ಪುಲ್ವಾಮ ದಾಳಿಗೆ ಪಾಕ್ ಸೇನಾ ಆಸ್ಪತ್ರೆಯಿಂದಲೇ ಒಪ್ಪಿಗೆ ನೀಡಿದ್ದ ಮಸೂದ್ ಅಝರ್

Update: 2019-02-17 03:51 GMT

ಶ್ರೀನಗರ, ಫೆ.17: ಪಠಾಣ್‌ಕೋಟ್ ದಾಳಿಯ ಸೂತ್ರಧಾರ ಹಾಗೂ ಜೆಇಎಂ ಸಂಘಟನೆಯ ಮುಖ್ಯಸ್ಥ ಮಸೂದ್ ಅಝರ್, ಪಾಕಿಸ್ತಾನದ ಸೇನಾ ನೆಲೆ ಆಸ್ಪತ್ರೆಯಿಂದಲೇ, ಪುಲ್ವಾಮ ಆತ್ಮಹತ್ಯಾ ದಾಳಿಗೆ ತಮ್ಮ ಸಂಘಟನೆಯ ಕಾರ್ಯಕರ್ತರಿಗೆ ಸೂಚನೆ ನೀಡಿದ್ದ ಎಂಬ ಅಂಶ ಇದೀಗ ಬಹಿರಂಗವಾಗಿರುವುದಾಗಿ 'ದಿ ಟೈಮ್ಸ್ ಆಫ್ ಇಂಡಿಯಾ' ವರದಿ ಮಾಡಿದೆ.

ಕಳೆದ ನಾಲ್ಕು ತಿಂಗಳಿನಿಂದ ಪಾಕಿಸ್ತಾನದ ರಾವಲ್ಪಿಂಡಿ ಸೇನಾ ನೆಲೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಸೂದ್, ಯುನೈಟೆಡ್ ಜಿಹಾದ್ ಕೌನ್ಸಿಲ್ (ಯುಜೆಸಿ)ನ ಕಳೆದ ಆರು ಸಭೆಗಳಿಗೆ ಹಾಜರಾಗಿರಲಿಲ್ಲ. ಯುಜೆಸಿ ಬ್ಯಾನರ್‌ನಡಿ ಎಲ್ಲ ಜಿಹಾದಿ ಸಂಘಟನೆಗಳನ್ನು ಸೇರಿಸಿ ಭಾರತದ ವಿರುದ್ಧ ಈ ಗುಂಪುಗಳನ್ನು ಎತ್ತಿಕಟ್ಟುವ ಕೆಲಸವನ್ನು ಪಾಕಿಸ್ತಾನ ಮಾಡುತ್ತಿದೆ ಎಂದು ವರದಿ ತಿಳಿಸಿದೆ.

