ದೇಶದಲ್ಲಿ ಜೀತಪದ್ದತಿಗೆ ಸಿಲುಕಿದವರ ಪೈಕಿ ಶೇ.95ರಷ್ಟು ಪರಿಶಿಷ್ಟರು: ಐಜೆಎಂ ಸಂಸ್ಥೆ ಸಂಚಾಲಕ ಕ್ರಿಸ್ಟೋಫರ್ ವಿಲಿಯಮ್

Update: 2019-02-14 14:58 GMT

ಚಿಕ್ಕಮಗಳೂರು, ಫೆ.14: ದೇಶದಲ್ಲಿ ಜೀತಪದ್ದತಿಯ ಸಂಕೋಲೆಗೆ ಸಿಲುಕಿದವರ ಪೈಕಿ ಶೇ.95ರಷ್ಟು ಕಾರ್ಮಿಕರು ಪರಿಶಿಷ್ಟರಾಗಿದ್ದು, ಬ್ರಾಹ್ಮಣ ಸಮುದಾಯದ ಒಂದೇ ಒಂದು ಪ್ರಕರಣ ವರದಿಯಾಗಿಲ್ಲ. ಆರ್ಥಿಕವಾಗಿ ಹಿಂದುಳಿದವರು, ಅನಕ್ಷರಸ್ಥರು ಇದಕ್ಕೆ ಗುರಿಯಾಗುತ್ತಿದ್ದಾರೆ ಎಂದು ಇಂಟರ್‌ನ್ಯಾಷನಲ್ ಜಸ್ಟೀಸ್ ಮಿಶನ್‌ನ ಸಂಚಾಲಕ ಕ್ರಿಸ್ಟೋಫರ್ ವಿಲಿಯಮ್ ತಿಳಿಸಿದ್ದಾರೆ.

ಗುರುವಾರ ನಗರದ ಜಿಪಂ ಕಚೇರಿಯ ನಝೀರ್‌ಸಾಬ್ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಇಂಟರ್ ನ್ಯಾಶನಲ್ ಜಸ್ಟೀಸ್ ಮಿಶನ್ ಸಂಸ್ಥೆಯ ಸಹಯೋಗದಲ್ಲಿ ಕಂದಾಯಾಧಿಕಾರಿಗಳು, ಗ್ರಾಪಂ ಪಿಡಿಒ, ಇಒಗಳಿಗೆ ಹಮ್ಮಿಕೊಳ್ಳಲಾಗಿದ್ದ ಜೀತ ಪದ್ದತಿ ನಿರ್ಮೂಲನಾ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಕಾರ್ಯಾಗಾರದಲ್ಲಿ ಜೀತದಾಳುಗಳ ವಿಡಿಯೋ ಸಂದರ್ಶನ, ಪವರ್ ಪಾಯಿಂಟ್ 1976ರ ಜೀತ ಪದ್ದತಿ ಕಾಯ್ದೆ, ಜೀತ ಪದ್ದತಿ ಸ್ವರೂಪ, ಪತ್ತೆ ಹಚ್ಚುವ ವಿಧಾನಗಳು, ಪುನರ್ವಸತಿ ಮತ್ತಿತರ ಕಾನೂನುಗಳ ಬಗ್ಗೆ ವಿವರಿಸಿದ ಕ್ರಿಸ್ಟೋಫರ್ ವಿಲಿಯಮ್, ವಿಶ್ವದಾದ್ಯಂತ 47 ಮಿಲಿಯನ್ ಜೀತದಾಳುಗಳಿದ್ದು, ಭಾರತ ದೇಶದಲ್ಲಿ ಇದುವರೆಗೂ 1.84 ಕೋಟಿ ಜೀತದಾಳುಗಳನ್ನು ಇದುವರೆಗೂ ಪುನರ್ವಸತಿ ಮಾಡಲಾಗಿದೆ ಎಂದ ಅವರು, ಐಜೆಎಂ ಸಂಸ್ಥೆ ವಿಶ್ವದ ಎಲ್ಲ ದೇಶಗಳಲ್ಲಿ ಜೀತ ಕಾರ್ಮಿಕರ ಪುನರ್ವಸತಿಗೆ ಶ್ರಮಿಸುತ್ತಿದ್ದು, ದೇಶದಲ್ಲೂ ಸರಕಾರಗಳ ಸಹಕಾರದೊಂದಿಗೆ ಜೀತ ಕಾರ್ಮಿಕ ಪದ್ದತಿಯ ನಿರ್ಮೂಲನೆಗೆ ಶ್ರಮಿಸುತ್ತಿದ್ದು, ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಅಧಿಕಾರಿಗಳು ಪರಿಣಾಮಕಾರಿಯಾಗಿ ಕೆಲಸ ಮಾಡುವ ನಿಟ್ಟಿನಲ್ಲಿ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದು ವಿವರಿಸಿದರು.

