'ಚಿನ್ನ ತಂಬಿ' ಸೆರೆ ಹಿಡಿಯಲು ಬಿರುಸಿನ ಕಾರ್ಯಾಚರಣೆ

Update: 2019-02-15 03:53 GMT

ತಿರುಪುರ, ಫೆ.15: ಬೆಳೆಗಳಿಗೆ ವ್ಯಾಪಕ ಪ್ರಮಾಣದಲ್ಲಿ ಹಾನಿ ಮಾಡಿ ಸ್ವಚ್ಛಂದವಾಗಿ ಓಡಾಡಿಕೊಂಡಿರುವ "ಚಿನ್ನತಂಬಿ" ಆನೆಯನ್ನು ಸೆರೆಹಿಡಿಯಲು ಮದ್ರಾಸ್ ಹೈಕೋರ್ಟ್, ತಮಿಳುನಾಡು ಅರಣ್ಯ ಇಲಾಖೆಗೆ ಅನುಮತಿ ನೀಡಿದ್ದು, ಶುಕ್ರವಾರ ಅರಿವಳಿಕೆ ಚುಚ್ಚುಮದ್ದು ನೀಡಿ ಬಂಧಿಸಲು ಕಾರ್ಯತಂತ್ರ ರೂಪಿಸಲಾಗಿದೆ ಎಂದು ಉನ್ನತ ಮೂಲಗಳು ಹೇಳಿವೆ.

ತಿರುಪುರದ ಉದುಮಲೈ ಪ್ರದೇಶದಲ್ಲಿ ಎರಡು ವಾರಗಳಿಂದ ಓಡಾಡುತ್ತಿರುವ ಈ ಒಂಟಿ ಸಲಗವನ್ನು ಹಿಡಿಯಲು ನಡೆಸಿದ ಪ್ರಯತ್ನಗಳು ವಿಫಲವಾಗಿದ್ದವು. ಮದತುಕುಲಮ್ ಪ್ರದೇಶದ ಎಸ್. ಮನ್ನಡಿಪುದುರು ಎಂಬಲ್ಲಿನ ಕಬ್ಬಿನ ತೋಟದಲ್ಲಿ ಪ್ರತಿದಿನ ಸಂಜೆ 4ರ ಬಳಿಕ ಕಾಣಿಸಿಕೊಳ್ಳುತ್ತಿತ್ತು. ಈ ಹಿನ್ನೆಲೆಯಲ್ಲಿ ನೂರಾರು ಮಂದಿ ಅರಣ್ಯ ಇಲಾಖೆ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಆದರೆ ಸಂಜೆ ವೇಳೆಗೆ ಸಲಗ ದಾಳಿ ನಡೆಸುತ್ತಿದ್ದ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಸಾಧ್ಯವಾಗುತ್ತಿರಲಿಲ್ಲ.

ಇನ್ನಷ್ಟು ಅಧಿಕಾರಿಗಳು ಶುಕ್ರವಾರ ಬೆಳಗ್ಗೆ ಸ್ಥಳಕ್ಕೆ ಆಗಮಿಸುವ ನಿರೀಕ್ಷೆ ಇದ್ದು, ಸಂಜೆ ವೇಳೆಗೆ ಕಾರ್ಯಾಚರಣೆಯಲ್ಲಿ ಆನೆಯನ್ನು ಹಿಡಿಯಬಹುದು ಎಂದು ಉನ್ನತ ಅಧಿಕಾರಿಗಳು ಹೇಳಿದ್ದಾರೆ. ಈಗಾಗಲೇ ಅರ್ಥ್‌ಮೂವರ್‌ಗಳ ಮೂಲಕ ಅಗಲ ಕಿರಿದಾದ ರಸ್ತೆ ವಿಶಾಲಗೊಳಿಸಲಾಗಿದೆ. ಗುರುವಾರದ ಕಾರ್ಯಾಚರಣೆ ಹಿನ್ನೆಲೆಯಲ್ಲಿ ಅಕ್ಕಪಕ್ಕದ ಊರುಗಳ ನೂರಾರು ಮಂದಿ ಜಮಾಯಿಸಿದ್ದರು. ಆದರೆ ಚಿನ್ನತಂಬಿಯನ್ನು ಹಿಡಿಯಲು ಸಾಧ್ಯವಾಗಿಲ್ಲ ಎಂಬ ಸುದ್ದಿ ತಿಳಿದ ತಕ್ಷಣ ಮರಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News