ಮಂತ್ರಿ ಸ್ಥಾನ ಕೊಡುವುದು ವರಿಷ್ಠರಿಗೆ ಬಿಟ್ಟ ವಿಚಾರ: ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ

Update: 2019-02-18 18:36 GMT

ಮೈಸೂರು,ಫೆ.18: ನನಗೆ ಮಂತ್ರಿ ಸ್ಥಾನ ಕೊಡುವುದು ಬಿಡುವುದು ವರಿಷ್ಠರಿಗೆ ಬಿಟ್ಟವಿಚಾರ. ಕೊಟ್ಟರೆ ಸೂಕ್ತವಾಗಿ ನಿಭಾಯಿಸುತ್ತೇನೆ ಎಂದು ವರುಣ ಕ್ಷೇತ್ರದ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಸೋಮವಾರ ವರುಣ ಕ್ಷೇತ್ರದಲ್ಲಿ ಹಮ್ಮಿಕೊಂಡಿರುವ ಉದ್ಯೋಗ ಮೇಳದ ಬಗ್ಗೆ ಮಾಹಿತಿ ನೀಡಲು ಆಗಮಿಸಿದ್ದ ವೇಳೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.

ನಾನು ಮಂತ್ರಿಸ್ಥಾನ ನೀಡಿ ಎಂದು ಕೇಳಿಲ್ಲ. ವರಿಷ್ಟರು ಯಾವ ಸ್ಥಾನ ನೀಡಿದರೂ ನಿಭಾಯಿಸುತ್ತೇನೆ. ಪಕ್ಷ ಕೊಟ್ಟರೆ ಶಕ್ತಿ ಮೀರಿ ಕೆಲಸ ಮಾಡುತ್ತೇನೆ. ನನಗೆ ಮಂತ್ರಿ ಸ್ಥಾನ ನೀಡುವುದು ವರಿಷ್ಟರಿಗೆ ಬಿಟ್ಟ ವಿಚಾರ ಎಂದು ಹೇಳಿದರು.

ಚಾಮುಂಡೇಶ್ವರಿ ಸೋಲು ಆಘಾತ ಉಂಟುಮಾಡಿದ್ದು ನಿಜ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಚಾಮುಂಡೇಶ್ವರಿ ಕ್ಷೇತ್ರದ ಸೋಲು ಆಘಾತವುಂಟು ಮಾಡಿದ್ದು ನಿಜ. ಆ ಕಹಿ ನೆನಪಿನಿಂದ ಈಗ ಹೊರಬಂದಿದ್ದು, ಆ ಕ್ಷೇತ್ರದ ಬಗ್ಗೆ ಭಾವನಾತ್ಮಕ ಸಂಬಂಧ ಹೊಂದಿರುವ ಕಾರಣ ಪದೇ ಪದೇ ಆ ಸೋಲನ್ನು ಪ್ರಸ್ತಾಪಿಸುವರು ಎಂದು ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದರು.

ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದರೂ ಕ್ಷೇತ್ರದ ಮತದಾರರು ಸಿದ್ದರಾಮಯ್ಯನವರನ್ನು ಕೈಹಿಡಿಯಲಿಲ್ಲ ಎಂದು ಬೇಸರಿಸಿದ್ದಾರೆ. ಈಗ ಸಮನ್ವಯ ಸಮಿತಿ ಅಧ್ಯಕ್ಷರಾಗಿದ್ದು, ಮುಂಬರುವ ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಮೈಸೂರು-ಕೊಡಗು ಲೋಕಸಭಾ ಕ್ಷೇತ್ರವನ್ನು ಕಾಂಗ್ರೆಸ್ ಪಕ್ಷಕ್ಕೆ ಬಿಟ್ಟುಕೊಡಬೇಕೆಂಬುದು ಪಕ್ಷದ ಕಾರ್ಯಕರ್ತರ ಹಾಗೂ ನಾಯಕರ ಒತ್ತಾಯವಿದ್ದು ವರಿಷ್ಠರ ತೀರ್ಮಾನಕ್ಕೆ ಬದ್ಧವಾಗಿರುವುದಾಗಿ ಹೇಳಿದರು. ಚುನಾವಣಾ ವೇಳೆಯಲ್ಲಿ ಕ್ಷೇತ್ರ ಹಂಚಿಕೆ ಬಗ್ಗೆ ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷದ ವರಿಷ್ಠರು ತೀರ್ಮಾನ ಕೈಗೊಳ್ಳಲಿದ್ದಾರೆ. ಪಕ್ಷದ ಕಾರ್ಯಕರ್ತರು ಆ ತೀರ್ಮಾನಕ್ಕೆ ಬದ್ಧವಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಸ್ಪಷ್ಟಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News