ವಿದ್ಯಾರ್ಥಿನಿಯ ಅತ್ಯಾಚಾರ, ಕೊಲೆ ಪ್ರಕರಣ: ಸಿದ್ದಾಪುರದಲ್ಲಿ ಬೃಹತ್ ಪ್ರತಿಭಟನೆ

Update: 2019-02-14 12:56 GMT

ಸಿದ್ದಾಪುರ (ಕೊಡಗು), ಫೆ.14: ಇತ್ತೀಚಿಗೆ ವಿದ್ಯಾರ್ಥಿನಿಯನ್ನು ಅಪಹರಿಸಿ ಅತ್ಯಾಚಾರ ನಡೆಸಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿದ್ದಾಪುರದಲ್ಲಿ ಜಸ್ಟಿಸ್ ಫಾರ್ ಸಂಧ್ಯಾ ಹೋರಾಟ ಸಮಿತಿ ಹಾಗೂ ಸಾರ್ವಜನಿಕರು ಸೇರಿ ಬಸ್ ನಿಲ್ದಾಣದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಘಟನೆಯನ್ನು ಖಂಡಿಸಿದರು.

ಅತ್ಯಾಚಾರ ಎಸಗಿದ ಆರೋಪಿಗಳಿಗೆ ತ್ವರಿತಗತಿಯಲ್ಲಿ ವಿಚಾರಣೆ ನಡೆಸಿ ಗಲ್ಲು ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿದ ಪ್ರತಿಭಟನಾಕಾರರು ಜಿಲ್ಲೆಯಲ್ಲಿರುವ ಪಶ್ಚಿಮ ಬಂಗಾಳ ಹಾಗೂ ಅಸ್ಸಾಂ ಸೇರಿದಂತೆ ಹೊರ ರಾಜ್ಯಗಳ ಕಾರ್ಮಿಕರನ್ನು ಗಡಿಪಾರು ಮಾಡುವ ಮೂಲಕ ಹೊರ ರಾಜ್ಯಗಳ ಕಾರ್ಮಿಕರಿಗೆ ಆಶ್ರಯ ನೀಡಿರುವ ಬೆಳೆಗಾರರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಬೇಕೆಂದು ಜಿಲ್ಲಾಡಳಿತವನ್ನು ಒತ್ತಾಯಿಸಿದರು. 

ಗ್ರಾ.ಪಂ ಕಚೇರಿಯಿಂದ ಮೆರವಣಿಗೆ ಮೂಲಕ ಬಸ್ ನಿಲ್ದಾಣದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಸಂಧ್ಯಾಳ ಕುಟುಂಬಕ್ಕೆ ಸರಕಾರ ರೂ 25 ಲಕ್ಷ ಪರಿಹಾರದೊಂದಿಗೆ ಕುಟುಂಬದ ಸದಸ್ಯನೋರ್ವನಿಗೆ ಸರಕಾರಿ ಕೆಲಸ ನೀಡಬೇಕು. ಇಂತಹ ಅತ್ಯಾಚಾರಿ ಆರೋಪಿಗಳಿಗೆ ಕಠಿಣ ಕಾನೂನು ರೂಪಿಸಿ ಶಕ್ಷೆ ವಿಧಿಸಬೇಕೆಂದು ಒತ್ತಾಯಿಸಿದರು. 

ಜಿಲ್ಲಾಧಿಕಾರಿಗಳು ಪೊಲೀಸ್ ವರಿಷ್ಠಾಧಿಕಾರಿಗಳು ಸ್ಥಳಕ್ಕೆ ಆಗಮಿಸಬೇಕೆಂದು ಪಟ್ಟು ಹಿಡಿದು ಹುರಿ ಬಿಸಿಲನ್ನು ಲೆಕ್ಕಿಸದೆ ಸಾವಿರಾರು ಪ್ರತಿಭಟನಾಕಾರರು ಪ್ರತಿಭಟನೆ ನಡೆಸಿದರು. 

