ಮಂಗನ ಕಾಯಿಲೆ ನಿಯಂತ್ರಣ ಕೋರಿ ಅರ್ಜಿ ಸಲ್ಲಿಕೆ: ರಾಜ್ಯ ಸರಕಾರಕ್ಕೆ ಹೈಕೋರ್ಟ್ ನೋಟಿಸ್

Update: 2019-02-20 16:25 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಫೆ.20: ಶಿವಮೊಗ್ಗ ಸೇರಿದಂತೆ ಮಲೆನಾಡು ಭಾಗದಲ್ಲಿ ಉಲ್ಬಣಗೊಂಡು ಸಾವಿರಾರು ಜನರ ಜೀವನಕ್ಕೆ ಬಾಧೆ ತಂದಿರುವ ಮಂಗನ ಕಾಯಿಲೆ ನಿಯಂತ್ರಣ ಹಾಗೂ ಚಿಕಿತ್ಸೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸರಕಾರಕ್ಕೆ ಸೂಕ್ತ ನಿರ್ದೇಶನ ನೀಡಲು ಕೋರಿ ಸಲ್ಲಿಸಲಾಗಿದ್ದ ಅರ್ಜಿಗೆ ಸಂಬಂಧಿಸಿದಂತೆ ರಾಜ್ಯ ಸರಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.

ಈ ಸಂಬಂಧ ಶಿವಮೊಗ್ಗ ನಗರದ ನಿವಾಸಿ ವಕೀಲ ಕೆ.ಪಿ. ಶ್ರೀಪಾಲ್ ಹಾಗೂ ಸೊರಬ ತಾಲೂಕಿನ ಚಿಕ್ಕಚೌಟಿ ಗ್ರಾಮದ ನಿವಾಸಿ ವಕೀಲ ಎನ್.ಜಿ. ರಮೇಶಪ್ಪ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್)ಯು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಲ್. ನಾರಾಯಣಸ್ವಾಮಿ ಹಾಗೂ ನ್ಯಾ. ಪಿ.ಎಸ್. ದಿನೇಶ್ ಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠದ ಮುಂದೆ ವಿಚಾರಣೆಗೆ ಬಂದಿತ್ತು.

ಕೆಲ ಕಾಲ ವಾದ ಆಲಿಸಿದ ನ್ಯಾಯಪೀಠ, ಅರ್ಜಿಗೆ ಸಂಬಂಧಿಸಿದಂತೆ ಪ್ರತಿವಾದಿಗಳಾದ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ, ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸೇರಿದಂತೆ ಶಿವಮೊಗ್ಗ ಜಿಲ್ಲಾಧಿಕಾರಿ ಹಾಗೂ ಉಡುಪಿ ಜಿಲ್ಲಾಧಿಕಾರಿಗಳಿಗೆ ನೋಟಿಸ್ ಜಾರಿಗೆ ಆದೇಶಿಸಿ ವಿಚಾರಣೆಯನ್ನು ಫೆ.25ಕ್ಕೆ ಮುಂದೂಡಿತು.

ಅವಶ್ಯಕತೆ ಅನುಗುಣವಾಗಿ ಮಂಗನ ಕಾಯಿಲೆ ನಿರೋಧಕ ಲಸಿಕೆ ಹಾಗೂ ಔಷಧಿಗಳನ್ನು ಪೂರೈಸಲು ಮತ್ತು ಈ ಕಾಯಿಲೆ ಬಾಧಿತ ಜಿಲ್ಲೆಗಳಲ್ಲಿ ಅಗತ್ಯ ವೈದ್ಯಕೀಯ ಸಿಬ್ಬಂದಿ ನಿಯೋಜಿಸುವಂತೆ ರಾಜ್ಯ ಸರಕಾರ ಮತ್ತು ಆರೋಗ್ಯ ಇಲಾಖೆಗೆ ನಿರ್ದೇಶನ ನೀಡಬೇಕು. ಮಲೆನಾಡು ಭಾಗದ ಪ್ರಾಥಮಿಕ ಆರೋಗ್ಯ ಕೇಂದ್ರ, ಅಂಗನವಾಡಿ ಕೇಂದ್ರ, ಗ್ರಾಮ ಪಂಚಾಯತ್ ಕಚೇರಿಗಳಲ್ಲಿ ಚಿಕಿತ್ಸಾ ಉಪಕರಣಗಳು ಮತ್ತು ಅರೆ ವೈದ್ಯಕೀಯ ಸಿಬ್ಬಂದಿಯ ಜೊತೆಗೆ ಕಾಯಿಲೆ ನಿರೋಧಕ ಲಸಿಕೆ ಮತ್ತು ಡಿಎಂಪಿ ಆಯಿಲ್ ಲಭ್ಯವಾಗಿಸುವಂತೆ ಮಲೆನಾಡು ಭಾಗದ ಜಿಲ್ಲಾ ಕೇಂದ್ರಗಳಲ್ಲಿ ಮಂಗನ ಕಾಯಿಲೆಯ ‘ಡಯಾಗ್ನಸ್ಟಿಕ್ ಸೆಂಟರ್’ ತೆರೆಯಲು ಸಂಬಂಧಪಟ್ಟವರಿಗೆ ಸೂಚನೆ ನೀಡಬೇಕು.

