ತಂದೆ ಸತ್ತು ಒಂದು ತಿಂಗಳ ನಂತರವೂ ದೇಹವನ್ನು ಮನೆಯಲ್ಲಿಟ್ಟಿರುವ ಹಿರಿಯ ಪೊಲೀಸ್ ಅಧಿಕಾರಿ!

Update: 2019-02-14 10:10 GMT

ಭೋಪಾಲ್, ಫೆ.14: ವಿಚಿತ್ರ ವಿದ್ಯಮಾನವೊಂದರಲ್ಲಿ ಭೋಪಾಲದ ಖಾಸಗಿ ಆಸ್ಪತ್ರೆಯಲ್ಲಿ ಜನವರಿ 14ರಂದು ಮೃತಪಟ್ಟಿದ್ದಾರೆ ಎಂದು ಘೋಷಿಸಲ್ಪಟ್ಟ ತಮ್ಮ 84 ವರ್ಷದ ತಂದೆ ಇನ್ನೂ ಜೀವಂತವಾಗಿದ್ದಾರೆ ಎಂದು ಮಧ್ಯ ಪ್ರದೇಶದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿ-ಆಯ್ಕೆ) ರಾಜೇಂದ್ರ ಕುಮಾರ್ ಮಿಶ್ರಾ ನಂಬಿದ್ದಾರೆ. ಅಷ್ಟೇ ಅಲ್ಲ ತಮ್ಮ ತಂದೆ ಆರ್ಯುವೇದಿಕ್ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆಂದೂ ಅವರು ನಂಬಿದ್ದಾರೆ.

ಆದರೆ ಮೃತದೇಹ ಕೊಳೆತ ಕಾರಣ ಮನೆಯಲ್ಲಿ ಎದ್ದಿರುವ ದುರ್ವಾಸನೆಯಿಂದ ತಮಗೆ ಅನಾರೋಗ್ಯ ಕಾಡುತ್ತಿದೆ ಎಂದು ಹೇಳಿಕೊಂಡು ಪೊಲೀಸ್ ಅಧಿಕಾರಿಯ ಮನೆಯ ಆಳುಗಳು ರಜೆ ಹಾಕಿದ ನಂತರವಷ್ಟೇ ಈ ವಿಚಿತ್ರ ಘಟನೆ ಬೆಳಕಿಗೆ ಬಂದಿತ್ತು.

ಜನವರಿ 14ರಂದು ಮಿಶ್ರಾ ಅವರ ತಂದೆ ಶ್ವಾಸಕೋಶದ ಸಮಸ್ಯೆಯಿಂದ ಸಾವನ್ನಪ್ಪಿದ್ದರು. ಇದಾದ ನಂತರ ಅವರ ಅಂತ್ಯಕ್ರಿಯೆ ನಡೆಯುವುದೆಂಬ ಸುದ್ದಿ ಪೊಲೀಸ್ ಅಧಿಕಾರಿಗಳ ವಾಟ್ಸ್ ಅಪ್ ಗ್ರೂಪಿನಲ್ಲಿ ಮೆಸೇಜ್ ರೂಪದಲ್ಲಿ ಬಂದಿದ್ದರೂ ನಂತರ ಅದನ್ನು ಡಿಲೀಟ್ ಮಾಡಲಾಗಿತ್ತು.

ಈ ವಿಚಿತ್ರ ಘಟನೆಗೆ ಹೇಗೆ ಪ್ರತಿಕ್ರಿಯಿಸಬೇಕೆಂಬುದೇ ಅಧಿಕಾರಿಗಳಿಗೆ ಹೊಳೆಯುತ್ತಿಲ್ಲ.

ಮಿಶ್ರಾ ತಂದೆಯನ್ನು ದಾಖಲಿಸಿದ್ದ ಆಸ್ಪತ್ರೆ ಮರಣ ಪ್ರಮಾಣ ಪತ್ರ ಕೂಡ ನೀಡಿದೆ. ರಾಜ್ಯ ಫೊರೆನ್ಸಿಕ್ ಇಲಾಖೆಯ ಮಾಜಿ ಮುಖ್ಯಸ್ಥ ಡಾ ಡಿ ಕೆ ಸತ್ಪತಿ ಪ್ರತಿಕ್ರಿಯಿಸಿ, “ನಾನು ಒಮ್ಮೆ ಅವರ ಮನೆಗೆ ಹೋಗಿದ್ದಾಗ ಅವರ ತಂದೆ ಜೀವಂತವಾಗಿರಲಿಲ್ಲ. ಆಗ ದೇಹ ಕೊಳೆತಿರಲಿಲ್ಲ. ಅವರು ಸಮಾಧಿ ಸ್ಥಿತಿಯಲ್ಲಿದ್ದಾರೆಂದು ಕುಟುಂಬ ನಂಬಿದೆ” ಎಂದಿದ್ದಾರೆ.

ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಿಶ್ರಾ ಜತೆ ಈ ವಿಚಾರ ಮಾತನಾಡಲಿದ್ದಾರೆಂದು ರಾಜ್ಯ ಡಿಜಿಪಿ ವಿ ಕೆ ಸಿಂಗ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News