ಕೊಪ್ಪ ತಾಲೂಕು ಆಡುಗಾರು ವ್ಯಕ್ತಿಗೆ ಮಂಗನ ಕಾಯಿಲೆ ಸೋಂಕು: ಡಿಎಚ್‍ಒ ಡಾ.ಮಲ್ಲಿಕಾರ್ಜುನಪ್ಪ

Update: 2019-02-18 18:11 GMT

ಚಿಕ್ಕಮಗಳೂರು, ಫೆ.18: ಜಿಲ್ಲೆಯ ಕೊಪ್ಪ ತಾಲೂಕಿನಲ್ಲಿ ವ್ಯಕ್ತಿಯೊಬ್ಬರ ರಕ್ತದ ಮಾದರಿಯಲ್ಲಿ ಕೆಎಫ್‍ಡಿ ವೈರಾಣು ಕಂಡುಬಂದಿದ್ದು, ತರೀಕೆರೆ, ಕೊಪ್ಪ ತಾಲೂಕಿನಲ್ಲಿ ಕಂಡುಬಂದ ಮಂಗಗಳ ಕಳೇಬರಗಳಲ್ಲಿ ಮಂಗನ ಕಾಯಿಲೆ ವೈರಣುಗಳಿರುವುದು ಪ್ರಯೋಗಾಲಯದ ವರದಿಯಿಂದ ದೃಢಪಟ್ಟಿದೆ. ಈ ಸಂಬಂಧ ಅಗತ್ಯ ಪ್ರದೇಶಗಳಲ್ಲಿ ಆರೋಗ್ಯ ಇಲಾಖೆಯಿಂದ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಸಾರ್ವಜನಿಕರು ಜ್ವರದ ಲಕ್ಷಣಗಳು ಕಂಡು ಬಂದಲ್ಲಿ ತಕ್ಷಣ ವೈದ್ಯರಲ್ಲಿ ಪರೀಕ್ಷಿಸಿಕೊಳ್ಳುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮಲ್ಲಿಕಾರ್ಜುನಪ್ಪ ತಿಳಿಸಿದ್ದಾರೆ.

ಸೋಮವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾದ್ಯಂತ ಇದುವರೆಗೂ ಸುಮಾರು 22 ಮಂಗಗಳು ಸಾವನ್ನಪ್ಪಿವೆ. ಈ ಪೈಕಿ ತರೀಕೆರೆ ತಾಲೂಕಿನ ಗೋಪಾಲ ಗ್ರಾಮದಲ್ಲಿ ಸಾವನ್ನಪ್ಪಿದ ಒಂದು ಮಂಗದ ಕಳೇಬರದಲ್ಲಿ ಮಂಗನ ಕಾಯಿಲೆಯ ವೈರಾಣು ಕಂಡು ಬಂದಿದೆ ಎಂದ ಅವರು, ಕೊಪ್ಪ ತಾಲೂಕಿನ ಆಡುಗಾರು ಗ್ರಾಮದ ವ್ಯಕ್ತಿಯೊರ್ವರ ರಕ್ತದ ಮಾದರಿಯಲ್ಲಿ ಮಂಗನ ಕಾಯಿಲೆ ವೈರಸ್ ಕಂಡು ಬಂದಿದೆ. ಈ ಎರಡು ತಾಲೂಕುಗಳ ಸುತ್ತಮುತ್ತಲ ಗ್ರಾಮಗಳಲ್ಲಿ ಕಾಯಿಲೆ ಹರಡದಂತೆ ಡಿಎಪಿ ದ್ರವಣ ಮತ್ತು ಚುಚ್ಚುಮದ್ದು ನೀಡಲಾಗುತ್ತಿದೆ ಎಂದು ತಿಳಿಸಿದರು.

ಆರೋಗ್ಯ ಇಲಾಖೆಯಿಂದ ಮಂಗನ ಕಾಯಿಲೆ ರೋಗ ಲಕ್ಷಣದ ಬಗ್ಗೆ ಕರಪತ್ರ ಮುದ್ರಿಸಿ ಹಂಚಲಾಗುತ್ತಿದೆ. ಮಂಗಗಳು ಸತ್ತ ಗ್ರಾಮಗಳು ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ಮೆಲಥಿನ್ ಪೌಡರ್ ಸಿಂಪಡಣೆ ಮಾಡಲಾಗುತ್ತಿದೆ. ಆರೋಗ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಯು ತಂಡ ಮಾಡಿಕೊಂಡು ಜನರಲ್ಲಿ ಜಾಗೃತಿ  ಮೂಡಿಸುವ ಕಾರ್ಯ ಸಮರೋಪಾದಿರಯಲ್ಲಿ ನಡೆಯುತ್ತಿದೆ. ಪ್ರತಿನಿತ್ಯ ಕಾಡಿಗೆ ಹೋಗುವ ವ್ಯಕ್ತಿಗಳು ಮತ್ತು ಅರಣ್ಯ ಇಲಾಖೆ ಸಿಬ್ಬಂದಿಗೆ ಡಿಎಪಿ ಆಯಿಲ್ ಬಾಟಲ್‍ಗಳನ್ನು ನೀಡಲಾಗಿದೆ. ಯಾರಿಗಾದರೂ ಜ್ವರದ ಲಕ್ಷಣ ಕಂಡು ಬಂದಲ್ಲಿ ತಕ್ಷಣ ವೈದ್ಯರನ್ನು ಸಂಪರ್ಕಿಸುವಂತೆ ಸಲಹೆ ನೀಡಿದ ಅವರು, ಶಿವಮೊಗ್ಗದಿಂದ 500 ಕೆಎಫ್‍ಡಿ ಚುಚ್ಚುಮದ್ದುಗಳನ್ನು ತರಿಸಿಕೊಳ್ಳಲಾಗಿದ್ದು, ಅಗತ್ಯವಿರುವಷ್ಟು ಚುಚ್ಚುಮದ್ದು ನೀಡುವಂತೆ ಸರಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಶೀಘ್ರದಲ್ಲಿಯೇ ಇನ್ನಷ್ಟು ಚುಚ್ಚುಮದ್ದು ಜಿಲ್ಲೆಗೆ ಬರಲಿದೆ ಎಂದರು.

ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರದ ಯೋಜನೆಯಡಿ ಅನೇಕ ಕಾರ್ಯಕ್ರಮಗಳನ್ನು ಆರೋಗ್ಯ ಇಲಾಖೆ ಹಮ್ಮಿಕೊಂಡಿದೆ. ಆಯುಷ್ಮಾನ್‍ ಭಾರತ್, ಆರೋಗ್ಯ ಕರ್ನಾಟಕ ಯೋಜನೆಯಡಿ ಜಿಲ್ಲೆಯಲ್ಲಿ 2,328 ಕುಂಟುಂಬಗಳು 9 ಕೋಟಿ 92 ಲಕ್ಷ ರೂ.ನಷ್ಟು ಯೋಜನೆಯ ಪ್ರಯೋಜನ ಪಡೆದುಕೊಂಡಿದ್ದಾರೆ. 1,614 ಕಾಯಿಲೆಗಳಿಗೆ ಈ ಯೋಜನೆ ಒಳಪಟ್ಟಿದೆ. ಜನರು ಇದರ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ ಎಂದರು. 

ಜಿಲ್ಲೆಯಲ್ಲಿ ಒಟ್ಟು 22 ಡಯಾಲಿಸಿಸ್ ಮೆಷಿನ್ ಕಾರ್ಯನಿರ್ವಹಿಸುತ್ತಿವೆ. ಡಿಸೆಂಬರ್ ಅಂತ್ಯಕ್ಕೆ ಪ್ರತೀ ತಿಂಗಳು 366 ಜನರಿಗೆ ಡಯಾಲಿಸಿಸ್ ಚಿಕಿತ್ಸೆ ನೀಡಿದ್ದು, 3,178 ಜನರಿಗೆ ಡಯಾಲಿಸಿಸ್ ಮಾಡಲಾಗಿದೆ. ಜಿಲ್ಲಾ ಹಾಗೂ ಐದು ತಾಲೂಕು ಕೇಂದ್ರ ಮತ್ತು ಮೂರು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ  ಜನರಿಕ್ ಮಳಿಗೆ ತೆರಯಲಾಗಿದೆ. ಜನರಿಕ್ ಮಳಿಗೆಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ಎಲ್ಲಾ  ತಾಲೂಕು ಕೇಂದ್ರಗಳಲ್ಲೂ ಐಸಿಯು ಘಟಕ ಸ್ಥಾಪಿಸಲಾಗಿದೆ ಎಂದರು. 

ಡಿಸೆಂಬರ್ ಅಂತ್ಯಕ್ಕೆ ಜಿಲ್ಲೆಯಲ್ಲಿ 78 ಡೆಂಗ್ ಪ್ರಕರಣ ಹಾಗೂ ಮಲೇರಿಯಾದ 12 ಪ್ರಕರಣಗಳು ಕಂಡು ಬಂದಿವೆ. ಯಾವುದೇ ವ್ಯಕ್ತಿಯಲ್ಲಿ ಜ್ವರ ಕಾಣಿಸಿಕೊಂಡ ತಕ್ಷಣ ವೈದ್ಯರನ್ನು ಕಾಣಬೇಕು. ಅದರಲ್ಲೂ ಸರ್ಕಾರಿ ವೈದ್ಯರ ಬಳಿ ತಪಾಸಣೆ ಮಾಡಿಸಿಕೊಳ್ಳುವುದು ಉತ್ತಮ. ಅವರಿಗೆ ಆ ಪ್ರದೇಶದ ಎಲ್ಲಾ ಮಾಹಿತಿಗಳು ಲಭ್ಯವಿರುತ್ತದೆ. ಆಯಾ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯಾವ ರೋಗ ಲಕ್ಷಣಗಳು ಕಂಡು ಬರುತ್ತಿದೆ ಎಂಬ ಸಮಗ್ರ ಮಾಹಿತಿ ಇರುವುದರಿಂದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವುದು ಉತ್ತಮ ಎಂದರು. 

