ಒಡೆದು ಆಳುವ ನೀತಿಗೆ ಬಲಿಪಶು ಆಗದಿರಿ: ಜನಪರ ಸಾಹಿತ್ಯ ಸಮ್ಮೇಳನದಲ್ಲಿ ಪತ್ರಕರ್ತ ಬಿ.ಎಂ.ಹನೀಫ್ ಕರೆ

Update: 2019-02-19 18:35 GMT

ಚಿಕ್ಕಮಗಳೂರು, ಫೆ.19: ಪ್ರಸಕ್ತ ದೇಶದಲ್ಲಿ ಒಡೆದಾಳುವ ನೀತಿಯ ರಾಜಕಾರಣ ಆರಂಭವಾಗಿದೆ. ಒಂದೇ ದೇಶ, ಒಂದೇ ಸಂಸ್ಕೃತಿ, ಒಂದೇ ಧರ್ಮ ಎಂದು ಹೇಳುತ್ತಾ ಒಡೆದಾಳುವ ನೀತಿಯನ್ನು ಹುಟ್ಟು ಹಾಕಿ ರಾಜಕೀಯ ಲಾಭಗಳಿಸಲು ಹುನ್ನಾರ ಆರಂಭವಾಗಿವೆ. ಇಂತಹ ಕಾಲಘಟ್ಟದಲ್ಲಿ ಬಹುಸಂಖ್ಯಾತರೂ ಸಾಂಸ್ಕೃತಿಕ ರಾಜಕಾರಣ ಮಾಡುವುದನ್ನು ಕಲಿಯುವುದು ಅನಿವಾರ್ಯವಾಗಿದೆ ಎಂದು ಸಾಹಿತಿ ಹಾಗೂ ಪತ್ರಕರ್ತ ಬಿ.ಎಂ.ಹನೀಫ್ ಅಭಿಪ್ರಾಯಿಸಿದ್ದಾರೆ.

ಜನಪರ ಸಾಹಿತ್ಯ ವೇದಿಕೆ ಹಾಗೂ ಕ್ರಾಂತಿಕಾರಿ ಸಾಂಸ್ಕೃತಿಕ ವೇದಿಕೆ ನಗರದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿರುವ ಜನಪರ ಸಾಹಿತ್ಯ ಸಮ್ಮೇಳನದ ಎರಡನೇ ದಿನದ ಸಾಂಸ್ಕೃತಿಕ ಕ್ಷೇತ್ರದ ಬಿಕ್ಕಟ್ಟು ಹಾಗೂ ಪರಿಹಾರ ವಿಷಯದ ಗೋಷ್ಠಿಯಲ್ಲಿ ಮಾತನಾಡಿದ ಅವರು, ಬಹುಸಂಖ್ಯಾತರಾದವರು ಸಮಾಜದ ಸಮಸ್ಯೆಗಳು, ತಲ್ಲಣಗಳ ಬಗ್ಗೆ ಪ್ರಶ್ನೆ ಎತ್ತಬೇಕು. ಈ ಪ್ರಶ್ನೆಗಳಿಗೆ ಆಳುವ ವರ್ಗ ಉತ್ತರ ಕೊಡಬೇಕು. ಆದರೆ, ಇಲ್ಲಿ ಉಲ್ಟಾ ಆಗಿದೆ. ಶೋಷಿತರ, ಹಿಂದುಳಿದ, ದಲಿತರ ಮುಂದೆ ಒಡೆದಾಳುವವರು ತಮ್ಮ ಅಜೆಂಡಾಗಳನ್ನು ಇಡುತ್ತಿದ್ದಾರೆ. ದೇಶದಲ್ಲಿ ಇವರಿಗೆ ಸಮಾನ ನಾಗರಿಕ ಸಂಹಿತೆ ಬೇಕು. ಆದರೆ, ಜಾತಿ ವಿನಾಶ ಬೇಕಿಲ್ಲ. ಗೋರಕ್ಷಣೆ, ತ್ರಿವಳಿ ತಲಾಖ್, ದೇಶಭಕ್ತಿ ಇಂತಹ ಅನೇಕ ಅಜೆಂಡಾಗಳು ಅವರಿಂದ ಹೊರಡುತ್ತಲೇ ಇರುತ್ತವೆ ಎಂದರು.