ಆದಾಗ್ಯೂ ಎಂಟು ದಿನಗಳ ಹಿಂದೆ ಜೆಇಎಂ ಸದಸ್ಯರು ಪುಲ್ವಾಮ ಉಗ್ರ ದಾಳಿಗೆ ಸಿದ್ಧತೆ ನಡೆಸುತ್ತಿದ್ದಾಗ, ಅಝರ್ ಕ್ಷೀಣ ಧ್ವನಿಯ ಆಡಿಯೊ ಸಂದೇಶವನ್ನು ಕಳುಹಿಸಿದ್ದ. ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಟ್ರಾಲ್‌ನಲ್ಲಿ ಭದ್ರತಾ ಪಡೆಗಳು ಅಳಿಯ ಉಸ್ಮಾನ್‌ನನ್ನು ಹತ್ಯೆ ಮಾಡಿದ್ದಕ್ಕೆ ಪ್ರತೀಕಾರವಾಗಿ ಈ ದಾಳಿ ನಡೆಸಬೇಕು ಎಂದು ತನ್ನ ಕಾರ್ಯಕರ್ತರಿಗೆ ಸೂಚನೆ ನೀಡಿರುವುದು ಆಡಿಯೊದಲ್ಲಿ ಸ್ಪಷ್ಟವಾಗಿ ಕೇಳಿಸುತ್ತಿದೆ. "ಈ ಯುದ್ಧದಲ್ಲಿ ಸಾಯುವುದಕ್ಕಿಂತ ಹೆಚ್ಚಿನ ಸುಖ ಬೇರೊಂದಿಲ್ಲ" ಎಂದು ಅಝರ್ ಹೇಳಿದ್ದಾನೆ.
"ಕೋಯಿ ಇನ್ಹೆ ದಸ್ತ್‌ಗಂಜ್ ಕಹೇಗಾ, ಕೋಯಿ ಇನ್ಹೆ ನಿಕಾಮ್ಮ ಕಹೇಗಾ, ಕೋಯಿ ಇನ್ಹೆ ಪಾಗಲ್ ಕಹೇಗ, ಕೋಯಿ ಇನ್ಹೆ ಅಮನ್ ಕೇ ಲಿಯೇ ಖತ್ರಾ ಕಹಾ..(ಕೆಲವು ಮಂದಿ ಇದನ್ನು ಉಗ್ರರ ಅನಾಕರಿಕ ಕೃತ್ಯ, ಹುಚ್ಚು ಅಥವಾ ಶಾಂತಿಗೆ ಅಪಾಯ ಎಂದು ಕರೆಯಬಹುದು..ಆದರೆ ಅವರು ಹೋಗಿ ಗಡಿಯುದ್ದಕ್ಕೂ ಪ್ರಕ್ಷುಬ್ಧಗೊಳಿಸಲಿ) ಎಂದು ಸೂಚನೆ ನೀಡಿದ್ದಾನೆ.

ಈ ದಾಳಿಯ ಬಗ್ಗೆ ಅಝರ್, ಯುಜೆಸಿಯ ಇತರ ಸಹ ಸಂಘಟನೆಗಳಿಗೂ ಸುಳಿವು ಬಿಟ್ಟುಕೊಟ್ಟಿರಲಿಲ್ಲ. ಬದಲಾಗಿ ಅಝರ್ ರಹಸ್ಯವಾಗಿ ತನ್ನ ಮತ್ತೊಬ್ಬ ಅಳಿಯ ಮುಹಮ್ಮದ್ ಉಮರ್ ಹಾಗೂ ಅಬ್ದುಲ್ ರಶೀದ್ ಘಾಝಿ ಮೂಲಕ ಯುವಕರ ಮನವೊಲಿಸಲು ಮತ್ತು ದಾಳಿ ನಡೆಸಲು ಸ್ಫೂರ್ತಿ ತುಂಬಲು ಕಳುಹಿಸಿದ್ದಾನೆ.

 "ಯಾವ ಜೆಇಎಂ ಸದಸ್ಯರು ಕೂಡಾ ಮುಂದೆ ಬರಲಾರರು. ಎಲ್ಲರೂ ಉಮರ್, ಇಸ್ಮಾಯಿಲ್ ಹಾಗೂ ಘಾಝಿಯವರ ನೇತೃತ್ವದಲ್ಲಿ ದಕ್ಷಿಣ ಕಾಶ್ಮೀರದಲ್ಲಿ ಅವಿತಿದ್ದಾರೆ" ಎಂದು ಗುಪ್ತಚರ ವಿಭಾಗದ ಮೂಲಗಳು ತಿಳಿಸಿವೆ. ಕಾಶ್ಮೀರದಲ್ಲಿ ಸುಮಾರು 60 ಮಂದಿ ಜೈಶ್ ಉಗ್ರರು ಕಾರ್ಯಾಚರಿಸುತ್ತಿದ್ದು, ಈ ಪೈಕಿ 35 ಮಂದಿ ಪಾಕಿಸ್ತಾನಿಯರು ಎಂದು ಅವರು ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News