ಆರೋಗ್ಯ ಇಲಾಖೆಯಿಂದ ಅನೇಕ ಯೋಜನೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಮಾರ್ಚ್ ತಿಂಗಳಲ್ಲಿ ಪಲ್ಸ್ ಪೋಲಿಯೋ ಲಸಿಕೆ ಕಾರ್ಯಕ್ರಮ ಇಲಾಖೆಯಿಂದ ಆಯೋಜಿಸಲಾಗುತ್ತಿದೆ. ಸಾರ್ವಜನಿಕರಿಗೆ ಸರಿಯಾದ ಮಾಹಿತಿ ಲಭ್ಯವಾಗದ ಕಾರಣದಿಂದ ಜನರಿಗೆ ಯೋಜನೆಯ ಅರಿವಾಗುತ್ತಿಲ್ಲ. ಎಲ್ಲಾ ಯೋಜನೆಗಳನ್ನು ಸಾರ್ವಜನಿಕರು ಬಳಕೆ ಮಾಡಿಕೊಳ್ಳುವಂತೆ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕುಟುಂಬ ಅಧಿಕಾರಿ ಅಶ್ಥತ್‍ ಬಾಬು, ಜಿಲ್ಲಾ ಆರ್‍ಸಿಎಚ್ ಕೆ.ಭರತ್‍ ಕುಮಾರ್, ಜಿಲ್ಲಾ ಮಲೇರಿಯಾ ಸರ್ವೇಕ್ಷಣಾಧಿಕಾರಿ ಮಂಜುನಾಥ್ ಉಪಸ್ಥಿತರಿದ್ದರು.

ಜಿಲ್ಲೆಯಲ್ಲಿ 22 ಎಂಬಿಬಿಎಸ್ ವೈದ್ಯರ ಕೊರತೆ ಇದೆ. ವೈದ್ಯರ ಕೊರತೆ ಇರುವಲ್ಲಿಗೆ ಆಯುಷ್ ವೈದ್ಯರನ್ನು ನೇಮಕ ಮಾಡಿಕೊಳ್ಳಲಾಗಿದೆ. ಮೂಡಿಗೆರೆ, ಕೊಪ್ಪ, ಎನ್.ಆರ್.ಪುರ ತಾಲೂಕಿನಲ್ಲಿ ತಜ್ಞ ವೈದ್ಯರ ಸಮಸ್ಯೆ ಇತ್ತು, ಕೊಪ್ಪ, ಎನ್.ಆರ್.ಪುರ ತಾಲೂಕಿನ ಈ ಸಮಸ್ಯೆಯನ್ನು ನಿವಾರಿಸಿದ್ದೇವೆ. ಮೂಡಿಗೆರೆ ತಾಲೂಕಿನಲ್ಲಿ ಸಮಸ್ಯೆ ಇದೆ. ಜಿಲ್ಲಾದ್ಯಾಂತ ಉತ್ತಮ ಅಂಬ್ಯುಲೆನ್ಸ್ ಸೇವೆ ನೀಡಲಾಗುತ್ತಿದೆ. ಕಳಸಾಪುರ, ತರೀಕೆರೆ, ಶಿವಾನಿ, ಲಕ್ಕವಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಅಂಬ್ಯುಲೆನ್ಸ್ ಸೇವೆ ನೀಡುವಂತೆ ಸರಕಾರದ ಗಮನಕ್ಕೆ ತರಲಾಗಿದೆ. ಅಂಬ್ಯುಲೆನ್ಸ್ ವ್ಯಾಪ್ತಿ 20ಕಿ.ಮೀ. ಎಂದು ಅಂಬ್ಯುಲೆನ್ಸ್ ನವರು ತಗಾದೆ ತಗೆಯುತ್ತಾರೆಂದು ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆಯಲ್ಲಿ ಅಂಬ್ಯುಲೆನ್ಸ್ ಸಿಬ್ಬಂದಿಯೊಂದಿಗೆ ಚರ್ಚಿಸಿ 20ಕಿ.ಮೀ.ಗಿಂತಲೂ ದೂರ ವಿದ್ದರೂ ಸೇವೆ ನೀಡಬೇಕೆಂದು ಆದೇಶ ನೀಡಲಾಗಿದೆ. ಅಂಬ್ಯುಲೆನ್ಸ್ ಸಿಬ್ಬಂದಿ ತಗಾದೆ ತಗೆದರೆ ತಮ್ಮ ಗಮನಕ್ಕೆ ತಂದರೆ ಕ್ರಮಕೈಗೊಳ್ಳಲಾಗುವುದು.
-ಡಾ. ಮಲ್ಲಿಕಾರ್ಜುನಪ್ಪ, ಜಿಲ್ಲಾ ಆರೋಗ್ಯಾಧಿಕಾರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News