ಸುಳ್ಳು ಪ್ರಮಾಣ ಪತ್ರ ಆರೋಪ: ಆರು ವೈದ್ಯರ ವಿರುದ್ಧ ಸಲ್ಲಿಸಲಾಗಿದ್ದ ದೋಷಾರೋಪ ಪಟ್ಟಿ ರದ್ದು

Update: 2019-02-19 17:04 GMT

ಬೆಂಗಳೂರು, ಫೆ.19: ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಸುಳ್ಳು ಅನುಭವ ಪ್ರಮಾಣ ಪತ್ರ ಸಲ್ಲಿಸಿ ಪ್ರೊಫೆಸರ್ ಹುದ್ದೆಗೆ ನೇಮಕಗೊಂಡಿದ್ದಾರೆ ಎಂಬ ಆರೋಪದ ಮೇರೆಗೆ 6 ವೈದ್ಯರ ವಿರುದ್ಧ ಮಂಡ್ಯ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಸಲ್ಲಿಸಲಾಗಿದ್ದ ದೋಷಾರೋಪ ಪಟ್ಟಿಯನ್ನು ಹೈಕೋರ್ಟ್ ರದ್ದುಗೊಳಿಸಿದೆ.

ದೋಷಾರೋಪ ಪಟ್ಟಿ ರದ್ದುಪಡಿಸುವಂತೆ ಕೋರಿ ಡಾ.ಆನಂದ್, ಡಾ.ಎಚ್.ಟಿ.ಚಿದಾನಂದ, ಡಾ.ಶಿವಕುಮಾರ್ ವೀರಯ್ಯ, ಡಾ.ರಾಜೀವ್ ಶೆಟ್ಟಿ, ಡಾ.ಕೆ.ಕೃಷ್ಣ ಮತ್ತು ಡಾ.ಎಚ್.ಸಿ.ಸವಿತಾ ಹೈಕೋರ್ಟ್ ಮೆಟ್ಟಿಲೇರಿದ್ದರು. ನ್ಯಾಯಮೂರ್ತಿ ಪಿ.ಎಸ್.ದಿನೇಶ್‌ ಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ಈ ಅರ್ಜಿಗಳನ್ನು ಮಾನ್ಯ ಮಾಡಿದ್ದು, ಮಂಡ್ಯ ಪೂರ್ವ ಪೊಲೀಸ್ ಠಾಣೆ ಪೊಲೀಸರು ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಸಿದ್ದ ದೋಷಾರೋಪ ಪಟ್ಟಿಯನ್ನು ರದ್ದುಗೊಳಿಸಿ ಆದೇಶಿಸಿದ್ದಾರೆ.

ದೋಷಾರೋಪ ಪಟ್ಟಿ ರದ್ದುಗೊಳಿಸಲು ಕಾರಣ: ನಕಲಿ ದಾಖಲೆಗಳನ್ನು ಸೃಷ್ಟಿಸಲಾಗಿದೆ ಎಂಬುದಕ್ಕೆ ಪ್ರಾಸಿಕ್ಯೂಷನ್ ಸೂಕ್ತ ಸಾಕ್ಷ ಒದಗಿಸಿಲ್ಲ. ಈಗಾಗಲೇ ಈ ವಿಷಯದಲ್ಲಿ ಭಾರತೀಯ ವೈದ್ಯಕೀಯ ಮಂಡಳಿ(ಎಂಸಿಐ) ತನ್ನ ನಿರ್ಧಾರ ತೆಗೆದುಕೊಂಡಾಗಿದೆ. ಆರೋಪ ಹೊತ್ತವರಲ್ಲಿ ಕೆಲವು ವೈದ್ಯರು ಈಗಾಗಲೇ ನಿವೃತ್ತಿ ಹೊಂದಿದ್ದಾರೆ. ದೂರುದಾರ ಪ್ರೊ.ಎಚ್.ಎಲ್.ಕೇಶವಮೂರ್ತಿ ಅವರು ನೇಮಕಾತಿ ಪ್ರಕ್ರಿಯೆಗೆ ಮೂರನೆ ವ್ಯಕ್ತಿ. ಮ್ಯಾಜಿಸ್ಟ್ರೇಟ್ ಅವರು ಈ ಪ್ರಕರಣವನ್ನು ಪೊಲೀಸ್ ತನಿಖೆಗೆ ಒಪ್ಪಿಸುವ ಮುನ್ನ ಕಾನೂನಿನ ಯಾವ ಆಧಾರದಲ್ಲಿ ತನಿಖೆಗೆ ನಿರ್ದೇಶಿಸಲಾಗುತ್ತಿದೆ ಎಂಬುದಕ್ಕೆ ಸಕಾರಣ ನೀಡಿಲ್ಲ. ದೋಷಾರೋಪ ಪಟ್ಟಿ ಸಲ್ಲಿಕೆಯಾದ ನಂತರ ಸಂಜ್ಞೇಯ ಅಪರಾಧದ ಅಡಿ ವಿಚಾರಣೆ ಕೈಗೆತ್ತಿಗೊಳ್ಳುವುದಕ್ಕೂ ಸರಿಯಾದ ಕಾರಣವನ್ನು ಕೊಟ್ಟಿಲ್ಲ. ಹೀಗಾಗಿ, ನ್ಯಾಯಪೀಠದ ಈ ಆದೇಶವನ್ನು ರಾಜ್ಯದ ಎಲ್ಲ ಮ್ಯಾಜಿಸ್ಟ್ರೇಟ್‌ಗಳಿಗೆ ರವಾನಿಸಬೇಕು ಮತ್ತು ನ್ಯಾಯಾಂಗ ಅಕಾಡಮಿಗೆ ತರಬೇತಿ ಪಡೆಯುವ ಮ್ಯಾಜಿಸ್ಟ್ರೇಟ್‌ಗಳಿಗೂ ಈ ಕುರಿತು ಅರಿವು ಮೂಡಿಸಬೇಕು ಎಂದು ನ್ಯಾಯಪೀಠ ರಾಜ್ಯಪ್ರಾಸಿಕ್ಯೂಷನ್‌ಗೆ ನಿರ್ದೇಶಿಸಿದೆ.

