ಪುಲ್ವಾಮ ದಾಳಿ: ಉಗ್ರರ ವಿರುದ್ಧ ಸೂಕ್ತ ಕ್ರಮಕ್ಕೆ ಒತ್ತಾಯಿಸಿ ನ್ಯಾಯವಾದಿಗಳಿಂದ ಧರಣಿ

Update: 2019-02-16 18:55 GMT

ಬಿಜಾಪುರ ಫೆ,16: ಕಾಶ್ಮೀರದ ಪುಲ್ವಾಮದಲ್ಲಿ ವೀರಯೋಧರ ಮೇಲೆ ದಾಳಿ ನಡೆಸಿದ ಉಗ್ರರ ಮೇಲೆ ಉಗ್ರ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಬಿಜಾಪುರ ಜಿಲ್ಲಾ ನ್ಯಾಯವಾದಿಗಳ ಸಂಘದ ವತಿಯಿಂದ ನ್ಯಾಯವಾದಿಗಳು ಶನಿವಾರ ನ್ಯಾಯಾಲಯದ ಕಾರ್ಯ-ಕಲಾಪಗಳಿಂದ ದೂರ ಉಳಿದು ಪ್ರತಿಭಟನೆ ನಡೆಸಿದರು.

ನಗರದ ಗಾಂಧಿ ವೃತ್ತದಲ್ಲಿ ಬೃಹತ್ ಪ್ರತಿಭಟನಾ ಸಭೆ ನಡೆಸಿದ ಅವರು, ನಂತರ ಅಲ್ಲಿಂದ ಬೈಕ್ ರ್ಯಾಲಿ ಮುಖಾಂತರ ಜಿಲ್ಲಾಧಿಕಾರಿಗಳ ಕಚೇರಿಗೆ ತಲುಪಿದರು. ನಂತರ ಉಗ್ರಗಾಮಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಜಿಲ್ಲಾಧಿಕಾರಿಗಳ ಮುಖಾಂತರ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ನೇತೃತ್ವ ವಹಿಸಿದ್ದ ಜಿಲ್ಲಾ ನ್ಯಾಯವಾದಿಗಳ ಸಂಘದ ಜಿಲ್ಲಾಧ್ಯಕ್ಷ ಬಿ.ಎಂ.ಜರಾಳಿ ಮಾತನಾಡಿ, ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಘಟನೆ ಅತ್ಯಂತ ನೋವು ತಂದಿದೆ. ದೇಶದ ರಕ್ಷಣೆಯ ಕಾಯಕ ಜೀವಿಗಳನ್ನು ಕೊಂದಿರುವ ಉಗ್ರರಿಗೆ ಮನುಷ್ಯತ್ವವೆಂಬುದೇ ಇಲ್ಲ. ಭಯ,ದ್ವೇಷ ಮೂಡಿಸುವ ದೃಷ್ಟಿಯಿಂದ ಅಮಾಯಕರ ಪ್ರಾಣವನ್ನು ಬಲಿ ತೆಗೆದುಕೊಳ್ಳುತ್ತಿರುವ ಉಗ್ರಗಾಮಿಗಳು ಕೂಡಲೇ ನಿರ್ನಾಮ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ದಿಟ್ಟ ಸಂಕಲ್ಪವನ್ನು ಮಾಡಬೇಕಿದೆ ಎಂದು ಒತ್ತಾಯಿಸಿದರು.

ಉಪಾಧ್ಯಕ್ಷೆ ಗಿರೀಜಾ ಶಿವಪೂಜಿ, ಪದಾಧಿಕಾರಿಗಳಾದ ಆರ್.ಎಸ್.ಅಂಗಡಿ, ಎಸ್.ಎಸ್.ಬಿರಾದಾರ, ಎಲ್.ಬಿ.ಬಿರಾದಾರ, ಡಿ.ಎಲ್.ಹರಿಜನ, ಎಂ.ಎಸ್. ಇನಾಮದಾರ, ಎ.ಎಸ್.ಪಾಟೀಲ, ವಿ.ಎಸ್.ಪಾಟೀಲ, ವಿ.ಎಸ್.ಒಡೆಯರ, ರೇವಣಸಿದ್ದಪ್ಪ ಗುಡ್ಡಿ ಮೊದಲಾದವರು ಪಾಲ್ಗೊಂಡಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News