ಕೆಪಿಎಸ್​​ಸಿ ವೆಬ್‌ಸೈಟ್‌ನಲ್ಲಿ ತಾಂತ್ರಿಕ ದೋಷ?: ಪ್ರವೇಶ ಪತ್ರ ಪಡೆಯಲು ಪರದಾಡುತ್ತಿರುವ ಅಭ್ಯರ್ಥಿಗಳು

Update: 2019-02-15 14:20 GMT

ಬೆಂಗಳೂರು, ಫೆ.15: ರಾಜ್ಯ ಲೋಕಸೇವಾ ಆಯೋಗ(ಕೆಪಿಎಸ್​​ಸಿ)ವು ಫೆ.17ರಂದು ಅಬಕಾರಿ ಉಪ ನಿರೀಕ್ಷಕರ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಯನ್ನು ಆಯೋಜಿಸಿದ್ದು, ಸುಮಾರು 45 ಸಾವಿರ ಮಂದಿ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಪ್ರವೇಶ ಪತ್ರ ಪಡೆಯಲು ಕೆಪಿಎಸ್ಸಿ ವೆಬ್‌ಸೈಟ್‌ನಲ್ಲಿ ತಾಂತ್ರಿಕ ಸಮಸ್ಯೆ ಎದುರಾಗುತ್ತಿದೆ ಎಂದು ಅಭ್ಯರ್ಥಿಗಳು ದೂರಿದ್ದಾರೆ.

ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಿಕೊಂಡ ಬಳಿಕ ಪ್ರಿಂಟ್ ಆಪ್ಷನ್ ಅನ್ನು ಕ್ಲಿಕ್ ಮಾಡಿದರೆ ಸುಮಾರು 15-20 ನಿಮಿಷಗಳ ಕಾಲ ಕಾಯಬೇಕಾಗುತ್ತದೆ ಎನ್ನಲಾಗಿದೆ. ಅಲ್ಲದೇ, ಪದೇ ಪದೇ ಸರ್ವರ್ ಸಮಸ್ಯೆ ಕಾಣಿಕೊಳ್ಳುತ್ತಿರುವುದರಿಂದ ಪ್ರಮುಖವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಪ್ರವೇಶ ಪತ್ರ ಪಡೆಯಲು ಅಭ್ಯರ್ಥಿಗಳು ಪರದಾಡುತ್ತಿದ್ದಾರೆ.

ಪ್ರವೇಶ ಪತ್ರವನ್ನು ಆನ್‌ಲೈನ್‌ನಲ್ಲಿ ಡೌನ್‌ಲೋಡ್ ಮಾಡಿಕೊಂಡು ಅದರ ಮುದ್ರಿತ ಪ್ರತಿ ಪಡೆಯಲು ತಜ್ಞರ ನೆರವು ಪಡೆದುಕೊಳ್ಳುವ ಅಗತ್ಯವಿದೆ ಎಂದು ಅಭ್ಯರ್ಥಿಗಳು ತಿಳಿಸಿದ್ದಾರೆ.

ರಾಜ್ಯ ಲೋಕಸೇವಾ ಆಯೋಗದ ಈ ನಿರ್ಲಕ್ಷವನ್ನು ವಿರೋಧಿಸಿ ಗುರುವಾರ ಹಲವಾರು ಮಂದಿ ಅಭ್ಯರ್ಥಿಗಳು ಆಯೋಗದ ಕಚೇರಿ ಬಳಿ ಪ್ರತಿಭಟನೆಯನ್ನು ನಡೆಸಿ, ಸಂಬಂಧಪಟ್ಟ ಅಧಿಕಾರಿಗಳ ಗಮನ ಸೆಳೆಯುವ ಪ್ರಯತ್ನವನ್ನು ಮಾಡಿದ್ದಾರೆ.

ಪ್ರವೇಶ ಪತ್ರದ ಮುದ್ರಿತ ಪ್ರತಿ ಪಡೆಯಲು ಕಂಪ್ಯೂಟರ್‌ನಲ್ಲಿ ಕಾಗದದ ಅಳತೆ, ವಿಸ್ತೀರ್ಣವನ್ನು ಬದಲಾಯಿಸಬೇಕಾಗುತ್ತದೆ. ಇಲ್ಲದಿದ್ದರೆ, ಪ್ರವೇಶ ಪತ್ರ ಸಂಪೂರ್ಣವಾಗಿ ಮುದ್ರಣಗೊಳ್ಳುವುದಿಲ್ಲ. ನಗರ ಪ್ರದೇಶಗಳಲ್ಲಿ ಸೈಬರ್ ಸೆಂಟರ್‌ಗಳಲ್ಲಿ ಅಭ್ಯರ್ಥಿಗಳು ತಜ್ಞರ ಸಹಾಯದಿಂದ ಪ್ರವೇಶ ಪತ್ರವನ್ನು ಪಡೆದುಕೊಳ್ಳಲು ಯಶಸ್ವಿಯಾಗುತ್ತಿದ್ದಾರೆ. ಆದರೆ, ಗ್ರಾಮೀಣ ಪ್ರದೇಶದ ಅಭ್ಯರ್ಥಿಗಳಿಗೆ ಈ ಸಮಸ್ಯೆ ಹೆಚ್ಚಿನ ಪ್ರಮಾಣದಲ್ಲಿ ಕಾಡುತ್ತಿದೆ. ಒಂದಕ್ಕಿಂತ ಹೆಚ್ಚು ಬಾರಿ ಸ್ಪರ್ಧಾತ್ಮಕ ಪರೀಕ್ಷೆ ಕೈಗೊಂಡಿರುವವರಿಗೆ ಇಂತಹ ಅನುಭವ ಹಿಂದೆಯೂ ಆಗಿದೆ ಎನ್ನಲಾಗಿದೆ. ಈ ಕೂಡಲೇ ಕೆಪಿಎಸ್ಸಿಯವರು ಈ ತಾಂತ್ರಿಕ ಸಮಸ್ಯೆಯನ್ನು ಬಗೆಹರಿಸಬೇಕೆಂದು ಅಭ್ಯರ್ಥಿಗಳು ಮನವಿ ಮಾಡಿದ್ದಾರೆ.

ಪ್ರವೇಶ ಪತ್ರ ಪಡೆಯುವುದು ಹೇಗೆ ?

ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಿಕೊಳ್ಳಲು ಅಭ್ಯರ್ಥಿಗಳು ಮೊದಲು Log in ಆದ ನಂತರ My Application ಮೇಲೆ ಕ್ಲಿಕ್ ಮಾಡಿ ನಂತರ 2018 ಎಂದು ವರ್ಷ ನಮೂದಿಸಿ, Advertisement Type ನಲ್ಲಿ Direct Recruitment ಅನ್ನು Select ಮಾಡಿ ನಂತರ Post Name ನಲ್ಲಿ Excise Sub Inspector ಎಂಬುದನ್ನು ಕ್ಲಿಕ್ ಮಾಡಬೇಕು. ನಂತರ Application ID ಯಲ್ಲಿ ಕ್ಲಿಕ್ ಮಾಡಿದ ಮೇಲೆ Hall Ticket ಮೇಲೆ ಕ್ಲಿಕ್ ಮಾಡಿದಲ್ಲಿ ಅಭ್ಯರ್ಥಿಗಳು ತಮ್ಮ ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು ಎಂದು ರಾಜ್ಯ ಲೋಕಸೇವಾ ಆಯೋಗದ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News