ಪ್ರಕರಣವೇನು: ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಪ್ರೊಫೆಸರ್ ಹುದ್ದೆಗೆ ನೇಮಕಗೊಂಡ ವೈದ್ಯರು ಪ್ರೊಫೆಸರ್ ಆಗುವ ಮೊದಲು 5 ವರ್ಷಗಳ ಕಾಲ ಅಸಿಸ್ಟೆಂಟ್ ಅಥವಾ ಅಸೋಸಿಯೇಟ್ ಪ್ರೊಫೆಸರ್ ಆಗಿ ಕಾರ್ಯ ನಿರ್ವಹಿಸಿರಬೇಕು ಎಂಬ ನಿಯಮ ಉಲ್ಲಂಘಿಸಿದ್ದಾರೆ ಮತ್ತು ಈ ಕುರಿತಂತೆ ಸುಳ್ಳು ಪ್ರಮಾಣ ಪತ್ರ ಸಲ್ಲಿಸಿ ಪ್ರೊಫೆಸರ್ ಹುದ್ದೆಗಳಿಗೆ ನೇಮಕಗೊಂಡಿದ್ದಾರೆ ಎಂದು ಪ್ರೊ.ಎಚ್.ಎಲ್.ಕೇಶವಮೂರ್ತಿ ಮಂಡ್ಯ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ 2011ರ ನವೆಂಬರ್ 3ರಂದು ಖಾಸಗಿ ದೂರು ದಾಖಲಿಸಿದ್ದರು. ಇದರನ್ವಯ ಮಂಡ್ಯ ಪೊಲೀಸರಿಗೆ ತನಿಖೆ ನಡೆಸಲು ನ್ಯಾಯಾಲಯ ನಿರ್ದೇಶಿಸಿತ್ತು. ತನಿಖೆ ಪೂರ್ಣಗೊಳಿಸಿದ್ದ ಪೊಲೀಸರು 2015ರ ಡಿ.31ರಂದು ವಿಚಾರಣಾ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ತನಿಖೆ ವೇಳೆ ಆರೋಪಿಗಳು ಎಲ್ಲ ಆರೋಪಗಳನ್ನು ಅಲ್ಲಗಳೆದಿದ್ದರು. ನಾವು ಆದಿಚುಂಚನಗಿರಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಐದು ವರ್ಷಗಳ ಕಾಲ ಅಸಿಸ್ಟೆಂಟ್ ಮತ್ತು ಅಸೋಸಿಯೇಟ್ ಪ್ರೊಫೆಸರ್ ಆಗಿ ಕೆಲಸ ಮಾಡಿದ್ದೇವೆ ಎಂದು ತಿಳಿಸಿದ್ದರು. ಈ ಕುರಿತಂತೆ ಕಾಲೇಜು ಮತ್ತು ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವ ವಿದ್ಯಾಲಯದ ದಾಖಲೆಗಳನ್ನು ಒದಗಿಸಿದ್ದರು. ಆದರೆ, ಇವುಗಳನ್ನು ಪೊಲೀಸರು ಪರಿಗಣಿಸದೆ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ ಎಂದು ಹೈಕೋರ್ಟ್‌ನಲ್ಲಿ ಆಕ್ಷೇಪಿಸಿದ್ದರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂದಿನ ಲೋಕಾಯುಕ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಅವರು 16 ವೈದ್ಯರ ವಿರುದ್ಧ ಕೇಳಿಬಂದ ಆರೋಪಗಳ ಬಗ್ಗೆ ತನಿಖೆ ನಡೆಸಿ ಸರಕಾರಕ್ಕೆ ವರದಿ ಸಲ್ಲಿಸಿದ್ದರು. ದೂರಿಗೆ ಸಂಬಂಧಿಸಿದಂತೆ ಎಂಸಿಐ ಸೂಕ್ತ ನಿರ್ಧಾರ ಕೈಗೊಳ್ಳಬಹುದು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಅಂತೆಯೇ ರಾಜ್ಯ ಸರಕಾರ ಈ ಪ್ರಕರಣದ ಕುರಿತು ನಿವೃತ್ತ ನ್ಯಾಯಮೂರ್ತಿ ಎನ್.ಗುರುರಾಜನ್ ನೇತೃತ್ವದಲ್ಲಿ ವಿಚಾರಣಾ ಸಮಿತಿಯನ್ನೂ ನೇಮಕ ಮಾಡಿತ್ತು. ವಿಚಾರಣೆ ನಡೆಸಿದ್ದ ಸಮಿತಿಯು ಈ ಪ್ರಕರಣದಲ್ಲಿ ಯಾವುದೇ ಕಾನೂನು ಬಾಹಿರ ಪ್ರಕ್ರಿಯೆ ನಡೆದಿಲ್ಲ ಎಂದು ತಿಳಿಸಿತ್ತು. ಎಲ್ಲ ಅರ್ಜಿದಾರರ ಪರ ಹೈಕೋರ್ಟ್‌ನಲ್ಲಿ ಪಿ.ಪ್ರಸನ್ನಕುಮಾರ್ ವಾದ ಮಂಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News