮಾನತುಗೊಳಿಸುವ ಆದೇಶವನ್ನು ಬುಧವಾರ ಮುಖ್ಯ ನ್ಯಾಮೂರ್ತಿ ರಂಜನ್ ಗೊಗೊಯಿ ಹೊರಡಿಸಿದ್ದಾರೆ.

ಅನಿಲ್ ಅಂಬಾನಿಯ ವಿರುದ್ಧದ ನ್ಯಾಯಾಂಗ ನಿಂದನೆ ಪ್ರಕರಣವನ್ನು ವಿಚಾರಣೆ ನಡೆಸುತ್ತಿರುವ ಜಸ್ಟಿಸ್ ರೋಹಿಂಟನ್ ಎಫ್ ನಾರಿಮನ್  ಅವರ ದೂರಿನ ಆಧಾರದಲ್ಲಿ ಮುಖ್ಯ ನ್ಯಾಯಮೂರ್ತಿ ಮೇಲಿನ ಕ್ರಮವನ್ನು ಸಂವಿಧಾನದ ಅನುಚ್ಛೇದ 311 ಹಾಗೂ  ಸೆಕ್ಷನ್ 11(13) ಅನ್ವಯ ಕೈಗೊಂಡಿದ್ದಾರೆ.

ಎರಿಕ್ಸನ್ ಇಂಡಿಯಾಗೆ ಬಾಕಿ ಪಾವತಿ ಮಾಡಲು ವಿಫಲವಾದ ಅನಿಲ್ ಅಂಬಾನಿಗೆ ಜನವರಿ ತಿಂಗಳಲ್ಲಿ ಜಸ್ಟಿಸ್ ನಾರಿಮನ್ ಶೋಕಾಸ್ ನೋಟಿಸ್  ನೀಡಿದ ಸಂದರ್ಭ ಈ ಘಟನೆ ನಡೆದಿತ್ತೆನ್ನಲಾಗಿದೆ.

ಸುಪ್ರೀಂ ಕೋರ್ಟ್ ವೆಬ್ ಸೈಟ್ ನಲ್ಲಿ ಜ. 7ರಂದು ಅಪ್ ಲೋಡ್ ಮಾಡಿದ ಆದೇಶದಲ್ಲಿ ನ್ಯಾಯಾಂಗ ನಿಂದನೆ ಗೈದಿದ್ದರಾರೆನ್ನಲಾದವರಿಗೆ ಮುಖತಃ ಹಾಜರಾತಿಯಿಂದ ವಿನಾಯಿತಿ ನೀಡಲಾಗಿದೆ'' ಎಂಬರ್ಥದಲ್ಲಿ ಬರೆಯಲಾಗಿತ್ತು. ಇದರರ್ಥ ಮುಂದಿನ ವಿಚರಣೆ ವೇಳೆ ಅಂಬಾನಿ ಹಾಜರಿ ಅಗತ್ಯವಿಲ್ಲವೆಂದಾಗಿದೆ.

ಆದರೆ ಇಂತಹ ನೋಟಿಸ್ ಜಾರಿ ಸಂದರ್ಭ ಸಂಬಂಧಿತರು ಮುಂದಿನ ವಿಚಾರಣೆ ವೇಳೆ ಹಾಜರಾಗುವುದು ಕಡ್ಡಾಯವಾಗಿದೆ. ಅಂಬಾನಿಗೆ ಮುಖತಃ ಹಾಜರಾತಿಯಿಂದ ವಿನಾಯಿತಿ ನೀಡಲಾಗಿಲ್ಲ ಎಂದು ಜಸ್ಟಿಸ್ ನಾರಿಮನ್ ಸ್ಪಷ್ಟ ಪಡಿಸಿರುವ ಹೊರತಾಗಿಯೂ ತಪ್ಪಾಗಿ ವೆಬ್ ಸೈಟ್ ನಲ್ಲಿ ಅಪ್ ಲೋಡ್ ಮಾಡಿದ್ದನ್ನು ಜಸ್ಟಿಸ್ ನಾರಿಮನ್ ನಂತರ ಗಮನಿಸಿ ಜ.10ರಂದು ಅದನ್ನು ತಿದ್ದುಪಡಿ ಮಾಡಿ ಅಪ್ ಲೋಡ್ ಮಾಡಿದ್ದರು.

ನಂತರ ಅವರು ಈ ಬಗ್ಗೆ ನ್ಯಾಯಾಲಯದ ಅಧಿಕಾರಿಗಳ ವಿರುದ್ಧ ತನಿಖೆ ಬಯಸಿದ್ದರು. ಅಂತೆಯೇ ಕೋರ್ಟ್ ಸಹಾಯಕ ರಿಜಿಸ್ಟ್ರಾರುಗಳಾದ ಮಾನವ್ ಶರ್ಮ ಮತ್ತು ತಪನ್ ಕುಮಾರ್ ಚಕ್ರವರ್ತಿ ಅವರನ್ನು  ಬುಧವಾರ ಸಂಜೆ ಅಮಾನತುಗೊಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News