ಮೂಢನಂಬಿಕೆ, ಅನಾಚಾರಗಳು ಸಾಹಿತ್ಯ ಸಮ್ಮೇಳನಗಳಲ್ಲೂ ನುಸುಳಿವೆ. ಸಂಸ್ಕೃತಿಯ ಒಳಗೆ ಧರ್ಮವನ್ನು ತಂದು ಹೆಜ್ಜೆಹಜ್ಜೆಗೂ ದಾರಿ ತಪ್ಪಿಸುವ ಕೆಲಸ ನಡೆಯುತ್ತಿದೆ. ಹಿಂದೆ ಖುಷಿ ಮುನಿಗಳು ಭೋಗದ ಭಾಗಿಗಳಾಗಿರಲಿಲ್ಲ. ಆದರೆ, ಇಂದು ಮೌಲ್ವಿ, ಮಠಾಧೀಶರು, ಧರ್ಮಗುರುಗಳು ಲೌಕಿಕ ಭೋಗ ಭಾಗ್ಯ ಬಯಸುತ್ತಿದ್ದಾರೆ. ರಾಜಕಾರಣಿಗಳು ಧರ್ಮರಕ್ಷಣೆಗೆ, ಧರ್ಮಾಕಾರಿಗಳು ರಾಜಕಾರಣಿಗಳ ರಕ್ಷಣೆಗೆ ನಿಲ್ಲುತ್ತಾರೆ. ಧರ್ಮ ಅನ್ನುವುದು ಶೋಷಣೆಯ ಅಸ್ತ್ರವಾಗಿರುವುದು ಈ ದೇಶದ ದುರಂತ ಎಂದರು.

ಜಾತಿ ತಾರತಮ್ಯ ಹೋಗಲಾಡಿಸಲು ಮೀಸಲಾತಿ ಕಲ್ಪಿಸಲಾಗಿದೆಯೇ ವಿನಃ ಆರ್ಥಿಕ ತಾರತಮ್ಯ ಸರಿಪಡಿಸಲು ಅಲ್ಲ. ಬಹುಸಂಖ್ಯಾತರಲ್ಲಿ ಯಾವುದೇ ಸಾಂಸ್ಕೃತಿಕ ಬಿಕ್ಕಟ್ಟಿಲ್ಲ. ಆದರೆ, ಸಮಾಜ ದ್ರೋಹಿಗಳು ಏಕ ಸಂಸ್ಕೃತಿ, ಏಕ ಧರ್ಮ, ಏಕ ದೇಶ ಎಂದು ಹೇಳುವ ಮೂಲಕ ನಮ್ಮಲ್ಲೇ ಬಿಕ್ಕಟ್ಟು  ಸೃಷ್ಟಿಸುತ್ತಿದ್ದಾರೆ. ಈ ಬಗ್ಗೆ ಬಹಳ ಎಚ್ಚರಿಕೆ ವಹಿಸಬೇಕು. ಸಾಂಸ್ಕೃತಿಕ ರಾಜಕಾರಣವನ್ನು ಸಾಂಸ್ಕೃತಿಕ ರಾಜಕಾರಣದಿಂದಲೇ ಎದುರಿಸಬೇಕು ಎಂದು ಹೇಳಿದರು.

ಜನಪರ ಸಾಹಿತ್ಯ ವೇದಿಕೆಯ ಅಧ್ಯಕ್ಷ ಹಾಗೂ ಚಿಂತಕ ಬಿ.ರುದ್ರಯ್ಯ ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು. ಎಂ.ಮೋಹನ್ ನಿರೂಪಿಸಿದರು.

