ಜನರ ಬದುಕು, ಬವಣೆಯಿಂದ ಸೃಷ್ಟಿಯಾದದ್ದು ಜನಪರ ಸಾಹಿತ್ಯ: ಹಂಪಿ ಕನ್ನಡ ವಿವಿ ವಿಶ್ರಾಂತ ಕುಲಪತಿ ಮುರಿಗೆಪ್ಪ

Update: 2019-02-18 18:16 GMT

ಚಿಕ್ಕಮಗಳೂರು, ಫೆ.18: ಸರಕಾರಗಳು ಸಂಗೀತಕ್ಕೆ ಗುರುಶಿಷ್ಯ ಪರಂಪರೆಗೆ ಅವಕಾಶ ಕಲ್ಪಿಸಿರುವಂತೆ ಜಾನಪದ ಸಂಗೀತಕ್ಕೂ ಗುರುಶಿಷ್ಯ ಪರಂಪರೆಗೆ ಅವಕಾಶ ಕಲ್ಪಿಸಿದಾಗ ಜಾನಪದ ಸಾಹಿತ್ಯ ಮುಂದಿನ ಪೀಳಿಗೆಗೆ ಉಳಿಯಲು ಸಾಧ್ಯ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಎ.ಮುರಿಗೆಪ್ಪಹೇಳಿದ್ದಾರೆ. 

ನಗರದ ಅಂಬೇಡ್ಕರ್ ಭವನದಲ್ಲಿ ಜನಪರ ಸಾಹಿತ್ಯ ವೇದಿಕೆ ಹಾಗೂ ಕ್ರಾಂತಿಕಾರಿ ಸಾಂಸ್ಕೃತಿಕ ವೇದಿಕೆ ಸಂಯುಕ್ತಾಶ್ರಯದಲ್ಲಿ ಸೋಮವಾರ ಆಯೋಜಿಸಿದ್ದ ಜನಪರ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಜನಪದ ಸಾಹಿತ್ಯದ ಹೆಸರಿನಲ್ಲಿ ನಕಲಿ ಜಾನಪದ ಸಾಹಿತ್ಯಗಳು ಸೇರ್ಪಡೆಗೊಂಡು ನಿಜವಾದ ಜಾನಪದ ಸಾಹಿತ್ಯವೂ ತನ್ನ ಅಂತಸತ್ವ ಕಳೆದುಕೊಳ್ಳುತ್ತಿದೆ. ಅದನ್ನು ತಡೆಯುವ ನಿಟ್ಟಿನಲ್ಲಿ ಸರಕಾರಗಳು ಸಂಗೀತಕ್ಕೆ ನೀಡುತ್ತಿರುವ ಗುರುಪರಂಪರೆಯಂತೆ ಜಾನಪದಕ್ಕೂ ಗುರುಪರಂಪರೆ ಮುಂದುವರಿಸುವ ಅಗತ್ಯವಿದೆ ಎಂದರು.

ಜನರಿಂದ ಜನರಿಗಾಗಿ ಜನರ ಬದುಕು, ಬವಣೆಯಿಂದ ಸೃಷ್ಟಿಯಾದ ತಮ್ಮದೇ ಜನಭಾಷೆಯ ಮೂಲಕ ಹೊರಹೊಮ್ಮಿದ ಸಾಹಿತ್ಯವೇ ಜನಪರ ಸಾಹಿತ್ಯ ಎಂದು ವಿಶ್ಲೇಷಿಸಿದ ಅವರು, ವಚನ ಸಾಹಿತ್ಯಗಳು ಜನಪರವಾಗಲು ಅದು ಚಳವಳಿಯ ಮೂಲಕ ರೂಪುಗೊಂಡ ಸಾಹಿತ್ಯ ಎಂದರು.

ಮದ್ರಾಸ್ ವಿವಿ ವಿಶ್ರಾಂತ ಪ್ರಾಧ್ಯಾಪಕ ಚೆ.ರಾಮಸ್ವಾಮಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಬಸವಣ್ಣನವರು ತಮ್ಮ ವಚನ ಸಾಹಿತ್ಯ ಮೂಲಕ ಕಾಯಕ ಧರ್ಮ, ವೃತ್ತಿ ಮಾನ್ಯತೆ ಪರಿಕಲ್ಪನೆ ತಂದುಕೊಟ್ಟವರು. ಈ ಕಲ್ಪನೆಗಳನ್ನು ಜನಸಾಮಾನ್ಯರಲ್ಲಿ ಭಿತ್ತಿಬೆಳೆಸುವುದೆ ಜನಪರ ಸಾಹಿತ್ಯವಾಗಿದೆ. ದುಡಿಮೆಯೊಂದಿಗೆ ತನ್ನೊಂದಿಗಿರುವವರನ್ನು ದುಡಿಮೆಗೆ ಹಚ್ಚುವುದನ್ನೇ ಜನಪರ ಸಾಹಿತ್ಯ ಎನ್ನಲಾಗುತ್ತದೆ ಎಂದು ತಿಳಿಸಿದರು.

ಜನಪರ ಚಿಂತಕ ಮಾನಸಯ್ಯ ಪ್ರಾಸ್ತಾವಿಕವಾಗಿ ಮಾತನಾಡಿ, ಜನಸಾಮಾನ್ಯರ ಜನಜೀನವದೊಂದಿಗೆ ಹಾಸುಹೊಕ್ಕಾಗಿರುವ ಕಲೆ, ಸಂಸ್ಕೃತಿ, ಆಚಾರ-ವಿಚಾರಗಳು ಮತ್ತು ಜನಪರ ಸಾಹಿತ್ಯಗಳನ್ನು ಮುಚ್ಚಿಹಾಕುವ ಷಡ್ಯಂತ್ರ ಕಾಲ ಕಾಲಕ್ಕೆ ನಡೆಯುತ್ತಿದೆ. ದುಡಿಯುವ ವರ್ಗದ ಜನರನ್ನು ಗುರುತಿಸಿ ಶ್ರಮಸಂಸ್ಕೃತಿಗೆ ಸಂಬಂಧಿಸಿದ ವಿಚಾರ ಸಂಕಿರಣ, ಕಲೆ, ವಿಚಾರಗೋಷ್ಠಿಗಳನ್ನು ನಡೆಸುವ ಮೂಲಕ ಜನಜಾಗೃತಿ ಮೂಡಿಸುವುದೇ ಜನಪರ ಸಾಹಿತ್ಯ ಸಮ್ಮೇಳನದ ಮೂಲ ಆಶಯ ಎಂದರು.

ಸಮಾರಂಭದಲ್ಲಿ ಸಾಹಿತಿ ಪಾರ್ವತಿ, ಜನಪರ ಸಾಹಿತ್ಯ ವೇದಿಕೆ ಅಧ್ಯಕ್ಷ ರುದ್ರಯ್ಯ ಮತ್ತಿತರರು ಉಪಸ್ಥಿತರಿದ್ದರು. ಸಮಾರಂಭಕ್ಕೂ ಮುನ್ನಾ ರಾಯಚೂರು ಜನ ಸಾಂಸ್ಕೃತಿಕ ಸಂಘದ ಸದಸ್ಯರು ವಚನಸಾಹಿತ್ಯ ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News