ಈ ಸಂದರ್ಭ ವಿರಾಜಪೇಟೆಯ ಕಾಂತಿ ಸತೀಶ್ ಮಾತನಾಡಿ, ಹೊರ ರಾಜ್ಯಗಳಿಂದ ಜಿಲ್ಲೆಗೆ ಬಂದು ಕಾರ್ಮಿಕ ಅಮಾನುಷವಾಗಿ ಅತ್ಯಾಚಾರ ನಡೆಸಿ ಕೊಲೆ ಮಾಡಿರುವುದು ಜಿಲ್ಲೆಯೇ ತಲೆ ತಗ್ಗಿಸುವಂತ ಘಟನೆಯಾಗಿದೆ. ಜಿಲ್ಲೆಯ ಬೆಳೆಗಾರರು ಇಂತಹ ಹೊರ ರಾಜ್ಯದ ಕಾರ್ಮಿಕರ ಬಗ್ಗೆ ಎಚ್ಚರ ವಹಿಸದಿದ್ದಲ್ಲಿ ಇಂತಹ ಘಟನೆಗಳು ಮುಂದಿನ ದಿನಗಳಲ್ಲಿ ಮರುಕಳಿಸಲಿದೆ. ಸ್ಥಳೀಯ ಕಾರ್ಮಿಕರಿಗೆ ಕೆಲಸ ನೀಡಿ ಹೊರ ರಾಜ್ಯಗಳ ಕಾರ್ಮಿಕರನ್ನು ಜಿಲ್ಲೆಯಿಂದ ಗಡಿಪಾರು ಮಾಡಬೇಕು. ಇಂತಹ ಕಾರ್ಮಿಕರಿಗೆ ಆಶ್ರಯ ನೀಡುವ ಖಾಸಗಿ ತೋಟದ ಮಾಲಕರ ಹಾಗೂ ಬೆಳೆಗಾರರ ಮೇಲೆ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು. ನೀಚ ಕೃತ್ಯ ಎಸಗಿದ ವಿಕೃತ ಕಾಮಿ ಆರೋಪಿಗಳ ಪರ ಜಿಲ್ಲೆಯ ವಕೀಲರುಗಳು ವಕಾಲತು ವಹಿಸಬಾರದೆಂದು ಮನವಿ ಮಾಡಿದ ಅವರು, ಸರಕಾರ ಇಂತಹ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.

ಗ್ರಾ.ಪಂ ಸದಸ್ಯ ರೆಜಿತ್ ಕುಮಾರ್ ಮಾತನಾಡಿ, ಸಂಧ್ಯಾಳ ಕುಟುಂಬವು ದಲಿತ ಬಡ ಕುಟುಂಬವಾಗಿದ್ದು, ಸಂಕಷ್ಟದಲ್ಲಿ ಜೀವನ ನಡೆಸುತ್ತಿದೆ. ಸರಕಾರ ರೂ 25 ಲಕ್ಷ ಪರಿಹಾರ ನೀಡಬೇಕು. ದಲಿತ ದೌರ್ಜನ್ಯ ಪ್ರಕರಣಕ್ಕೆ ಒಳಗಾದ ವಿದ್ಯಾರ್ಥಿನಿಯ ಕುಟುಂಬದ ಜೀವನ ನಿರ್ವಾಹಣೆಗೆ ಕುಟುಂಬದ ಒಬ್ಬರಿಗೆ ಸರಕಾರಿ ಉದ್ಯೋಗ ನೀಡಬೇಕು. ಆರೋಪಿಗಳಿಗೆ ಕೆಲಸ ಮಾಡುತ್ತಿದ್ದ ತೋಟದ ಮಾಲಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ವಿದ್ಯಾರ್ಥಿನಿಯ ಕುಟುಂಬಕ್ಕೆ ತೋಟದ ಮಾಲಕ ಸೂಕ್ತ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.

ಸಾಮಾಜಿಕ ಕಾರ್ಯಕರ್ತ ಸಿದ್ದಾಪುರದ ಮುಸ್ತಫ ಮಾತನಾಡಿ, ರಾಜ್ಯದಲ್ಲಿ ದಾನಮ್ಮ, ಝೈಬುನ್ನಿಸ, ಶ್ರೀವಿಧ್ ಸೇರಿದಂತೆ ಅಪ್ರಾಪ್ತ ವಯಸ್ಸಿನ ಹೆಣ್ಣು ಮಕ್ಕಳ ಮೇಲೆ ನಿರಂತರವಾಗಿ ಅತ್ಯಾಚಾರ, ಕೊಲೆ ನಡೆಯುತ್ತಿದ್ದು, ಇಂತಹ ವಿಕೃತ ಕಾಮಿಗಳ ಮೇಲೆ ಸರಕಾರ ಕಠಿಣ ಕಾನೂನು ರೂಪಿಸಿ ಶಿಕ್ಷೆಗೆ ಒಳಪಡಿಸಬೇಕು. ಶಾಸಕರು ಸಂಸದರು ಕೇಂದ್ರ ಹಾಗೂ ರಾಜ್ಯ ಸರಕಾರಗಳ ಗಮನ ಸೆಳೆದು ಇಂತಹ ಪ್ರಕರಣಗಳ ಬಗ್ಗೆ ಗಂಭೀರವಾಗಿ ಪರಿಗಣಿಸಿ ವಿದ್ಯಾರ್ಥಿನಿಯರ ಮೇಲೆ ನಡೆಯುತ್ತಿರುವ ಅತ್ಯಾಚಾರ, ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ಕಾನೂನು ರೂಪಿಸಲು ಮುಂದಾಗಬೇಕೆಂದು ಒತ್ತಾಯಿಸಿದರು.