ಒಂದು ವರದಿಯ ಪ್ರಕಾರ ಈ ದೇಶದಲ್ಲಿ ಶೇ.2.6ರಷ್ಟು ತಲಾಖ್ ಪ್ರಮಾಣವಿದೆ. ತ್ರಿವಳಿ ತಲಾಖ್‍ ಕೇವಲ ಶೇ. 0.4 ರಷ್ಟಿದೆ. ಆದರೆ, 20 ಲಕ್ಷ ಹಿಂದೂ ಹೆಣ್ಣು ಮಕ್ಕಳು ಪತಿಯರಿಂದ ಪರಿತ್ಯಕ್ತರಾಗಿದ್ದಾರೆ. ಅದರಲ್ಲಿ ಯಶೋದ ಬೆನ್ ಕೂಡ ಒಬ್ಬರು. ಅವರ ಸಮಸ್ಯೆಯನ್ನು ಮೊದಲು ಬಗೆಹರಿಸಿಕೊಳ್ಳದೆ ತ್ರಿವಳಿ ತಲಾಖ್ ಕೈಗೆತ್ತಿಕೊಂಡಿದ್ದಾರೆ. ಇದೊಂದು ಸಾಮಾಜಿಕ ಸಮಸ್ಯೆ ಅಷ್ಟೆ. ಆದರೆ, ಮುಸ್ಲಿಂ ಹೆಣ್ಣು ಮಕ್ಕಳ ರಕ್ಷಣೆ ಎಂಬ ಸೋಗಿನಲ್ಲಿ ಬಹುದೊಡ್ಡ ಸಮಸ್ಯೆ ಎಂದು  ಬಿಂಬಿಸಲಾಗುತ್ತಿದೆ. ದೇಶದಲ್ಲಿನ ಬಡತನ, ನಿರುದ್ಯೋಗ, ಮತ್ತಿತರ ಮೂಲಸೌಕರ್ಯಗಳ ಬಗ್ಗೆ ಇವರು ಚರ್ಚೆ ಮಾಡಲು ತಯಾರಿಲ್ಲ.
- ಬಿ.ಎಂ.ಹನೀಫ್

ಬಂಡವಾಳವಾದ-ಬ್ರಾಹ್ಮಣವಾದ ದೇಶದ ವೈರಿಗಳು:
ಸಾಂಸ್ಕೃತಿಕ ಬಿಕ್ಕಟ್ಟು ವಿಚಾರದ ಬಗ್ಗೆ ವಿಷಯ ಪ್ರಸ್ತಾಪಿಸಿದ ಜನಪರ ಚಿಂತಕ ಮಾನಸಯ್ಯ ಮಾತನಾಡಿ, ಮನುಷ್ಯ ತನ್ನ ಅಗತ್ಯತೆಯನ್ನು ಶ್ರಮದಿಂದ ಭರಿಸಿಕೊಳ್ಳಬೇಕು. ಶ್ರಮ ಹಾಕಿದಾಗ ಸಂಸ್ಕೃತಿ ಸಾಕಾರಗೊಳ್ಳುತ್ತದೆ. ಉತ್ಪಾದನೆ ಇಲ್ಲದೆ ಉಪಭೋಗ ಇಲ್ಲ. ಆದರೆ, ಇಂದು ಉತ್ಪಾದನೆಗೆ ಹೋಗುವುದಿಲ್ಲ. ಉಪಭೋಗ ಬೇಕು. ಇತ್ತೀಚೆಗೆ ದೇವರು, ಧರ್ಮದ ಹೆಸರಲ್ಲಿ ಶ್ರಮ ಸಂಸ್ಕೃತಿಯನ್ನೇ ಒಡೆಯಲಾಗುತ್ತಿದೆ ಎಂದು ಆರೋಪಿಸಿದರು.

