ಪುಲ್ವಾಮದಲ್ಲಿ ಉಗ್ರರೊಂದಿಗೆ ಎನ್‌ಕೌಂಟರ್: ಮೇಜರ್ ಸಹಿತ ಐವರು ಯೋಧರು ಹುತಾತ್ಮ

Update: 2019-02-18 18:58 GMT

ಶ್ರೀನಗರ, ಫೆ. 18: ದಕ್ಷಿಣ ಕಾಶ್ಮೀರದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಪುಲ್ವಾಮ ಭಯೋತ್ಪಾದಕ ದಾಳಿಯ ಪ್ರಧಾನ ಸೂತ್ರದಾರ ಸಹಿತ ಜೈಸೆ ಮುಹಮ್ಮದ್ ಭಯೋತ್ಪಾದಕ ಸಂಘಟನೆಯ ಇಬ್ಬರು ಉಗ್ರರು ಹತರಾಗಿದ್ದಾರೆ. ಅಲ್ಲದೆ, ನಾಲ್ವರು ಯೋಧರು ಹಾಗೂ ಓರ್ವ ನಾಗರಿಕ ಮೃತಪಟ್ಟಿದ್ದಾರೆ. ಪುಲ್ವಾಮ ಜಿಲ್ಲೆಯ ಪಿಂಗ್ಲಾನ್ ಪ್ರದೇಶದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಪುಲ್ವಾಮ ದಾಳಿಯ ಪ್ರಧಾನ ಸೂತ್ರಧಾರನೆಂದು ಹೇಳಾದ ಪಾಕಿಸ್ತಾನಿ ಉಗ್ರ ಹಾಗೂ ಸ್ಥಳೀಯ ಉಗ್ರ ಹಿಲಾಲ್ ಹತರಾಗಿದ್ದಾರೆ.

ಪಾಕಿಸ್ತಾನಿ ರಾಷ್ಟ್ರೀಯನಾಗಿರುವ ಹತ ಉಗ್ರನನ್ನು ಕಮ್ರಾನ್ ಆಲಿಯಾಸ್ ಘಾಝಿ ರಶೀದ್ ಎಂದು ಗುರುತಿಸಲಾಗಿದೆ. ಈತ ಜೈಸೆ ಮುಹಮ್ಮದ್‌ನ ಉನ್ನತ ಕಮಾಂಡರ್. ಹಿಲಾಲ್ ಅಹ್ಮದ್ ಭಯೋತ್ಪದಕ ಸಂಘಟನೆಗೆ ಸ್ಥಳೀಯವಾಗಿ ನಿಯೋಜಿತನಾದ ಉಗ್ರ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗುಂಡಿನ ಚಕಮಕಿಯಲ್ಲಿ ಮೃತಪಟ್ಟ ಯೋಧರನ್ನು ಮೇಜರ್ ವಿಭೂತಿ ಶಂಕರ್ ಧೋಂಡಿಯಾಲ್, ಹವಾಲ್ದಾರ್ ಶಿಯೋ ರಾಮ್, ಸಿಪಾಯಿ ಹರಿ ಸಿಂಗ್ ಹಾಗೂ ಸಿಪಾಯಿ ಅಜಯ್ ಕುಮಾರ್ ಎಂದು ಗುರುತಿಸಲಾಗಿದೆ. ಇವರೆಲ್ಲರೂ 55 ರಾಷ್ಟ್ರೀಯ ರೈಫಲ್ಸ್‌ಗೆ ಸೇರಿದವರು. ಉಗ್ರರು ಅಡಗಿರುವ ಮಾಹಿತಿ ಸ್ವೀಕರಿಸಿದ ಬಳಿಕ ಭಾರತೀಯ ಸೇನೆಯ 55 ರಾಷ್ಟ್ರೀಯ ರೈಫಲ್ಸ್, ಸಿಆರ್‌ಪಿಎಫ್ ಹಾಗೂ ವಿಶೇಷ ಕಾರ್ಯಾಚರಣೆ ಗುಂಪಿನ ಜಂಟಿ ತಂಡ ನಿನ್ನೆ ರಾತ್ರಿ ಪಿಂಗ್ಲಾನ್ ಪ್ರದೇಶವನ್ನು ಸುತ್ತುವರಿದು ಶೋಧ ಕಾರ್ಯಾಚರಣೆ ಆರಂಭಿಸಿತು. ಈ ಸಂದರ್ಭ ಉಗ್ರರು ಗುಂಡು ಹಾರಿಸಿದರು. ಯೋಧರು ಪ್ರತಿದಾಳಿ ನಡೆಸಿದರು. ಇದರಿಂದ ಉಗ್ರರು ಹಾಗೂ ಭದ್ರತಾ ಪಡೆ ನಡುವೆ ಗುಂಡಿನ ಚಕಮಕಿ ನಡೆಯಿತು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಗುಂಡಿನ ಚಕಮಕಿಯಲ್ಲಿ ಗುಂಡಿನಿಂದ ಗಂಭೀರ ಗಾಯಗೊಂಡ ನಾಗರಿಕರೋರ್ವರು ಆಸ್ಪತ್ರೆಯಲ್ಲಿ ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News