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಡಿವೈಎಸ್‍ಪಿ ಸುಂದರ್ ರಾಜ್ ಅವರಿಗೆ ಹೋರಾಟ ಸಮಿತಿಯ ಅಧ್ಯಕ್ಷ ಶಿವಪ್ಪ ಬೇಡಿಕೆಗಳ ಮನವಿ ಪತ್ರವನ್ನು ನೀಡಿದರು. ಈ ಸಂದರ್ಭ  ಮಾತನಾಡಿದ ಸುಂದರ್ ರಾಜ್, ವಿದ್ಯಾರ್ಥಿನಿ ಅತ್ಯಾಚಾರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ನೇತೃತ್ವದಲ್ಲಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಕಠಿಣ ಕ್ರಮ ಕೈಗೊಳ್ಳಲಾಗಿದ್ದು, ದಲಿತ ದೌರ್ಜನ್ಯ ಕಾಯ್ದೆಯಡಿಯಲ್ಲಿ ಕುಟುಂಬಕ್ಕೆ ಸರಕಾರದ ಪರಿಹಾರ ನೀಡಲು ಇಲಾಖೆ ಸಹಕರಿಸಲಿದೆ. ಇಬ್ಬರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ. ಯಾವುದೇ ಕಾರಣಕ್ಕೂ ಆರೋಪಿಗಳಿಗೆ ಕಾನೂನಿನ ಚೌಕಟ್ಟಿನಿಂದ ತಪ್ಪಿಸಿಕೊಳ್ಳದಂತೆ ಕ್ರಮ ಕೈಗೊಳ್ಳಲಾಗಿದೆ. ಪ್ರತಿಭಟನಾಕಾರರ ಬೇಡಿಕೆಗಳನ್ನು ಇಲಾಖೆ ಮೂಲಕ ಸರಕಾರಕ್ಕೆ ರವಾನಿಸಲಾಗುವುದು ಎಂದು ಹೇಳಿದರು.

ಸಿದ್ದಾಪುರ ಪಟ್ಟಣದಲ್ಲಿ ಸ್ವಯಂಘೋಷಿತ ಬಂದ್: ಸಿದ್ದಾಪುರ ಪಟ್ಟಣದ ಅಂಗಡಿ ಮುಂಗಟ್ಟುಗಳ ಮಾಲಕರು ತಮ್ಮ ಅಂಗಡಿಗಳನ್ನು ಎರಡು ಗಂಟೆಗಳ ಕಾಲ ಸ್ವಯಂಘೋಷಿತವಾಗಿ ಬಂದ್ ಮಾಡಿ ಪ್ರತಿಭಟನೆಯಲ್ಲಿ ಭಾಗವಹಿಸಿದರು. 

ವಿದ್ಯಾರ್ಥಿನಿಯ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಬೇಕೆಂದು ಆಗ್ರಹಿಸಿ ಇದೇ ಪ್ರಥಮ ಬಾರಿಗೆ ಸರ್ವ ಪಕ್ಷ ಹಾಗೂ ಸಂಘ ಸಂಸ್ಥೆಗಳ ಮುಖಂಡರು, ಕಾರ್ಯಕರ್ತರು, ಮಹಿಳಾ ಸಂಘಟನೆಗಳು, ಶಾಲಾ ವಿದ್ಯಾರ್ಥಿಗಳು ಬೃಹತ್ ಪ್ರತಿಭಟನೆಯಲ್ಲಿ ಭಾಗವಹಿಸಿದರು. ಎಸ್‍ಐಓ ಸಂಘಟನೆಯ ವತಿಯಿಂದ ನೂರಾರು ವಿದ್ಯಾರ್ಥಿಗಳು ಸಿದ್ದಾಪುರ ಪೊಲೀಸ್ ಠಾಣೆಯ ಮುಂದೆ ಜಮಾಯಿಸಿ ಸಿದ್ದಾಪುರ ಪಿಎಸ್‍ಐ ದಯಾನಂದ್ ಅವರಿಗೆ ಮನವಿ ಪತ್ರ ನೀಡಿದರು.

ಈ ಸಂದರ್ಭ ವಿವಿಧ ಸಂಘಟನೆ ಹಾಗೂ ಪಕ್ಷಗಳ ಪ್ರಮುಖರಾದ ಎಂ.ಕೆ ಮಣಿ, ಶೌಕತ್ ಅಲಿ, ಮಲ್ಲಂಡ ಮಧು ದೇವಯ್ಯ, ಜಾಫರ್ ಅಲಿ, ಹುಸೈನ್, ಅಬ್ದುಲ್ ಶುಕೂರ್, ಪ್ರವೀಣ್, ವಿಧ್ವನಾಥ್, ಬಶೀರ್, ಗಿರೀಶ್, ಲತೀಶ್ ರೈ, ಅಸ್ಕರ್, ಸುರೇಶ್ ರೈ, ಸಫಿಯ ಮುಹಮ್ಮದ್, ಪ್ರಜಿತ್, ಪ್ರೇಮ, ಮೂಸಾ, ಪೂವಮ್ಮ, ರಾಧ, ಲಕ್ಷ್ಮಿ, ದೇವಜಾನು ಸೇರಿದಂತೆ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News