ನ್ಯಾಯಾಂಗ ನಿಂದನೆಯಲ್ಲಿ ಅನಿಲ್ ಅಂಬಾನಿ ಅಪರಾಧಿ: ಸುಪ್ರೀಂ ಮಹತ್ವದ ತೀರ್ಪು

Update: 2019-02-21 07:34 GMT

ಹೊಸದಿಲ್ಲಿ, ಫೆ. 20: ಸುಪ್ರೀಂ ಕೋರ್ಟ್ ಬುಧವಾರ ಅನಿಲ್ ಅಂಬಾನಿ ಅವರ ನ್ಯಾಯಾಂಗ ನಿಂದನೆ ಅಪರಾಧವನ್ನು ಎತ್ತಿ ಹಿಡಿದಿದೆ. ಅಲ್ಲದೆ ನಾಲ್ಕು ವಾರಗಳ ಒಳಗೆ ಎರಿಕ್‌ಸನ್ ಇಂಡಿಯಾಕ್ಕೆ 453 ಕೋಟಿ ರೂಪಾಯಿ ಪಾವತಿಸಿ. ಪಾವತಿಸಲು ವಿಫಲರಾದರೆ ಮೂರು ತಿಂಗಳು ಜೈಲು ಶಿಕ್ಷೆ ಅನುಭವಿಸಿ ಎಂದು ಅವರು ಹಾಗೂ ಇತರ ಇಬ್ಬರು ನಿರ್ದೇಶಕರಿಗೆ ನಿರ್ದೇಶಿಸಿದೆ.

‘ನಿರ್ಲಕ್ಷದ ನಡತೆ’ಗೆ ಸುಪ್ರೀಂ ಕೋರ್ಟ್ ರಿಲಯನ್ಸ್ ಕಮ್ಯೂನಿಕೇಷನ್‌ನ ಅನಿಲ್ ಅಂಬಾನಿ ಹಾಗೂ ಇತರ ಇಬ್ಬರು ನಿರ್ದೇಶಕರಿಗೆ ತಲಾ 1 ಕೋಟಿ ರೂಪಾಯಿ ದಂಡ ವಿಧಿಸಿದೆ.

ನ್ಯಾಯಾಲಯಕ್ಕೆ ನೀಡಿದ ಒಪ್ಪಿಗೆ ಹಾಗೂ ನ್ಯಾಯಾಲಯ ನೀಡಿದ ಆದೇಶವನ್ನು ಆರ್‌ಕಾಮ್‌ನ ಅಧ್ಯಕ್ಷ ಹಾಗೂ ರಿಲಯನ್ಸ್ ಟೆಲಿಕಾಂನ ಅಧ್ಯಕ್ಷ ಸತೀಶ್ ಸೇಥ್ ಹಾಗೂ ರಿಲಯನ್ಸ್ ಇನ್‌ಫ್ರಾಟೆಲ್ ಅಧ್ಯಕ್ಷ ಛಾಯಾ ವಿರಾನಿ ಅವರು ಉಲ್ಲಂಘಿಸಿದ್ದಾರೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

‘‘ಅನಿಲ್ ಅಂಬಾನಿ ಹಾಗೂ ಇತರರು ಈ ಹಿಂದೆ ನೀಡಿದ ಮಾತನ್ನು ಉಲ್ಲಂಘಿಸಿದ್ದಾರೆ.’’ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಸ್ವೀಡನ್‌ನ ಟೆಲಿಕಾಂ ಉಪಕರಣಗಳ ಉತ್ಪಾದಕ ಎರಿಕ್‌ಸನ್‌ಗೆ ಹಣ ಪಾವತಿಸಬೇಕೆಂಬ ತನ್ನ ಆದೇಶವನ್ನು ‘ಉದ್ದೇಶ ಪೂರ್ವಕವಾಗಿ ಉಲ್ಲಂಘಿಸಲಾಗಿದೆ’ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ರಿಲಯನ್ಸ್ ಕಮ್ಯೂನಿಕೇಷನ್ ಲಿಮಿಟೆಡ್‌ನ ವಕ್ತಾರ ತನ್ನ ಹೇಳಿಕೆಯಲ್ಲಿ, ನಾವು ಸುಪ್ರೀಂ ಕೋರ್ಟ್‌ ತೀರ್ಪಿಗೆ ಗೌರವ ನೀಡುತ್ತೇವೆ. ಆರ್‌ಕಾಂ ಸಮೂಹ ಸುಪ್ರೀಂ ನೀಡಿದ ಆದೇಶದಂತೆ ನಡೆದುಕೊಳ್ಳಲಿದೆ ಎಂದಿದ್ದಾರೆ.

ಒಂದು ವೇಳೆ ‘ನ್ಯಾಯಾಂಗ ನಿಂದನೆಗಾರರು’ ನಿರ್ದಿಷ್ಟ ಅವಧಿಯ ಒಳಗಡೆ ಹಣ ಪಾವತಿಸಲು ವಿಫಲವಾದರೆ, ಅವರು ಮೂರು ತಿಂಗಳು ಜೈಲು ಶಿಕ್ಷೆ ಅನುಭವಿಸಬೇಕು ಎಂದು ಆರ್.ಎಫ್. ನಾರಿಮನ್ ಹಾಗೂ ವಿನೀತ್ ಸರಣ್ ಅವರನ್ನು ಒಳಗೊಂಡ ಪೀಠ ಹೇಳಿದೆ.

