ಹತ್ತು ಲಕ್ಷ ರೈತರಿಗೆ ಸಾಲ ನೀಡುವ ಗುರಿ: ಸಚಿವ ಬಂಡೆಪ್ಪ ಕಾಶೆಂಪೂರ್

Update: 2019-02-16 18:32 GMT

ಚಿಕ್ಕಮಗಳೂರು, ಫೆ.16: ರಾಜ್ಯದಲ್ಲಿ 2019ನೇ ಸಾಲಿನಲ್ಲಿ 10 ಲಕ್ಷ ರೈತರಿಗೆ ಹೊಸ ಸಾಲ ನೀಡುವ ಗುರಿ ಇದೆ ಎಂದು ಸಹಕಾರಿ ಸಚಿವ ಬಂಡೆಪ್ಪ ಕಾಶೆಂಪೂರ್ ಹೇಳಿದ್ದಾರೆ.

ನಗರದ ಸಹಕಾರ ಬ್ಯಾಂಕ್ ಸಭಾಂಗಣದಲ್ಲಿ ಶುಕ್ರವಾರ ಸಂಜೆ ಹಮ್ಮಿಕೊಳ್ಳಲಾಗಿದ್ದ ಸಹಕಾರಿ ಇಲಾಖೆ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈಗಾಗಲೇ ರೈತರ ಸಾಲಮನ್ನಾಕ್ಕೆ ಸಂಬಂಧಿಸಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ರೈತರಿಂದ ದಾಖಲೆಗಳನ್ನು ಪಡೆದು ಆನ್‌ಲೈನ್‌ನಲ್ಲಿ ಅಳವಡಿಸುವ ಪ್ರಕ್ರಿಯೆ ಅಂತಿಮ ಹಂತಕ್ಕೆ ಬಂದಿದೆ. ರೈತರಿಗೆ ಸಾಲ ನೀಡುವಾಗ ಅವರ ಪಹಣಿಯ ಆಧಾರದ ಮೇಲೆ ನೀಡಲಾಗುತ್ತದೆ. ಪಡಿತರ ಚೀಟಿ ತೆಗೆದುಕೊಳ್ಳಬೇಕೆಂಬ ನಿಯಮ ಇಲ್ಲ. ಅವರಿಂದ ಡಿಕ್ಲರೇಷನ್ ಪಡೆದುಕೊಂಡರೆ ಸಾಕು ಎಂದು ಸಚಿವರು ಹೇಳಿದರು.

ಜಿಲ್ಲೆಯಲ್ಲಿ ಡಿಸಿಸಿ ಬ್ಯಾಂಕ್ ಸಹಕಾರಿ ಸಂಘಗಳ ಮೂಲಕ 1 ಲಕ್ಷದ ವರೆಗೆ ಸಾಲ ಪಡೆದಿರುವ 28,664 ರೈತರ 175.66 ಕೋಟಿ ರೂ. ಸಾಲ ಮನ್ನಾ ಸೌಲಭ್ಯ ದೊರೆಯಲಿದೆ. ಮಾರ್ಚ್ ಅಂತ್ಯದೊಳಗೆ ಸಾಲ ಮನ್ನಾ ಯೋಜನೆಗೆ ಒಳಪಡುವ ಎಲ್ಲಾ ರೈತರಿಗೂ ತಿಳುವಳಿ ಪತ್ರ ನೀಡುವಂತೆ ಸೂಚಿಸಿದ ಅವರು, ಬಡವರ ಬಂಧು ಯೋಜನೆಯಡಿ 53 ಸಾವಿರ ಬೀದಿ ಬದಿ ವ್ಯಾಪಾರಿಗಳಿಗೆ ಕನಿಷ್ಠ 2 ಸಾವಿರ ದಿಂದ 10 ಸಾವಿರ ರೂ. ರವರೆಗೆ ಸಾಲ ನೀಡಲಾಗಿದೆ. ರಾಜ್ಯದಲ್ಲಿ 4.50 ಲಕ್ಷ ಬೀದಿ ಬದಿ ವ್ಯಾಪಾರಿಗಳಿದ್ದು, 2019ನೇ ಸಾಲಿನಲ್ಲಿ ಎಲ್ಲರಿಗೂ ಸಾಲ ನೀಡುವ ಗುರಿ ಹೊಂದಿದ್ದು, ಬಡವರ ಬಂಧು ಯೋಜನೆಯಿಂದ ಉತ್ತಮ ಪ್ರತ್ರಿಕ್ರಿಯೆ ವ್ಯಕ್ತವಾಗುತ್ತಿದೆ ಎಂದರು.

ಸಭೆಯಲ್ಲಿ ಜಿಲ್ಲಾ ನೋಂದಣಾಧಿಕಾರಿಗಳು, ಸಹಕಾರಿ ಇಲಾಖೆಯ ಅಧಿಕಾರಿಗಳು ಹಾಗೂ ಕೃಷಿ ಮಾರುಕಟ್ಟೆ ಅಧಿಕಾರಿಗಳು ಉಪಸ್ಥಿತರಿದ್ದರು.

‘ಕನಿಷ್ಠ ಬೆಂಬಲ ಬೆಲೆ ಸಂರಕ್ಷಣೆಗೆ ರೈತ ಕಣಜ ಯೋಜನೆ ಜಾರಿ’

ರಾಜ್ಯದಲ್ಲಿ ಕೃಷಿ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯ ಸಂರಕ್ಷಣಾ ವ್ಯವಸ್ಥೆಯನ್ನು ಆವರ್ತಕ ನಿಧಿ ಮೂಲಕ ಒದಗಿಸಲು ರೈತ ಕಣಜ ಯೋಜನೆಯನ್ನು ಜಾರಿಗೆ ತರಲಾಗಿದೆ. ಸಣ್ಣ ಮತ್ತು ಅತೀ ಸಣ್ಣ ರೈತರಿಗೆ ಅವರ ಆಭರಣಗಳ ಮೇಲೆ ಶೇ. 3ರ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ನೀಡುವ ಗೃಹಲಕ್ಷ್ಮೀ ಬೆಳೆ ಸಾಲ ಯೋಜನೆ ಜಾರಿಗೆ ತರಲಾಗಿದೆ. ಅಲ್ಲದೆ, ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ ರೈತರಿಗೆ ತೂಕದಲ್ಲಿ ಮೋಸ ಮಾಡುವುದನ್ನು ತಡೆಯು ಸಲುವಾಗಿ ಸ್ಮಾರ್ಟ್ ವೈಯಿಂಗ್ ಮೆಶಿನ್‌ಗಳನ್ನು ನೀಡಲಾಗುತ್ತಿದೆ ಎಂದು ಸಹಕಾರಿ ಸಚಿವ ಬಂಡೆಪ್ಪ ಕಾಶೆಂಪೂರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News