ಚಿಕ್ಕಮಗಳೂರು ನಗರಸಭೆಯಿಂದ 4.38 ಕೋಟಿ ರೂ. ಉಳಿತಾಯ ಬಜೆಟ್ ಮಂಡನೆ

Update: 2019-02-20 18:14 GMT

ಚಿಕ್ಕಮಗಳೂರು, ಫೆ. 20: ನಗರಸಭೆ ಸಂಭಾಗಣದಲ್ಲಿ ಬುಧವಾರ ನಡೆದ 2019-20ನೇ ಸಾಲಿನ ಬಜೆಟ್ ಮಂಡನಾ ಸಭೆಯಲ್ಲಿ ನಗರಸಭೆ ಅಧ್ಯಕ್ಷೆ ಶಿಲ್ಪಾ ರಾಜ್‍ಶೇಖರ್ 4.38 ಕೋಟಿ ರೂ. ಉಳಿತಾಯ ಬಜೆಟ್ ಮಂಡಿಸಿದ್ದು, 1228.35 ಲಕ್ಷ ರೂ. ಪ್ರಾರಂಭ ಶಿಲ್ಕಿನೊಂದಿಗೆ, 6010.94 ಲಕ್ಷ ರೂ. ಆದಾಯ ನಿರೀಕ್ಷಿಸಲಾಗಿದ್ದು, 6,800.79 ಲಕ್ಷ ರೂ. ವೆಚ್ಚ ಕಳೆದು 438.50 ಲಕ್ಷ ರೂ. ಉಳಿತಾಯ ನಿರೀಕ್ಷಿಸಿರುವ ಬಜೆಟನ್ನು ಅಧ್ಯಕ್ಷೆ ಶಿಲ್ಪಾರಾಜಶೇಖರ್ ಮಂಡಿಸಿ ಸಭೆಯ ಅನುಮೋದನೆ ಪಡೆದುಕೊಂಡರು.

ಆಸ್ತಿ ತೆರಿಗೆಯಿಂದ 680 ಲಕ್ಷ ರೂ., ಕಟ್ಟಡ ಪರವಾನಿಗೆಯಿಂದ 75 ಲಕ್ಷ, ವಾಣಿಜ್ಯ ಮಳಿಗೆ ಬಾಡಿಗೆ 170 ಲಕ್ಷ, ಅಭಿವೃದ್ಧಿ ಶುಲ್ಕ 60 ಲಕ್ಷ, ವ್ಯಾಪಾರ ಪರವಾನಗಿ ಶುಲ್ಕ 40 ಲಕ್ಷ, ಪಾರ್ಕಿಂಗ್ ಶುಲ್ಕ 50 ಲಕ್ಷ, ಖಾತಾ ಬದಲಾವಣೆ ಶುಲ್ಕ 20 ಲಕ್ಷ, ನೀರು ಮತ್ತು ಒಳಚರಂಡಿ ಶುಲ್ಕ 250 ಲಕ್ಷ, ಎಸ್‍ಎಫ್‍ಸಿ ವೇತನ ನಿಧಿ ಅನುದಾನ 840 ಲಕ್ಷ, ವಿದ್ಯುತ್ ಅನುದಾನ 650 ಲಕ್ಷ, ಎಸ್‍ಎಫ್‍ಸಿ ಮುಕ್ತ ನಿಧಿ ಅನುದಾನ 600 ಲಕ್ಷ ರೂ. ನಿರೀಕ್ಷಿಸಲಾಗಿದೆ ಎಂದು ಅವರು ಈ ವೇಳೆ ತಿಳಿಸಿದರು. 

ಅಪಘಾತಗಳ ನಿಯಂತ್ರಣಕ್ಕಾಗಿ ಕಿರಿದಾಗಿರುವ ಕೆ.ಎಂ.ರಸ್ತೆಯ ಬಸವನಹಳ್ಳಿ ರಸ್ತೆಯ ಎರಡು ಬದಿಗಳಲ್ಲಿ ತಡೆಗೋಡೆ ನಿರ್ಮಿಸಲು ಉದ್ದೇಶಿಸಲಾಗಿದೆ. ನಗರದಲ್ಲಿರವ ಉದ್ಯಾನವನಗಳ ಅಭಿವೃದ್ಧಿಗೆ 50 ಲಕ್ಷ ರೂ. ಮೀಸಲಿಡಲಾಗಿದೆ. ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ನಗರದ ಹೊರವಲಯದಲ್ಲಿರುವ ಹಿರೇಕೊಳಲೆ ಕೆರೆ ಆವರಣದಲ್ಲಿ ಪ್ರವಾಸಿಗರ ಅನುಕೂಲಕ್ಕಾಗಿ ಕುಡಿಯುವ ನೀರಿನ ವ್ಯವಸ್ಥೆ, ವಾಚ್‍ಮನ್ ಷೆಡ್, ಕಾಫಿಶಾಪ್, ಶೌಚಾಲಯ ನಿರ್ಮಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದರು. 