ತೀರ್ಪು ಘೋಷಿಸುವ ಸಂದರ್ಭ ಅಂಬಾನಿ, ಸೇಥ್ ಹಾಗೂ ವಿರಾನಿ ನ್ಯಾಯಾಲಯದಲ್ಲಿ ಹಾಜರಿದ್ದರು. ರಿಲಯನ್ಸ್ ಸಮೂಹ ಸುಪ್ರೀಂ ಕೋರ್ಟ್‌ನ ರಿಜಿಸ್ಟ್ರಿಯಲ್ಲಿ ಈಗಾಗಲೇ ಠೇವಣಿ ಇರಿಸಿದ 118 ಕೋಟಿ ರೂಪಾಯಿಯನ್ನು ಒಂದು ವಾರದ ಒಳಗಡೆ ಬಟವಾಡೆ ಮಾಡಬೇಕು ಎಂದು ಸುಪ್ರೀಂ ಕೋರ್ಟ್ ನಿರ್ದೇಶಿಸಿದೆ.

 ಸುಪ್ರೀಂ ಕೋರ್ಟ್ ತೀರ್ಪು ನೀಡಿದ ಬಳಿಕ ಮಾತನಾಡಿದ ಅಂಬಾನಿ ಪರ ಹಿರಿಯ ನ್ಯಾಯವಾದಿ ಮುಕುಲ್ ರೋಹ್ಟಗಿ, ‘‘ನಾವು ಸುಪ್ರೀಂ ಕೋರ್ಟ್‌ನ ಆದೇಶಕ್ಕೆ ಗೌರವ ನೀಡುತ್ತೇವೆ, ಸುಪ್ರೀಂ ಕೋರ್ಟ್ ಹೇಗೆ ತೀರ್ಪು ನೀಡಬೇಕೋ ಹಾಗೇ ನೀಡಿದೆ. ಆರ್‌ಕಾಮ್ ಸುಪ್ರೀಂ ಕೋರ್ಟ್‌ನ ಆದೇಶಕ್ಕೆ ಗೌರವ ನೀಡಲಿದೆ ಎಂಬ ನಂಬಿಕೆ ನನಗೆ ಇದೆ’’ ಎಂದಿದ್ದಾರೆ.

► ಎರಿಕ್‌ಸನ್‌ಗೆ 550 ಕೋ. ರೂ. ಪಾವತಿಸಲು 120 ದಿನಗಳ ಗಡುವಿಗೆ ಮೂರು ರಿಲಯನ್ಸ್ ಕಂಪೆನಿ ಬದ್ದವಾಗಿರಲಿಲ್ಲ. ಅನಂತರ ಹೆಚ್ಚುವರಿ 60 ದಿನಗಳನ್ನು ನೀಡಲಾಯಿತು.

► ರಿಲಯನ್ಸ್ ಸಮೂಹ ನೀಡಿದ ಒಪ್ಪಿಗೆ ಸುಳ್ಳು ಎಂಬುದು ನ್ಯಾಯಾಲಯಕ್ಕೆ ಮನವರಿಕೆಯಾಗಿದೆ. ಇದರಿಂದ ನ್ಯಾಯದ ಆಡಳಿತದ ಮೇಲೆ ಪರಿಣಾಮ ಉಂಟಾಗಿದೆ. -ಒಪ್ಪಿಗೆ ಹಾಗೂ ಆದೇಶವನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ರಿಲಾಯನ್ಸ್ ನೀಡಿದ ಯಾವುದೇ ನಿಶ್ಯರ್ತ ಕ್ಷಮೆಯನ್ನು ತಿರಸ್ಕರಿಸುವ ಅಗತ್ಯ ಇದೆ.

ರಿಲಯನ್ಸ್ ಸಮೂಹದ ಶೇರು ಇಳಿಕೆ

ಎರಿಕ್‌ಸನ್ ಪ್ರಕರಣಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್ ತೀರ್ಪು ನೀಡಿದ ಬಳಿಕ ಅನಿಲ್ ಅಂಬಾನಿಯ ರಿಲಯನ್ಸ್ ಸಮೂಹ ಕಂಪೆನಿಗಳ ಶೇರು ಇಳಿಕೆಯಾಗಿದೆ. ಆರ್‌ಕಾಮ್ ಶೇರುಗಳು ಶೇ. 9.2ಕ್ಕೆ ಇಳಿಕೆಯಾಗಿದ್ದು, 5.45 ರೂಪಾಯಿಗೆ ತಲುಪಿದೆ. ರಿಲಯನ್ಸ್ ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್‌ನ ಶೇರುಗಳು ಶೇ. 8.7ಕ್ಕಿಂತ ಹೆಚ್ಚು ಇಳಿಕೆಯಾಗಿದೆ. ರಿಲಯನ್ಸ್ ನೌಕಾ ಹಾಗೂ ಎಂಜಿನಿಯರಿಂಗ್ ಲಿಮಿಟೆಡ್‌ನ ಶೇರುಗಳು ಶೇ. 3.4 ಇಳಿಕೆಯಾಗಿದೆ. ರಿಲಯನ್ಸ್ ಪವರ್ ಲಿಮಿಟೆಡ್‌ನ ಶೇರುಗಳು ಶೇ. 5ಕ್ಕಿಂತ ಹೆಚ್ಚು ಇಳಿಕೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News