ಶಾಸಕನ ಮನೆ ಮೇಲೆ ದಾಳಿ ಪ್ರಕರಣ: ಮಡಿಕೇರಿಯಲ್ಲಿ ಬಿಜೆಪಿ ಪ್ರತಿಭಟನೆ

Update: 2019-02-14 12:13 GMT

ಮಡಿಕೇರಿ, ಫೆ.14 : ಹಾಸನದಲ್ಲಿ ಬಿಜೆಪಿ ಶಾಸಕನ ಮನೆಯ ಮೇಲಿನ ಜೆಡಿಎಸ್ ಕಾರ್ಯಕರ್ತರ ದಾಳಿಗೆ ಪ್ರೇರೇಪಣೆ ನೀಡುವ ಮೂಲಕ ರಾಜ್ಯ ಸರ್ಕಾರ ಗೂಂಡಾವರ್ತನೆ ತೋರಿದ್ದು, ಸರ್ಕಾರವನ್ನು ವಜಾಗೊಳಿಸುವಂತೆ ಒತ್ತಾಯಿಸಿ ನಗರದ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಬಿಜೆಪಿಯಿಂದ ಪ್ರತಿಭಟನೆ ನಡೆಯಿತು.

ನಗರದ ಜನರಲ್ ತಿಮ್ಮಯ್ಯ ವೃತ್ತದ ಬಳಿ ಸಮಾವೇಶಗೊಂಡ ಬಿಜೆಪಿ ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಪ್ರತಿಭಟನೆ ನಡೆಸಿದ್ದಲ್ಲದೆ, ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಮೆರವಣಿಗೆಯ ಮೂಲಕ ಸಾಗಿ ಕೆಲ ಕಾಲ ಧರಣಿ ನಡೆಸಿ ಜಿಲ್ಲಾಡಳಿತದ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿ, ಶಾಸಕರ ಮನೆಯ ಮೇಲೆ ದಾಳಿ ನಡೆಸಿದ ಜೆಡಿಎಸ್ ಕಾರ್ಯಕರ್ತರನ್ನು ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮನು ಮುತ್ತಪ್ಪ ಈ ಸಂದರ್ಭ ಮಾತನಾಡಿ, ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರವನ್ನು ನಡೆಸಲು ಜೆಡಿಎಸ್-ಕಾಂಗ್ರೆಸ್ ಹೆಣಗಾಡುತ್ತಿವೆ. ತಮ್ಮೊಳಗಿನ ಭಿನ್ನಾಭಿಪ್ರಾಯಗಳನ್ನು ಮರೆಮಾಚಲಿಕ್ಕಾಗಿ ರಾಜ್ಯದ ಜವಾಬ್ದಾರಿ ಸ್ಥಾನದಲ್ಲಿರುವ ಕುಮಾರಸ್ವಾಮಿ ಅವರು ನಾಡಿನ ಜನತೆಗೆ ಹಾಗೂ ಜೆಡಿಎಸ್ ಪಕ್ಷದ ಕಾರ್ಯಕರ್ತರಿಗೆ ದಂಗೆ ಏಳಲು ಕರೆ ನೀಡುವ ಮೂಲಕ ತಮ್ಮ ನೀಚ ರಾಜಕೀಯವನ್ನು ಪ್ರದರ್ಶಿಸುತ್ತಿದ್ದು, ಇಂತಹ ಸರ್ಕಾರ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇರಬಾರದೆಂದು ನುಡಿದರು. 

ಬೆಳಗಾವಿಯಲ್ಲಿ ರೈತ ಪರ ಹೋರಾಟ ನಡೆಯುತ್ತಿದ್ದ ಸಂದರ್ಭ ಮುಖ್ಯಮಂತ್ರಿಯವರು ಮಹಿಳಾ ಕುಲಕ್ಕೆ ಅವಮಾನ ಮಾಡುವ ಮೂಲಕ ಭಾರತೀಯ ಸಂಸ್ಕೃತಿಗೆ ಅಪಮಾನ ಮಾಡಿದ್ದು, ಅವರು ಅಂದೇ ರಾಜೀನಾಮೆ ನೀಡಬೇಕಿತ್ತೆಂದು ಅಭಿಪ್ರಾಯಿಸಿದ ಅವರು, ಜಿಲ್ಲೆಯಲ್ಲಿಯೂ ಸಮ್ಮಿಶ್ರ ಸರ್ಕಾರ ಬಂದ ನಂತರ ಮರಗೋಡಿನಲ್ಲಿ ಜೆಡಿಎಸ್ ಸದಸ್ಯನೊಬ್ಬನಿಂದ ಬಿಜೆಪಿ ನಾಯಕನ ಹತ್ಯೆ ನಡೆದಿದೆ. ಇದೀಗ ಹಾಸನದ ಬಿಜೆಪಿ ಯುವ ಶಾಸಕ ಪ್ರೀತಂ ಗೌಡ ಅವರ ಮನೆ ಮೇಲೆ ಜೆಡಿಎಸ್ ಕಾರ್ಯಕರ್ತರು ದಾಳಿ ನಡೆಸಿ ಗೂಂಡಾವರ್ತನೆ ತೋರಿದ್ದಾರೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ತಕ್ಷಣ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಬಿ.ಭಾರತೀಶ್ ಮಾತನಾಡಿ, ರಾಜ್ಯದ ಸಮ್ಮಿಶ್ರ ಸರ್ಕಾರ ಸ್ಥಿರ ಆಡಳಿತ ನೀಡುತ್ತಿಲ್ಲವೆಂದು ಆರೋಪಿಸಿ, ದ್ವೇಷ ಅಸೂಯೆಯಿಂದ ಹಾಸನದ ಶಾಸಕ ಪ್ರೀತಂ ಗೌಡರ ಮನೆ ಮೇಲೆ ದಾಳಿ ನಡೆಸುವ ಮೂಲಕ ಯುವ ಶಾಸಕನ ಸ್ಥೈರ್ಯ ಕುಗ್ಗಿಸುವ ಕಾರ್ಯ ಮಾಡಲಾಗಿದೆಯೆಂದು ಆರೋಪಿಸಿದರು. 

ಪ್ರತಿಭಟನೆಯಲ್ಲಿ ಬಿಜೆಪಿ ಮಡಿಕೇರಿ ನಗರಾಧ್ಯಕ್ಷ ಮಹೇಶ್ ಜೈನಿ, ನಗರಾಧ್ಯಕ್ಷೆ ಅನಿತಾ ಪೂವಯ್ಯ, ನಗರಸಭಾ ಉಪಾಧ್ಯಕ್ಷ ಟಿ.ಎಸ್.ಪ್ರಕಾಶ್, ಸ್ಥಾಯಿ ಸಮಿತಿ ಅಧ್ಯಕ್ಷ ಉಣ್ಣಿಕೃಷ್ಣ, ಪ್ರಮುಖರಾದ ರವಿ ಕುಶಾಲಪ್ಪ, ಯಮುನಾ ಚಂಗಪ್ಪ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News