ರಾಜ್ಯ ಮುಕ್ತ ವಿವಿ ಕುಲಪತಿ ಪ್ರೊ.ಶಿವಲಿಂಗಯ್ಯ ರಾಜೀನಾಮೆಗೆ ಎನ್ಎಸ್ ಯುಐ ಆಗ್ರಹ

Update: 2019-02-16 18:44 GMT

ಮೈಸೂರು,ಫೆ.16: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಡಿ.ಶಿವಲಿಂಗಯ್ಯ ರಾಜಕೀಯ ಪಕ್ಷವೊಂದರ ಪರವಾಗಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಪಕ್ಷದ ವಿದ್ಯಾರ್ಥಿ ಘಟಕವಾದ ಎನ್.ಎಸ್.ಯು.ಐ ಪ್ರತಿಭಟನೆ ನಡೆಸಿ ರಾಜೀನಾಮೆಗೆ ಆಗ್ರಹಿಸಿದ ಘಟನೆ ನಡೆಯಿತು.

ನಗರದ ಮುಕ್ತ ವಿಶ್ವವಿದ್ಯಾನಿಲಯದ ಆವರಣದಲ್ಲಿ ಶನಿವಾರ ಕೆಎಸ್‍ಒಯು ಹಾಗೂ ಎಬಿವಿಪಿ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಸಮಾರಂಭವನ್ನು ರಂಗಭೂಮಿ ನಟ ಬಾಬು ಹಿರಣಯ್ಯ ಉದ್ಘಾಟಿಸಿದರೆ, ಮುಕ್ತ ವಿವಿ ಕುಲಪತಿ ಪ್ರೊ.ಡಿ.ಶಿವಲಿಂಗಯ್ಯ ಮುಖ್ಯ ಅತಿಥಿಯಾಗಿದ್ದರು. ಕಾರ್ಯಕ್ರಮದ ಅಂಗವಾಗಿ ಕ್ಯಾಂಪಸ್ ತುಂಬೆಲ್ಲ ಬಿಜೆಪಿಯ ವಿದ್ಯಾರ್ಥಿ ಘಟಕವಾದ ಎಬಿವಿಪಿಯ ಬ್ಯಾನರ್ ಹಾಗೂ ಬಾವುಟಗಳನ್ನು ಕಟ್ಟಲಾಗಿತ್ತು ಎನ್ನಲಾಗಿದೆ.

ವಿಶ್ವವಿದ್ಯಾನಿಲಯದ ಆವರಣದಲ್ಲಿ ಯಾವುದೇ ರಾಜಕೀಯ ಚಟುವಟಿಕೆ ನಡೆಯಬಾರದು. ಆದರೆ ಇದನ್ನು ಉಲ್ಲಂಘಿಸಿ ಎಬಿವಿಪಿ ಸಂಘಟನೆಗೆ ಕಾರ್ಯಕ್ರಮ ನಡೆಸಲು ಹಾಗೂ ಸಂಘಟನೆ ಬಾವುಟ ಕಟ್ಟಲು ಅವಕಾಶ ನೀಡಿರುವುದನ್ನು ವಿರೋಧಿಸಿ ಎನ್ಎಸ್ ಯುಐ ಮುಖಂಡರಾದ ಎಸ್.ರಾಜೇಂದ್ರ ಪ್ರಸಾದ್, ರಫೀಕ್ ನೇತೃತ್ವದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಕುಲಪತಿ ಪ್ರೊ.ಡಿ.ಶಿವಲಿಂಗಯ್ಯ ಅವರಿಗೆ ಘೇರಾವ್ ಹಾಕಿ ಧಿಕ್ಕಾರ ಕೂಗಿದರು.

ಬಿಜೆಪಿಯ ಅಂಗ ಸಂಸ್ಥೆಯಾದ ಎಬಿವಿಪಿ ಸಹಯೋಗದಲ್ಲಿ ಕಾರ್ಯಕ್ರಮ ಮಾಡುವ ಮೂಲಕ ವಿವಿ ಆವರಣದಲ್ಲಿ ರಾಜಕೀಯ ಚಟುವಟಿಕೆ ನಡೆಸಲು ಅವಕಾಶ ಮಾಡಿಕೊಟ್ಟಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನಕಾರರನ್ನು ಸಮಧಾನ ಪಡಿಸಲು ಕುಲಪತಿಗಳು ಯತ್ನಿಸಿದರಾದರೂ ಪ್ರಯೋಜನವಾಗಲಿಲ್ಲ. ಬದಲಿಗೆ, ಬಿಜೆಪಿ ಜತೆ ಶಾಮೀಲಾಗಿದ್ದೀರಿ ಎಂದು ಕುಲಪತಿ ಪ್ರೊ.ಡಿ.ಶಿವಲಿಂಗಯ್ಯ ಅವರನ್ನು ತರಾಟೆ ತೆಗೆದುಕೊಂಡ ಪ್ರತಿಭಟನಕಾರರು, ಕೂಡಲೇ ಕುಲಪತಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News