ನಮ್ಮದು ಕೃಷಿ ಸಂಸ್ಕೃತಿ, ಇತ್ತೀಚೆಗೆ ಹಿಂದೂ ಸಂಸ್ಕೃತಿ ಒಪ್ಪಿಕೊಳ್ಳಬೇಕು ಎಂಬ ಚರ್ಚೆ ನಡೆಯುತ್ತಿದೆ. ಬಾಬರಿ ಮಸೀದಿ ದ್ವಂಸದ ನಂತರ ಸಾಂಸ್ಕೃತಿಕ ದಾಳಿ, ಮುಖಭಂಗ, ದೊಡ್ಡ ಸಾಮಾಜಿಕ ಭಯೋತ್ಪಾದನೆಯಲ್ಲಿ ದೇಶ ನರಳುತ್ತಿದೆ. ಪ್ರಶ್ನಿಸಿದವರನ್ನು ಕೊಲ್ಲಲಾಗುತ್ತಿದೆ. ಇದೊಂದು ರೀತಿ ಸಾಂಸ್ಕೃತಿಕ ದಾಳಿ. ಹಿಂದೂಗಳನ್ನ ಹಿಂದುತ್ವದಿಂದ ಬೇರ್ಪಡಿಸಿ ನೋಡಬೇಕು. ಹಿಂದುಗಳೆ ಬೇರೆ ಹಿಂದುತ್ವವೇ ಬೇರೆ. ಬಂಡವಾಳವಾದ ಮತ್ತು ಬ್ರಾಹ್ಮಣ ವಾದ ಈ ದೇಶದ ನಿಜವಾದ ವೈರಿಗಳು. ಇವೆರಡೂ ನಾಶವಾಗದೆ ಜಾತಿ ಪದ್ದತಿ ನಾಶವಾಗದು. ಹಿಂದೂ ಧರ್ಮಕ್ಕೆ ಕ್ಲೇಂ ಮಾಡುವವರೆಲ್ಲಾ ಬಂಡವಾಳಶಾಹಿಗಳ ಹಿಡಿತದಲ್ಲಿದ್ದಾರೆ. ನಮ್ಮ ಮುಖ್ಯ ಚೌಕಿದಾರ ಕೂಡ ಅದಾನಿ, ಅಂಬಾನಿ  ಜತೆ ಇದ್ದಾರೆ ಎಂದು ಪ್ರಧಾನಿ ಮೋದಿ ವಿರುದ್ಧ ಕಿಡಿಕಾರಿದರು. 

ಬಂಡವಾಳವಿಲ್ಲದೆ ಬ್ರಾಹ್ಮಣ ವಾದ ಇಲ್ಲ. ಆಧುನಿಕ ತಂತ್ರಜ್ಞಾನ ಬಳಸಿಕೊಂಡು ವಿಜ್ಞಾನದ ಮೇಲೆಯೇ ದಾಳಿ ಮಾಡುತ್ತಿದ್ದಾರೆ. ಒಂದು ವರ್ಗದ ದುಷ್ಟ ಸಂಸ್ಕೃತಿಯನ್ನು ಬಹುಜನರ ಮೇಲೆ ಹೇರುತ್ತಿದ್ದಾರೆ. ರಾಜಕೀಯ ಅಕಾರ, ಆ ಮೂಲಕ ಏಕ ಸ್ವಾಮ್ಯ ಸಾಸಲು ಒಂದೊಂದೆ ಸಾಂಸ್ಕೃತಿಕ ಅಜೆಂಡಾಗಳನ್ನು ಸೃಷ್ಟಿ ಮಾಡುತ್ತಾ ಬಹುಸಂಖ್ಯಾತರ ಮೇಲೆ ಹೇರುತ್ತಿದ್ದಾರೆ. ದಲಿತರಲ್ಲೇ ನವ ಬ್ರಾಹ್ಮಣವಾದ ಉದಯವಾಗುತ್ತಿರುವುದು ಅಚ್ಚರಿಯ ಸಂಗತಿ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News