ಚರ್ಚೆಯಿಲ್ಲದೆ ಬಜೆಟ್ ಅನುಮೋದನೆಗೆ ಆಪರೇಷನ್ ಕಮಲ ಕಾರಣ: ಸಚಿವ ಪ್ರಿಯಾಂಕ್ ಖರ್ಗೆ

Update: 2019-02-16 13:10 GMT

ಕಲಬುರ್ಗಿ, ಫೆ.16: ವಿರೋಧ ಪಕ್ಷ ಬಿಜೆಪಿಗೆ ರಾಜ್ಯದ ಜನರ ಬಗ್ಗೆಯಾಗಲಿ, ಸಂವಿಧಾನದ ಬಗ್ಗೆಯಾಗಲಿ ಕಿಂಚಿತ್ತೂ ಕಾಳಜಿಯಿಲ್ಲ. ಯಾವುದೇ ಚರ್ಚೆ ಇಲ್ಲದೇ ರಾಜ್ಯದ ಬಜೆಟ್ ವಿಧಾನಸಭೆಯಲ್ಲಿ ಅನುಮೋದನೆ ಪಡೆಯಲು ಆಪರೇಷನ್ ಕಮಲವೇ ಕಾರಣ ಎಂದು ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚರ್ಚೆ ಇಲ್ಲದೆಯೇ ರಾಜ್ಯದ ಬಜೆಟ್ ಪಾಸ್ ಆಗಿದ್ದಕ್ಕೆ ನಾಚಿಕೆಯಾಗುತ್ತದೆ. ಜನಪ್ರತಿನಿಧಿಗಳಾದ ನಾವು ಇಂತಹ ಕೆಲಸಗಳಿಂದಾಗಿ ನಮ್ಮ ಘನತೆಯನ್ನು ಕಳೆದುಕೊಳ್ಳುತ್ತಿದ್ದೇವೆ ಎಂದರು.

ಪಕ್ಷದ ವಿಪ್ ಉಲ್ಲಂಘಿಸಿದ ಶಾಸಕರನ್ನು ಅನರ್ಹ ಮಾಡುವುದು ಸ್ಪೀಕರ್‌ಗೆ ಬಿಟ್ಟ ವಿಚಾರ. ಚಿಂಚೋಳಿ ಶಾಸಕ ಡಾ.ಉಮೇಶ್ ಜಾಧವ್ ಸಂವಿಧಾನಾತ್ಮಕವಾಗಿ ಲೋಕಸಭೆಗೆ ಸ್ಪರ್ಧಿಸಿದರೆ ಸ್ವಾಗತ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.

ಬಿಜೆಪಿ ಪಕ್ಷದಿಂದ ಲೋಕಸಭೆಗೆ ಸ್ಪರ್ಧಿಸಲು ಉಮೇಶ್ ಜಾಧವ್ ಚಿಂತನೆ ನಡೆಸಿದ್ದಾರಂತೆ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಉಮೇಶ್ ಜಾಧವ್ ಕಾಂಗ್ರೆಸ್ ಪಕ್ಷದಲ್ಲಿದ್ದು, ಬೇರೆ ಪಕ್ಷದಿಂದಲೂ ಸ್ಪರ್ಧಿಸಲು ಸಿದ್ಧ ಎಂದು ಹೇಳುವುದು ತಪ್ಪು ಎಂದರು.

ಬಜೆಟ್‌ನಲ್ಲಿ ಚಿಂಚೋಳಿ ಕ್ಷೇತ್ರವನ್ನು ಕಡೆಗಣಿಸಲಾಗಿದೆ ಎಂದು ಉಮೇಶ್ ಜಾಧವ್ ಮಾಡಿರುವ ಆರೋಪಕ್ಕೆ ತಿರುಗೇಟು ನೀಡಿದ ಪ್ರಿಯಾಂಕ್ ಖರ್ಗೆ, ಚಿಂಚೋಳಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಆ ಕ್ಷೇತ್ರದ ಶಾಸಕರಿಂದಾಗಲಿ ಅಥವಾ ನನ್ನಿಂದಾಗಲಿ ಸರಕಾರಕ್ಕೆ ಯಾವುದೇ ಪ್ರಸ್ತಾಪ ಹೋಗಿರಲಿಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News