ತಾಂಡಾಗಳು ಗುಳೆ ಹೋಗುವುದನ್ನು ತಪ್ಪಿಸಲು ವಿಶೇಷ ಯೋಜನೆ: ಶಾಸಕ ಡಾ.ದೇವಾನಂದ ಚವ್ಹಾಣ

Update: 2019-02-16 04:30 GMT

ವಿಜಯಪುರ, ಫೆ.16: ನಗರದ ತಾಂಡಾಗಳ ಸರ್ವತೋಮುಖ ಪ್ರಗತಿ ಹಾಗೂ ತಾಂಡಾ ನಿವಾಸಿಗಳ ಗುಳೇ ಹೋಗುವುದನ್ನು ತಪ್ಪಿಸಲು ವಿಶೇಷ ಯೋಜನೆಯನ್ನು ಪೈಲಟ್ ಪ್ರಾಜೆಕ್ಟ್ ರೂಪದಲ್ಲಿ ವಿಜಯಪುರ ಜಿಲ್ಲೆಯಲ್ಲಿ ಅನುಷ್ಠಾನಗೊಳಿಸಲಾಗುತ್ತಿದ್ದು, ಪ್ರಥಮ ಹಂತದಲ್ಲಿ 100 ಕೋಟಿ ರೂ. ವೆಚ್ಚದಲ್ಲಿ ವಿವಿಧ ಯೋಜನೆ ಕೈಗೆತ್ತಿಕೊಳ್ಳಲಾಗುವುದು ಎಂದು ನಾಗಠಾಣ ಶಾಸಕ ಡಾ.ದೇವಾನಂದ ಚವ್ಹಾಣ ತಿಳಿಸಿದ್ದಾರೆ.

ವಿಜಯಪುರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದ ಆವರಣದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಂತ ಸೇವಾಲಾಲ ಜಯಂತೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.

ವಿಜಯಪುರ ಜಿಲ್ಲೆಯಲ್ಲಿಯೇ ತಾಂಡಾಗಳ ಸಂಖ್ಯೆ ಹೆಚ್ಚಿದೆ. ಅದರಂತೆ ಬಂಜಾರಾ ಸಮಾಜದ ಬಾಂಧವರು ಉದ್ಯೋಗ ಅರಸಿ ಹೊರರಾಜ್ಯಗಳಿಗೆ ಹೋಗುವುದನ್ನು ತಪ್ಪಿಸಲು ವಿಶೇಷ ಕಾರ್ಯಯೋಜನೆಯನ್ನು ರೂಪಿಸಲು ಸರ್ಕಾರ ನಿರ್ಧರಿಸಿದೆ. ಕಳೆದ ಬಾರಿ ಮುಖ್ಯಮಂತ್ರಿ ಕುಮಾರಸ್ವಾಮಿ ಸಹ ತಾಂಡಾಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಈ ಪೈಲಟ್ ಪ್ರಾಜೆಕ್ಟ್ ಬಗ್ಗೆ ಘೋಷಣೆ ಮಾಡಿದ್ದರು. ಅವರ ಘೋಷಣೆಯಂತೆ ಗುಡಿ ಕೈಗಾರಿಕೆ ಸ್ಥಾಪನೆ ಮೊದಲಾದ ಕಾರ್ಯಗಳನ್ನು ಕೈಗೊಳ್ಳಲು ಈಗಾಗಲೇ 100 ಕೋಟಿ ರೂ.ಗಳ ವಿಶೇಷ ಪ್ರಸ್ತಾವವನ್ನು ಸರ್ಕಾರಕ್ಕೆ ಸಲ್ಲಿಕೆ ಮಾಡಲಾಗಿದ್ದು, ಶೀಘ್ರವೇ ಕಾಮಗಾರಿಗಳು ಆರಂಭಗೊಳ್ಳಲಿವೆ ಎಂದು ವಿವರಿಸಿದರು.

ಬಂಜಾರಾ ಸಮಾಜ ಆರ್ಥಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಹಾಗೂ ಬಹುಮುಖ್ಯವಾಗಿ ಶೈಕ್ಷಣಿಕವಾಗಿ ಪ್ರಗತಿ ಸಾಧಿಸುವುದು ಅತ್ಯಂತ ಅಗತ್ಯವಾಗಿದೆ ಎಂದರು.

ವಿಜಯಪುರದಲ್ಲಿ ಬಂಜಾರಾ ಸಮಾಜದ ಸಂಘಟನೆಗಾಗಿ ಈ ಮಾಸಾಂತ್ಯದಲ್ಲಿ ಡಾ.ಬಿ.ಆರ್.ಅಂಬೇಡ್ಕರ ಜಿಲ್ಲಾ ಕ್ರೀಡಾಂಗಣದಲ್ಲಿ ಬೃಹತ್ ಬಂಜಾರಾ ಜಾಗೃತಾ ಸಮಾವೇಶವನ್ನು ಸಂಘಟಿಸಲು ನಿರ್ಧರಿಸಲಾಗಿದೆ ಎಂದು ಇದೇ ಸಂದರ್ಭದಲ್ಲಿ ಶಾಸಕರು ಪ್ರಕಟಿಸಿದರು.

ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಅರ್ಜುನ ರಾಠೋಡ ಮಾತನಾಡಿ, ಬಂಜಾರಾ ಸಮಾಜ ಆರ್ಥಿಕವಾಗಿ, ಶೈಕ್ಷಣಿಕವಾಗಿ ಪ್ರಗತಿ ಸಾಧಿಸಬೇಕು, ಅದರಂತೆ ಎಲ್ಲ ರಂಗಗಳಲ್ಲಿ ಪ್ರಗತಿ ಸಾಧಿಸಲು ರಾಜಕೀಯವಾಗಿ ಸಶಕ್ತವಾಗಬೇಕಿದೆ, ಈ ನಿಟ್ಟಿನಲ್ಲಿ ರಾಜಕೀಯವಾಗಿ ಬಂಜಾರಾ ಸಮಾಜದ ಜನತೆ ಪ್ರಗತಿ ಸಾಧಿಸಬೇಕು ಎಂದು ಕರೆ ನೀಡಿದರು.

ದಿ.ಎಲ್.ಆರ್.ನಾಯಕ - ದಿ.ಕೆ.ಟಿ. ರಾಠೋಡ ವೃತ್ತ ನಿರ್ಮಾಣವಾಗಲಿ

ಉಪನ್ಯಾಸ ಮಂಡಿಸಿದ ಕರ್ನಾಟಕ ವಿಶ್ವವಿದ್ಯಾನಿಲಯದ ಪ್ರಸಾರಾಂಗ ನಿರ್ದೇಶಕ ಡಾ.ಹೀರಾಲಾಲ ಪವಾರ ಮಾತನಾಡಿ,ಬಂಜಾರಾ ಸಮಾಜದ ಕುಲಗುರು ಸಂತ ಸೇವಾಲಾಲರ ಬೃಹತ್ ಮಹಾಕಾವ್ಯ ಹೊರತರುವ ಕಾರ್ಯ ಪ್ರಗತಿಯಲ್ಲಿದೆ. ಅನೇಕ ಬಂಜಾರಾ ಸಮಾಜದ ಕಲಾವಿದರು ಸೇವಾಲಾಲರ ಜೀವನ, ಸಾಧನೆ ಹಾಗೂ ತತ್ವ-ಸಿದ್ಧಾಂತ ಸಾರುವ ಗೀತೆಗಳಿಗೆ ಧ್ವನಿ ನೀಡಿದ್ದಾರೆ ಎಂದರು.

ಲಂಡನ್ ಹೈಕಮಿಶನರ್ ಆಗಿ ಹಲವಾರು ಹುದ್ದೆ ಅಲಂಕರಿಸಿ ಬಂಜಾರಾ ಸಮಾಜಕ್ಕೆ ಅನುಪಮ ಕೊಡುಗೆ ನೀಡಿದ ದಿ.ಎಲ್.ಆರ್.ನಾಯಕ ಅವರ ಕಂಚಿನ ಪ್ರತಿಮೆಯನ್ನು ಸ್ಥಾಪನೆ ಮಾಡಬೇಕು, ಅದರಂತೆ ಬಂಜಾರಾ ಸಮಾಜಕ್ಕೆ ಎಸ್ಸಿ ಮೀಸಲಾತಿ ಕಲ್ಪಿಸಲು ಕಾರಣೀಭೂತರಾದ ದಿ.ಕೆ.ಟಿ. ರಾಠೋಡ ಅವರ ಪ್ರತಿಮೆಯನ್ನು ಸಹ ಉಪಲಿಬುರುಜ್ ಬಳಿ ಸ್ಥಾಪನೆ ಮಾಡಬೇಕು ಎಂದು ಒತ್ತಾಯಿಸಿದರು.

ತೂರವಿ ತಾಂಡಾದ ಬಂಜಾರಾ ಸಮಾಜದ  ಗುರುಗಳಾದ  ಮಾಹಾರಾಜ, ಜಿಪಂ ಮಾಜಿ ಸದಸ್ಯ ರಾಜಪಾಲ ಚವ್ಹಾಣ, ಬಂಜಾರಾ ವಿ.ವ. ಸಂಘದ ಅಧ್ಯಕ್ಷ ಡಿ.ಎಲ್.ಚವ್ಹಾಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ವಿದ್ಯಾವತಿ ಎಚ್.ಬಿ., ಸೋಮನಗೌಡ ಕಲ್ಲೂರ, ಸುರೇಶ ಬಿಜಾಪೂರ, ಸೋಮಶೇಖರ ರಾಠೋಡ ಮೊದಲಾದವರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News