ಕಾರ್ಯಾಗಾರದಲ್ಲಿ ಪ್ರಾತ್ಯಕ್ಷಿಕೆ, ವಿಡಿಯೋ ಪ್ರದರ್ಶನ, ಸಂವಾದ, ಪ್ರಶ್ನಾವಳಿಗಳ ಮೂಲಕ ಸಂಪನ್ಮೂಲ ವ್ಯಕ್ತಿ, ಅಧಿಕಾರಿಗಳಿಗೆ ಜೀತ ಪದ್ದತಿ ಬಗ್ಗೆ ತರಬೇತಿ ನೀಡಿದರು.

ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅಪರ ಜಿಲ್ಲಾಧಿಕಾರಿ ಶಿವಕುಮಾರ್ ಜೀತ ಪದ್ದತಿ ದೇಶದಲ್ಲಿರುವ ಅಮಾನವೀಯ ಪದ್ದತಿಯಾಗಿದೆ. ಈ ಸಾಮಾಜಿಕ ಪಿಡುಗನ್ನು ಬುಡಸಹಿತ ಕೀಳಲು ಸರಕಾರಗಳು ಕಠಿಣ ಕಾನೂನುಗಳನ್ನು ಜಾರಿಗೆ ತಂದಿವೆ. ಆದರೆ ಈ ಪಿಡುಗು ದೇಶದಾದ್ಯಂತ ಇನ್ನೂ ಜೀವಂತವಾಗಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಜೀತ ಪದ್ದತಿಯ ನಿರ್ಮೂಲನೆ ಮಾಡುವ ನಿಟ್ಟನಲ್ಲಿ ಅಧಿಕಾರಿಗಳು, ಸಾರ್ವಜನಿಕರ ಪಾತ್ರ ಮಹತ್ತರವಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಜಿಪಂ ಉಪಕಾರ್ಯದರ್ಶಿ ರಾಜಗೋಪಾಲ್, ಪ್ರಾದೇಶಿಕ ಕಾರ್ಮಿಕ ಇಲಾಖೆಯ ಸಹಾಯಕ ಆಯುಕ್ತ ಜಾನ್‌ಸನ್ ಉಪಸ್ಥಿತರಿದ್ದರು. ಚಿಕ್ಕಮಗಳೂರು, ಕಡೂರು, ತರೀಕೆರೆ, ಕೊಪ್ಪ, ಮೂಡಿಗೆರೆ, ಶೃಂಗೇರಿ, ಎನ್.ಆರ್.ಪುರ ತಾಲೂಕುಗಳ ಕಂದಾಯ ಇಲಾಖೆಯ ಅಧಿಕಾರಿಗಳು, ವಿವಿಧ ಗ್ರಾಪಂ ಪಿಡಿಒಗಳು, ಇಒಗಳು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.

ಜಿಲ್ಲೆಯಲ್ಲಿ ಈ ಪದ್ದತಿ ಇಲ್ಲ ಎನ್ನಲಾಗುತ್ತಿದೆ. ಆದರೆ ಈ ಸಂಬಂಧ ಸಮೀಕ್ಷೆ ನಡೆಸಿ ವರದಿ ನೀಡುವಂತೆ ಕಂದಾಯಾಧಿಕಾರಿಗಳಿಗೆ, ಪಿಡಿಒಗಳಿಗೆ ಹಾಗೂ ಇಒಗಳಿಗೆ ಸಾಕಷ್ಟು ಬಾರಿ ಜಿಲ್ಲಾಡಳಿತ ಆದೇಶಿಸಿದೆ. ಆದರೆ ಇತ್ತೀಚೆಗೆ ಕೆಲವೇ ಕೆಲವು ಅಧಿಕಾರಿಗಳು ಸಮೀಕ್ಷಾ ವರದಿ ನೀಡಿರುವುದನ್ನು ಹೊರತು ಪಡಿಸಿ ಉಳಿದ ಅಧಿಕಾರಿಗಳು ಈ ಬಗ್ಗೆ ತತ್ಸಾರ ಮನೋಭಾವನೆ ತೋರಿರುವುದು ಅತ್ಯಂತ ನಾಚಿಗೇಡಿನ ಸಂಗತಿಯಾಗಿದೆ. ದೇಶದ ಅಭಿವೃದ್ಧಿಗೆ ಮಾರಕವಾಗಿರುವ ಗಂಭೀರ ಪಿಡುಗಿನ ಬಗ್ಗೆ ಅಧಿಕಾರಿಗಳಲ್ಲಿ ಬದ್ಧತೆ ಪ್ರದರ್ಶಿಸದಿರುವುದು, ತಲೆಕೆಡಿಸಿಕೊಳ್ಳದಿರುವುದು ಬೇಸರದ ಸಂಗತಿ.