ಪರಿಶಿಷ್ಟ ಜಾತಿ ಮತ್ತು ಪಂಗಡದವರ ಶ್ರೇಯೋಭಿವೃದ್ಧಿಗಾಗಿ 150 ಲಕ್ಷ ರೂ. ಸೇರಿದಂತೆ ಬಡಜನರ ಶ್ರೇಯೋಭಿವೃದ್ಧಿಗಾಗಿ 45 ಲಕ್ಷ ರೂ. ಮತ್ತು ವಿಶೇಷ ವಿಕಲಚೇತನರ ಅಭಿವೃದ್ಧಿಗಾಗಿ 18 ಲಕ್ಷ ರೂ. ಕಾಯ್ದಿರಿಸಲಾಗಿದೆ. ನಲ್ಮ್ ಯೋಜನೆಯಡಿ ಅರ್ಹ ಬಡ ಫಲಾನುಭವಿಗಳಿಗೆ ಸ್ವಂತ ಉದ್ಯೋಗ ನಡೆಸಲು ರಾಷ್ಟ್ರೀಕೃತ ಬ್ಯಾಂಕ್‍ಗಳಿಂದ ಸಾಲ ಸೌಲಭ್ಯ ಒದಗಿಸುವುದು. ನಗರದ ಮಹಿಳಾ ಸಬಲೀಕರಣಕ್ಕಾಗಿ ಸ್ವಸಹಾಯ ಸಂಘಗಳನ್ನು ರಚಿಸುವುದು ಹಾಗೂ ಸಂಘಗಳಿಗೆ ಆವರ್ತಕ ನಿಧಿ ಒದಗಿಸುವುದು ಮತ್ತು ಗುಂಪು ಉದ್ದಿಮೆ ನಡೆಸಲು ಬ್ಯಾಂಕ್‍ಗಳಿಂದ ಸಾಲಸೌಲಭ್ಯ ಒದಗಿಸಲು ಉದ್ದೇಶಿಸಲಾಗಿದೆ ಎಂದ ಅವರು, 2019-20ನೇ ಸಾಲಿನ ಬಜೆಟ್ ನಗರದ ಅಭಿವೃದ್ಧಿ ಪರ ಬಜೆಟ್ ಆಗಿದೆ ಎಂದು ತಿಳಿಸಿದರು.

ಅಮೃತ್ ಯೋಜನೆಯಿಂದ 396.74 ಲಕ್ಷ, 14ನೇ ಹಣಕಾಸಿನ ಅನುದಾನ 801.20 ಲಕ್ಷ ರೂ. ಸೇರಿ 1945.94 ಲಕ್ಷ ರೂ. ವಿಶೇಷ ಖಾತೆಯಿಂದ ನಿರೀಕ್ಷಿಸಲಾಗಿದೆ. ನಗರಸಭಾ ನಿಧಿ, ಎಸ್.ಎಫ್.ಸಿ, 14ನೇ ಹಣಕಾಸು ಯೋಜನೆಗಳಲ್ಲಿ ನಗರದಲ್ಲಿ ಶೇ.65 ರಷ್ಟು ರಸ್ತೆ, ಚರಂಡಿ ಮತ್ತು ಕುಡಿಯುವ ನೀರಿನ ಯೋಜನೆ ಮಾಡಲಾಗಿದ್ದು, ಉಳಿಕೆ ಕಾಮಗಾರಿ ನಿರ್ವಹಿಸಲು 650 ಲಕ್ಷ ರೂ. ಮೀಸಲಿಡಲಾಗಿದೆ. ಕಸ ಸಂಗ್ರಹಣೆ ಕಾರ್ಯಕ್ಕೆ ಬೇಕಾದ ಸಾಮಾಗ್ರಿ ಖರೀದಿಸಲು ಮತ್ತು ಯಂತ್ರೋಪಕರಣಗಳ ವೆಚ್ಚಕ್ಕಾಗಿ 50 ಲಕ್ಷ ರೂ. ಮೀಸಲಿರಿಸಲಾಗಿದೆ ಎಂದರು.

ಕೆ.ಎಂ. ರಸ್ತೆಯ ಆಸ್ಪತ್ರೆ ಪಕ್ಕದ ನಗರಸಭಾ ಜಾಗದಲ್ಲಿ ಹೂವಿನ ವ್ಯಾಪಾರಸ್ಥರಿಗೆ 10 ಲಕ್ಷ ರೂ. ವೆಚ್ಚದಲ್ಲಿ ಕಟ್ಟೆ ನಿರ್ಮಿಸಿ ವ್ಯಾಪಾರ ಮಾಡಲು ಅನುಕೂಲ ಮಾಡಿಕೊಡಲು ಉದ್ದೇಶಿಸಲಾಗಿದೆ. ಸುಸಜ್ಜಿತ ಕಸಾಯಿಖಾನೆ ನಿರ್ಮಾಣಕ್ಕೆ ಮುಂದಾಗುವುದಾಗಿ ಇದೇ ವೇಳೆ ಅವರು ತಿಳಿಸಿದರು. 

