“ನೀವು ನನ್ನನ್ನು ಪ್ರೀತಿಸುತ್ತೇನೆ ಎಂದದ್ದು ಸುಳ್ಳು, ನೀವು ಹೆಚ್ಚು ಪ್ರೀತಿಸಿದ್ದು ದೇಶವನ್ನು”

Update: 2019-02-20 08:48 GMT

ಶ್ರೀನಗರ, ಫೆ.20: ಕಾಶ್ಮೀರದಲ್ಲಿ ಉಗ್ರರ ಜತೆಗಿನ ಎನ್‍ ಕೌಂಟರ್‍ನಲ್ಲಿ ಹುತಾತ್ಮರಾದ ಮೇಜರ್ ವಿಭೂತಿ ಶಂಕರ್ ದೌಂಡಿಯಾಲ್ ಅವರ ಪತ್ನಿ ನಿಕಿತಾ ಕೌಲ್ ಪತಿಯ ಅಂತ್ಯಸಂಸ್ಕಾರದ ವೇಳೆ ದಿಟ್ಟತನ ಪ್ರದರ್ಶಿಸಿದರು. ಶವಪೆಟ್ಟಿಗೆ ಮುಂದೆ ನಿಂತ ಕೌಲ್, ಪತಿಯ ಮುಖವನ್ನು ನೋಡಿ, "ನನ್ನನ್ನು ಪ್ರೀತಿಸುತ್ತಿದ್ದೇನೆ ಎಂದು ನೀವು ಹೇಳಿದ್ದು ಸುಳ್ಳು. ನೀವು ನಿಜವಾಗಿ ನನಗಿಂತ ಹೆಚ್ಚಾಗಿ ದೇಶವನ್ನು ಪ್ರೀತಿಸುತ್ತಿದ್ದಿರಿ. ನನಗೆ ಈ ಬಗ್ಗೆ ಮತ್ಸರವಿದೆ. ಆದರೆ ನಾನು ಅಸಹಾಯಕಳು" ಎಂದು ಒತ್ತರಿಸಿ ಬರುವ ಕಣ್ಣೀರು ತಡೆದುಕೊಂಡು ರೋಧಿಸಿದರು.

ಮೇಜರ್ ದೌಂಡಿಯಾಲ್ (34) ಸೋಮವಾರ ಪುಲ್ವಾನಾದಲ್ಲಿ ನಡೆದ ಎನ್‍ಕೌಂಟರ್‍ನಲ್ಲಿ ಹುತಾತ್ಮರಾಗಿದ್ದರು. ಡೆಹ್ರಾಡೂನ್ ‍ನ ನಶ್ವಿಲ್ಲೆ ಪ್ರದೇಶದಲ್ಲಿದ್ದ ಅವರ ನಿವಾಸಕ್ಕೆ ಮೃತದೇಹವನ್ನು ತರಲಾಯಿತು. ಮೇಜರ್ ಅವರ ತಾಯಿ ಸರೋಜ್ ದೌಂಡಿಯಾಲ್, ಇಬ್ಬರು ಅಕ್ಕಂದಿರು ಸೇರಿದಂತೆ ಕುಟುಂಬ ಸದಸ್ಯರು, ಮುಖ್ಯಮಂತ್ರಿ ತ್ರಿವೇಂದ್ರ ರಾವತ್, ಸೇನಾ ಸಿಬ್ಬಂದಿ, ಬಿಜೆಪಿ ಹಾಗೂ ಕಾಂಗ್ರೆಸ್ ಮುಖಂಡರು ಹಾಗೂ ಸಾರ್ವಜನಿಕರು ಮಂಗಳವಾರ ಮೇಜರ್ ಅವರಿಗೆ ಅಂತಿಮ ನಮನ ಸಲ್ಲಿಸಿದರು.

ಸುರಿಯುತ್ತಿದ್ದ ಮಳೆಯ ನಡುವೆಯೇ ನಿಕಿತಾ ಮೊದಲು ಶವಪೆಟ್ಟಿಗೆಯನ್ನು, ಬಳಿಕ ಪತಿಯ ಮುಖವನ್ನು ಸ್ಪರ್ಶಿಸಿದರು. ಕಣ್ಣೀರು ಒರೆಸಿಕೊಂಡು ಅನತಿದೂರದಿಂದಲೇ ಚುಂಬಿಸಿದರು. "ನಾವೆಲ್ಲ ನಿಮ್ಮನ್ನು ಪ್ರೀತಿಸುತ್ತೇವೆ. ಜನರಿಗಾಗಿ, ದೇಶಕ್ಕಾಗಿ ನೀವು ಪ್ರಾಣತ್ಯಾಗ ಮಾಡಿದ್ದೀರಿ. ನೀವು ಧೈರ್ಯಶಾಲಿ" ಎಂದು ಬಣ್ಣಿಸಿದರು.

"ನಿಮ್ಮನ್ನು ಪತಿಯಾಗಿ ಪಡೆದದ್ದು ನನಗೆ ಗೌರವ. ವಿಭು ನನ್ನ ಕೊನೆಯ ಉಸಿರು ಇರುವವರೆಗೂ ನಿಮ್ಮನ್ನು ಪ್ರೀತಿಸುತ್ತೇನೆ" ಎಂದು ಹೇಳಿದರು.

"ನೀವು ಅಗಲಿರುವುದು ದುಃಖದ ವಿಚಾರ. ಆದರೆ ನೀವು ನಮ್ಮ ಸುತ್ತವೇ ಇರುತ್ತೀರಿ ಎನ್ನುವುದು ನನಗೆ ಗೊತ್ತು. ಯಾರೂ ಅನುಕಂಪ ತೋರಬೇಡಿ. ಬದಲು ಇನ್ನಷ್ಟು ಗಟ್ಟಿಮನಸ್ಸು ಮಾಡಿಕೊಂಡು ಇವರಿಗೆ ಅಂತಿಮ ನಮನ ಸಲ್ಲಿಸೋಣ" ಎಂದು ಪತಿಯತ್ತ ಸೆಲ್ಯೂಟ್ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News