ಅಲ್ಲದೇ ಬೇಸಿಗೆಯ ಆರಂಭದಿಂದ ಚಳಿಗಾಲದ ಅಂತ್ಯದವರೆಗೆ ಮಲೆನಾಡು ಭಾಗದಲ್ಲಿ ಕಾರ್ಯಾಚರಿಸುವಂತೆ ಶಾಶ್ವತವಾದ ‘ಮೊಬೈಲ್ ಮೆಡಿಕಲ್ ಟಾಸ್ಕ್‌ಫೋರ್ಸ್’ ಸ್ಥಾಪಿಸಬೇಕು. ಮಂಗನ ಕಾಯಿಲೆಯಿಂದಾಗಿ ಈಗಾಗಲೇ ಪ್ರಾಣ ಕಳೆದುಕೊಂಡವರ ಕುಟುಂಬದವರಿಗೆ ಸೂಕ್ತ ಪರಿಹಾರ ಕಲ್ಪಿಸಲು ಸರಕಾರಕ್ಕೆ ನಿರ್ದೇಶನ ನೀಡಬೇಕು. ಇದಲ್ಲದೇ ಮಂಗನ ಕಾಯಿಲೆ ಹರಡದಂತೆ ತಡೆಯಲು ಮಲೆನಾಡು ಭಾಗದಲ್ಲಿ ಪ್ರತಿ ವರ್ಷ ಡಿಸೆಂಬರ್‌ನಿಂದ ಮೇ ವರೆಗೆ ಅರಣ್ಯ ಪ್ರದೇಶದಲ್ಲಿ ಸತ್ತು ಹೋಗುವ ಮಂಗಗಳನ್ನು ಪತ್ತೆ ಹಚ್ಚಿ ಅವುಗಳ ವೈಜ್ಞಾನಿಕ ವಿಲೇವಾರಿಗೆ ತಜ್ಞರ ವಿಶೇಷ ತಂಡ ರಚಿಸುವಂತೆ ಅರಣ್ಯ ಇಲಾಖೆಗೆ ನಿರ್ದೇಶನ ನೀಡಬೇಕು ಎಂದು ಅರ್ಜಿದಾರರ ಕೋರಿದ್ದಾರೆ.

ಏನಿದು ಮಂಗನ ಕಾಯಿಲೆ: ‘ಮಂಗನ ಕಾಯಿಲೆ’ ಎಂದು ಕರೆಯಲಾಗುವ ಈ ಕಾಯಿಲೆ ಮೊದಲ ಬಾರಿಗೆ ಮಲೆನಾಡು ಭಾಗದಲ್ಲಿ 1975ರಲ್ಲಿ ಸಾಗರ ಬಳಿಯ ಕ್ಯಾಸನೂರು ಗ್ರಾಮದಲ್ಲಿ ಪತ್ತೆಯಾಗಿತ್ತು. ಹೀಗಾಗಿ, ಇದನ್ನು ‘ಕ್ಯಾಸನೂರು ಫಾರೆಸ್ಟ್ ಡಿಸೀಸ್‌‘ (ಕೆಎಫ್‌ಡಿ) ಎಂದೂ ಸಹ ಕರೆಯಲಾಗುತ್ತದೆ. ಶಿವಮೊಗ್ಗ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ವ್ಯಾಪ್ತಿ ಹೊಂದಿರುವ ಮಲೆನಾಡು ಪ್ರದೇಶ ಜೀವವೈವಿಧ್ಯ, ದಟ್ಟ ಅರಣ್ಯ ಹಾಗೂ ವನ್ಯಜೀವಿ ಪ್ರದೇಶವಾಗಿದ್ದು, ಪರಿಸರದಲ್ಲಿನ ಅಸಮತೋಲನ ಬೆಳವಣಿಗೆಯಿಂದಾಗಿ ಇಲ್ಲಿನ ಜನಜೀವನ ಸಂಘರ್ಷದಿಂದ ಕೂಡಿದೆ. ವಿವಿಧ ಕಾರಣಗಳಿಂದಾಗಿ ಮಲೆನಾಡು ಪ್ರದೇಶ ಅಪಾಯ ಎದುರಿಸುತ್ತಿದೆ. ಹಲವು ಅರಣ್ಯ ಕಾಯಿಲೆಗಳ ಜೊತೆಗೆ ಸದ್ಯ ಉಲ್ಬಣಗೊಂಡಿರುವ ಮಂಗನ ಕಾಯಿಲೆ ಈ ಭಾಗದ ಜನರ ಜೀವನದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News