ಸದಸ್ಯ ಹಿರೇಮಗಳೂರು ಪುಟ್ಟಸ್ವಾಮಿ ಮಾತನಾಡಿ, ಹಳೆಯ ವಿಷಯಗಳನ್ನೇ ಮತ್ತೇ ಪ್ರಸ್ತಾಪಿಸಲಾಗಿದೆ. ಕಳೆದ ಬಜೆಟ್‍ನಲ್ಲಿ ಘೋಷಿಸಿದ್ದ ಕೆಲಸವನ್ನು ಈವರೆಗೂ ಮಾಡಿಲ್ಲ, 2015ರಲ್ಲಿ ಮಂಡಿಸಿದ ಬಜೆಟ್‍ನಲ್ಲಿ ಜಿಲ್ಲಾಸ್ಪತ್ರೆಗೆ 2 ಡಯಾಲಿಸಿಸ್ ಯಂತ್ರಗಳನ್ನು ಕೊಡುವುದಾಗಿ ತಿಳಿಸಲಾಗಿತ್ತು. ಆದರೆ ಈವರೆಗೂ ಅದನ್ನು ಕೊಟ್ಟಿಲ್ಲ ಎಂದು ಆರೋಪಿಸಿದ ಅವರು, ಅಭಿವೃದ್ಧಿ ಪೂರಕ ಬಜೆಟ್ ನೀಡಿದ್ದೀರ. ಆದರೆ ಬಜೆಟ್‍ನಲ್ಲಿ ಪ್ರಸ್ತಾಪಿಸಿದ ವಿಷಯಗಳನ್ನು ಸರಿಯಾಗಿ ಅನುಷ್ಠಾನಕ್ಕೆ ತರಬೇಕೆಂದರು.

ಈ ವೇಳೆ ನಗರಸಭೆ ಮಾಜಿ ಅಧ್ಯಕ್ಷ ದೇವರಾಜ್‍ ಶೆಟ್ಟಿ ಉತ್ತರಿಸಿ, ಜಿಲ್ಲಾಸ್ಪತ್ರೆಗೆ ಡಯಾಲಿಸಿಸ್ ಯಂತ್ರವನ್ನು ಕೊಡುವ ಸಂಬಂಧ ಡಿಎಚ್‍ಒ ಅವರೊಂದಿಗೆ ಚರ್ಚಿಸಿದಾಗ ಅವರು, ಆಸ್ಪತ್ರೆಯಲ್ಲಿ ಸಿಬ್ಬಂದಿ ಹಾಗೂ ಕಟ್ಟಡದ ಕೊರತೆ ಇರುವುದರಿಂದ ಕೊಟ್ಟರೂ ಪ್ರಯೋಜನವಾಗುವುದಿಲ್ಲವೆಂದು ತಿಳಿಸಿದ್ದರಿಂದ ಅದಕ್ಕಾಗಿ ಮೀಸಲಿಟ್ಟಿದ್ದ ಹಣದಲ್ಲಿ ಶೌಚಾಲಯಗಳನ್ನು ನಿರ್ಮಿಸಿಕೊಡಲಾಯಿತು ಎಂದರು.

ಸದಸ್ಯ ಎಚ್.ಡಿ.ತಮ್ಮಯ್ಯ ಮಾತನಾಡಿ, ಇದೊಂದು ಉತ್ತಮ ಬಜೆಟ್, ಹಿಂದೂ ಮುಸಾಫಿರ್ ಖಾನಾ ಜಾಗದಲ್ಲಿ ವಾಣಿಜ್ಯ ಸಂಕೀರ್ಣ ಮತ್ತು ಪಾರ್ಕಿಂಗ್ ವ್ಯವಸ್ಥೆ ಮಾಡುವುದಾಗಿ ಹೇಳಲಾಗಿದೆ. ಈಗ ನಗರದಲ್ಲಿ ಪಾರ್ಕಿಂಗ್ ವ್ಯವಸ್ಥೆಗೆ ಸರಿಯಾದ ಜಾಗವೇ ಇಲ್ಲದಂತಾಗಿದೆ. ಪಾರ್ಕಿಂಗ್ ಸಮಸ್ಯೆ ಬಗೆಹರಿಸಲು ಮುಸಾಫಿರ್ ಖಾನಾ ಜಾಗದಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಿಸದೆ ಪೂರ್ಣವಾಗಿ ಪಾರ್ಕಿಂಗ್ ವ್ಯವಸ್ಥೆ ಮಾಡುವುದು ಒಳ್ಳೆಯದು ಎಂದು ಸಲಹೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News