ಶಿವಕುಮಾರ್, ಅಪರ ಜಿಲ್ಲಾಧಿಕಾರಿ

"ಜೀತಪದ್ದತಿ ಗುಟ್ಟಾಗಿ ನಡೆಯುವ ಅಪರಾಧ ಕೃತ್ಯ"

ಚಿಕ್ಕಮಗಳೂರು ಜಿಲ್ಲೆಯಲ್ಲಿ ಜೀತ ಕಾರ್ಮಿಕರಿಲ್ಲ ಎಂದು ಅಧಿಕಾರಿಗಳು ನೀಡಿದ ಸಮೀಕ್ಷಾ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಆದರೆ ಸಮೀಕ್ಷೆ ಸಮರ್ಪಕವಾಗಿ ನಡೆದಿಲ್ಲ ಎಂಬುದನ್ನು ಜಿಲ್ಲಾಡಳಿತವೇ ಹೇಳುತ್ತಿದೆ. ಇದಕ್ಕೆ ಕಾರಣ ಜೀತಪದ್ದತಿ, ಅದರ ಸ್ವರೂಪ, ಕಾಯ್ದೆ, ಕಾನೂನುಗಳ ಬಗ್ಗೆ ಸಮರ್ಪಕ ಅರಿವಿಲ್ಲದಿರುವುದಾಗಿದೆ. ಜೀತಪದ್ದತಿ ಗುಟ್ಟಾಗಿ ನಡೆಯುವ ಅಪರಾಧ ಕೃತ್ಯವಾಗಿರುವುದರಿಂದ ಇದರ ಬಗ್ಗೆ ಅಧಿಕಾರಿಗಳಿಗೆ ಸಂಪೂರ್ಣ ಅರಿವು ಅಗತ್ಯ ಎಂದು ಐಜೆಎಂ ಸಂಸ್ಥೆ ಸಂಚಾಲಕ ಕ್ರಿಸ್ಟೋಫರ್ ವಿಲಿಯಮ್ ಹೇಳಿದರು.

ಅಸಂಘಟಿತ ಕಾರ್ಮಿಕರಿಗೆ ಸರಕಾರ ಕನಿಷ್ಠ ವೇತನ ನಿಗದಿ ಮಾಡಿದ್ದು, ಈ ವೇತನಕ್ಕಿಂತ ಕಡಿಮೆ ಕೂಲಿ ನೀಡಿ ದುಡಿಸಿಕೊಳ್ಳುವುದೂ ಜೀತಪದ್ದತಿಯಾಗಿದೆ ಎಂದು ಸುಪ್ರೀಂಕೋರ್ಟ್ ಆದೇಶಿಸಿದೆ. ಪ್ರತೀ ಮೂರು ವರ್ಷಗಳಿಗೊಮ್ಮೆ ಜೀತ ಕಾರ್ಮಿಕರ ಸಮೀಕ್ಷೆ ನಡೆಯಬೇಕಿದೆ. ರಾಜ್ಯದಲ್ಲಿ 2012ರಲ್ಲಿ ಸಮೀಕ್ಷೆ ನಡೆದಿದ್ದು, ನಾಲ್ಕು ವರ್ಷಗಳ ಬಳಿಕ 2016ರಲ್ಲಿ ಸಮೀಕ್ಷೆ ನಡೆಯಿತು. ನಂತರ ಇದುವರೆಗೂ ಸಮೀಕ್ಷೆ ನಡೆದಿಲ್ಲ.

ಕ್ರಿಸ್ಟೋಫರ್ ವಿಲಿಯಮ್, ಐಜೆಎಂ ಸಂಸ್ಥೆ ಸಂಚಾಲಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News