ಹುತಾತ್ಮ ಸಿಆರ್ ಪಿಎಫ್ ಯೋಧರ ಇಬ್ಬರು ಪುತ್ರಿಯರನ್ನು ದತ್ತು ಪಡೆದ ಜಿಲ್ಲಾಧಿಕಾರಿ

Update: 2019-02-19 07:11 GMT

ಪಾಟ್ನಾ, ಫೆ.19: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರರು ನಡೆಸಿದ ಆತ್ಮಹತ್ಯಾ ದಾಳಿಯಲ್ಲಿ ಮೃತಪಟ್ಟ 49 ಮಂದಿ ಸಿಆರ್‍ಪಿಎಫ್ ಯೋಧರಿಗೆ ಇಡೀ ದೇಶ ಕಂಬನಿ ಮಿಡಿಯುತ್ತಿದ್ದರೆ, ಮತ್ತೊಂದೆಡೆ ಹುತಾತ್ಮರ ಕುಟುಂಬಗಳಿಗೆ ನೆರವಿನ ಮಹಾಪೂರ ಹರಿದುಬರುತ್ತಿದೆ.

ಬಿಹಾರದ ಶೇಖ್‍ಪುರ ಜಿಲ್ಲಾಧಿಕಾರಿ ಇನಾಯತ್ ಖಾನ್, ರಾಜ್ಯದ ಮೃತ ಯೋಧರ ಕುಟುಂಬಕ್ಕೆ ಸಹಾಯಹಸ್ತ ಚಾಚಿದ್ದು, ಅವರ ಇಬ್ಬರು ಹೆಣ್ಣುಮಕ್ಕಳನ್ನು ದತ್ತು ಪಡೆಯಲು ನಿರ್ಧರಿಸಿದ್ದಾರೆ. ರಾಜ್ಯದ ಯೋಧರಾದ ರತನ್ ಕುಮಾರ್ ಠಾಕೂರ್ ಹಾಗೂ ಸಂಜಯ್ ಕುಮಾರ್ ಸಿನ್ಹಾ ಅವರ ಇಬ್ಬರು ಹೆಣ್ಣುಮಕ್ಕಳ ಸಂಪೂರ್ಣ ಶಿಕ್ಷಣ ವೆಚ್ಚ ಹಾಗೂ ಜೀವನ ಪರ್ಯಂತ ಅವರ ಇತರ ವೆಚ್ಚಗಳನ್ನು ಭರಿಸುವುದಾಗಿ ಖಾನ್ ಘೋಷಿಸಿದ್ದಾರೆ.

ಬಿಹಾರ ಕೇಡರ್ ಐಎಎಸ್ ಅಧಿಕಾರಿಯಾಗಿರುವ ಖಾನ್, ತಮ್ಮ ಎರಡು ದಿನಗಳ ವೇತನವನ್ನು ಇಬ್ಬರು ಹುತಾತ್ಮರ ಕುಟುಂಬಗಳಿಗೆ ದೇಣಿಗೆಯಾಗಿ ನೀಡಿದ್ದಾರೆ. ಎಲ್ಲ ಸರ್ಕಾರಿ ನೌಕರರು ಒಂದು ದಿನದ ವೇತನವನ್ನು ಮೃತ ಯೋಧರ ಕುಟುಂಬಗಳಿಗೆ ದೇಣಿಗೆಯಾಗಿ ನೀಡುವಂತೆ ಅವರು ಕೋರಿದ್ದಾರೆ.

ಜನ ಉದಾರವಾಗಿ ದಾನ ಮಾಡಲು ಅನುವಾಗುವಂತೆ ಶೇಖ್‍ ಪುರದಲ್ಲಿ ಬ್ಯಾಂಕ್ ಖಾತೆ ತೆರೆಯಲಾಗಿದೆ. ಸಂಗ್ರಹವಾದ ಹಣವನ್ನು ಇಬ್ಬರು ಸಿಆರ್‍ಪಿಎಫ್ ಸಿಬ್ಬಂದಿಯ ಕುಟುಂಬಗಳಿಗೆ ನೀಡಲಾಗುತ್ತದೆ. 2011ರಲ್ಲಿ ಸಿಆರ್‍ಪಿಎಫ್ ಸೇರಿದ ರತನ್ (30)ಗೆ ಗರ್ಭಿಣಿ ಪತ್ನಿ ಹಾಗೂ ನಾಲ್ಕು ವರ್ಷದ ಪುತ್ರ ಇದ್ದಾರೆ. ಸಂಜಯ್ (45) ಕೆಲ ದಿನಗಳ ರಜೆ ಮುಗಿಸಿ ಕೆಲ ದಿನಗಳ ಹಿಂದಷ್ಟೇ ಕರ್ತವ್ಯಕ್ಕೆ ಮರಳಿದ್ದರು. ಇವರಿಗೆ ಇಬ್ಬರು ಹೆಣ್ಣುಮಕ್ಕಳು ಹಾಗೂ ಒಬ್ಬ ಪುತ್ರನಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News