ಹುತಾತ್ಮ ಯೋಧರಿಗಾಗಿ ಕಂಬನಿ ಮಿಡಿದ ಮಡಿಕೇರಿ ಜನತೆ

Update: 2019-02-15 11:58 GMT

ಮಡಿಕೇರಿ, ಫೆ.15: ಯೋಧರ ನಾಡು ಕೊಡಗಿನ ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಮಾಜಿ ಯೋಧರು ಸೇರಿದಂತೆ ವಿವಿಧ ಸಂಘ ಸಂಸ್ಥೆ, ಸಾರ್ವಜನಿಕರು ಪುಲ್ವಾಮದಲ್ಲಿ ನಡೆದ ಭಯೋತ್ಪಾದಕ ಕೃತ್ಯದಲ್ಲಿ ಬಲದಾನಗೈದ ವೀರಯೋಧರಿಗೆ ಗೌರವ ನಮನ ಸಲ್ಲಿಸಿ, ಕಂಬನಿ ಮಿಡಿಯುವುದರೊಂದಿಗೆ, ಭಯೋತ್ಪಾದಕ ಕೃತ್ಯದ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ನಗರದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಪ್ರತಿಮೆಯ ಮುಂಭಾಗ ಹುತಾತ್ಮ ಯೋಧರಿಗೆ ಕಂಬನಿಯ ಧಾರೆಯೊಂದಿಗೆ ಮಾಜಿ ಯೋಧರು ಗೌರವ ಸಲ್ಲಿಸಿ, ದುಷ್ಕೃತ್ಯಕ್ಕೆ ಕಾರಣವಾದ ಭಯೋತ್ಪಾದಕ ಕೃತ್ಯಗಳನ್ನು ಹತ್ತಿಕ್ಕಲು ಕೇಂದ್ರ ಕಠಿಣ ನಿರ್ಧಾರ ತಳೆಯಬೇಕೆಂದು ಆಗ್ರಹಿಸಿದರು. ಇದೇ ಸಂದರ್ಭ ಮೌನಾಚರಣೆಯ  ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ತಕ್ಕ ಉತ್ತರದ ವಿಶ್ವಾಸ-ಫೀ.ಮಾ.ಕೆ.ಎಂ. ಕಾರ್ಯಪ್ಪ ಅವರ ಪುತ್ರ ನಿವೃತ್ತ ಏರ್ ಮಾರ್ಷಲ್ ಕೆ.ಸಿ.ನಂದಾ ಕಾರ್ಯಪ್ಪ ಮಾತನಾಡಿ, ಭಾರತದ ಉತ್ತರದ ತುದಿ ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿ ನಡೆದಿರುವ ಘಟನೆ ಅತ್ಯಂತ ಹೀನ ಕೃತ್ಯ. ಭಯೋತ್ಪಾಕ ಘಟನೆಯ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿಗಳು ತುರ್ತು ಸಭೆ ಕರೆದಿದ್ದು, ಈ ಸಭೆಯಲ್ಲಿ ರಕ್ಷಣಾ ಮಂತ್ರಿಗಳೂ ಸೇರಿದಂತೆ ಸೇನಾಧಿಕಾರಿಗಳು ಭಾಗವಹಿಸಿದ್ದು, ತಕ್ಕ ಕ್ರಮ ಕೈಗೊಳ್ಳುವ ವಿಶ್ವಾಸವಿದೆ ಎಂದರು. 

ನಿವೃತ್ತ ಯೋಧನ ಆಕ್ರೋಶ-ಸಿಆರ್‍ಪಿಎಫ್ ಯೋಧ ದೇವಯ್ಯ ಭಯೋತ್ಪಾದಕ ಕೃತ್ಯಕ್ಕೆ 44 ಮಂದಿ ಯೋಧರು ಬಲಿಯಾಗಿರುವ ಬಗ್ಗೆ ಅತೀವ ದುಃಖವನ್ನು ವ್ಯಕ್ತಪಡಿಸಿ, ನಾನು ಸೇವೆಯಿಂದ ನಿವೃತ್ತಿಗೊಳ್ಳದೆ ಇರುತ್ತಿದ್ದರೆ, ಪತ್ನಿ ಮಕ್ಕಳಿಗೂ ಹೇಳದೆ ಭಯೋತ್ಪಾದಕರನ್ನು ಧ್ವಂಸಗೊಳಿಸುವ ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳುತ್ತಿದ್ದೆ ಎಂದು ನುಡಿದರಲ್ಲದೆ, ಯುವ ಸಮೂಹ ಭಾರತೀಯ ಸೇನೆಗೆ ಸೇರಿ ಎನ್ನುವ ಸಂದೇಶ ಸಾರುವ ಹಾಡನ್ನು ಹಾಡಿದರು. 

ಕೊಡಗು ಪ್ರೆಸ್‍ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ಪುಲ್ವಾಮದಲ್ಲಿ ನಡೆದ ಭಯೋತ್ಪಾದಕ ಕೃತ್ಯಕ್ಕೆ ಪ್ರತೀಕಾರ ಮಾತ್ರ ಉತ್ತರವಲ್ಲ. ದೇಶದಲ್ಲಿರುವ ಭಯೋತ್ಪಾದನೆ ಹಾಗೂ ಆತಂಕವನ್ನು ದೂರ ಮಾಡುವುದು ಅತ್ಯವಶ್ಯವೆಂದರು. ಸಾಹಿತಿ ಮೊಣ್ಣಂಡ ಶೋಭಾ ಸುಬ್ಬಯ್ಯ, ಯುವ ಸಮೂಹ ಹೆಚ್ಚಿನ ಹೆಚ್ಚಿನ ಸಂಖ್ಯೆಯಲ್ಲಿ ಸೈನ್ಯಕ್ಕೆ ಸೇರುವಂತೆ ಕರೆ ನೀಡಿದರು.

ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುರಯ್ಯ ಅಬ್ರಾರ್, ಬಿಜೆಪಿ ನಗರಾಧ್ಯಕ್ಷ ಮಹೇಶ್ ಜೈನಿ, ನಗರಸಭಾ ಸದಸ್ಯರಾದ ಚುಮ್ಮಿ ದೇವಯ್ಯ, ಅನಿತ ಪೂವಯ್ಯ, ಪೀಟರ್, ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ ಅಯ್ಯಪ್ಪ,  ಹಿರಿಯ ಪತ್ರಿಕರ್ತರುಗಳಾದ ಜಿ. ರಾಜೇಂದ್ರ, ಜಿ.ಚಿದ್ವಿಲಾಸ್, ಗ್ರೀನ್ ಸಿಟಿ ಫೋರಂನ ಅಧ್ಯಕ್ಷ ಕುಕ್ಕೇರ ಜಯ ಚಿಣ್ಣಪ್ಪ, ಕುಶಾಲನಗರ ಗೌಡ ಸಮಾಜದ ಅಧ್ಯಕ್ಷ ಮೋಹನ್ ಮೊದಲಾದವರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News