ಹೃದಯ ಸಮಸ್ಯೆ: ಸಕ್ರಿಯ ಫುಟ್ಬಾಲ್‌ನಿಂದ ಸಾಮಿ ಖೆದಿರಾ ದೂರ?

Update: 2019-02-20 18:45 GMT

ಮಿಲನ್, ಫೆ.20: ಅನಿಯಮಿತ ಹೃದಯಬಡಿತದ ಸಮಸ್ಯೆ ಎದುರಿಸುತ್ತಿರುವ ಜುವೆಂಟಸ್ ಮಿಡ್ ಫೀಲ್ಡರ್ ಸಾಮಿ ಖೆದಿರಾ ಚಿಕಿತ್ಸೆ ಪಡೆಯುವ ಉದ್ದೇಶದಿಂದ ತಿಂಗಳ ಕಾಲ ಸಕ್ರಿಯ ಫುಟ್ಬಾಲ್‌ನಿಂದ ದೂರ ಉಳಿಯುವ ಸಾಧ್ಯತೆಯಿದೆ.

31ರ ಹರೆಯದ ಸಾಮಿ ಬುಧವಾರ ಅಟ್ಲೆಟಿಕೊ ಮ್ಯಾಡ್ರಿಡ್‌ನಲ್ಲಿ ನಡೆಯಬೇಕಾಗಿದ್ದ ಚಾಂಪಿಯನ್ಸ್ ಲೀಗ್ ಪಂದ್ಯದಿಂದ ಹೊರಗುಳಿದಿದ್ದಾರೆ.

ಹೃದಯ ಸಂಬಂಧಿ ಸಮಸ್ಯೆ ಎದುರಿಸುತ್ತಿರುವ ಸಾಮಿಗೆ ಇದು ಅನಿಯಮಿತ ಹಾಗೂ ಸಾಮಾನ್ಯವಾಗಿ ಅಸಹಜವಾದ ವೇಗದ ಹೃದಯ ಬಡಿತದ ಸಮಸ್ಯೆ ಉಂಟು ಮಾಡುತ್ತದೆ. ಇದು ತಲೆ ಸುತ್ತುವಿಕೆ, ದಣಿವು ಹಾಗೂ ಉಸಿರಾಟದ ಸಮಸ್ಯೆಗೆ ಕಾರಣವಾಗಬಹುದು.

ಸಾಮಿಗೆ ಮಂಗಳವಾರ ಅಭ್ಯಾಸ ನಡೆಸುತ್ತಿದ್ದಾಗ ಹಠಾತ್ತನೆ ಎದೆ ಬಡಿತ ಹೆಚ್ಚಾದ ಅನುಭವ ಆಗಿದೆ. ತಕ್ಷಣವೇ ಅವರು ಚಿಕಿತ್ಸೆ ಪಡೆದಿದ್ದಾರೆ.

‘‘ಸಾಮಿ ತಂಡದಿಂದ ಹೊರಗುಳಿದಿದ್ದು, ಹೆಚ್ಚಿನ ವೈದ್ಯಕೀಯ ಪರೀಕ್ಷೆಗಾಗಿ ಟ್ಯುರಿನ್‌ನಲ್ಲಿ ಉಳಿಯಲಿದ್ದಾರೆ. ಅಂತರ್‌ರಾಷ್ಟ್ರೀಯ ಪಂದ್ಯ ಆಡಿದ ಅನುಭವಿ ಆಗಿರುವ ಸಾಮಿ ನಮ್ಮ ತಂಡದ ಪ್ರಮುಖ ಆಟಗಾರ’’ ಎಂದು ಕೋಚ್ ಮಸ್ಸಿಮಿಲಿಯಾನೊ ಅಲ್ಲೆಗ್ರಿ ಹೇಳಿದ್ದಾರೆ.

‘‘ಸ್ವಲ್ಪ ಸಮಯ ಚೇತರಿಸಿಕೊಂಡ ಬಳಿಕ ಅವರು ಒಂದು ತಿಂಗಳಲ್ಲಿ ತಮ್ಮ ಚಟುವಟಿಕೆಯನ್ನು ಪುನಾರಂಭಿಸಲಿದ್ದಾರೆ’’ ಎಂದು ಇಟಾಲಿಯನ್ ಚಾಂಪಿಯನ್ ಜುವೆಂಟಸ್ ಬುಧವಾರ ಹೇಳಿಕೆಯೊಂದರಲ್ಲಿ ತಿಳಿಸಿದೆ.

ಸಾಮಿ 2014ರಲ್ಲಿ ಜರ್ಮನಿ ತಂಡ ವಿಶ್ವಕಪ್ ಜಯಿಸಲು ನೆರವಾಗಿದ್ದರು. ಹಲವು ರೀತಿಯ ಗಾಯದ ಸಮಸ್ಯೆ ಎದುರಿಸಿದ್ದ ಅವರು ಈ ಋತುವಿನಲ್ಲಿ 9 ಲೀಗ್ ಪಂದ್ಯ ಸಹಿತ ಒಟ್ಟು 15 ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದರು.

ಅರ್ಸೆನೆಲ್ ಡಿಫೆಂಡರ್ ಸ್ಟೀಫನ್ ಲಿಚ್‌ಸ್ಟೆನೆರ್ 2015ರಲ್ಲಿ ಇದೇ ರೀತಿಯ ಸಮಸ್ಯೆ ಎದುರಿಸಿದ್ದರು. ಒಂದು ತಿಂಗಳ ಬಳಿಕ ಅವರು ಫುಟ್ಬಾಲ್‌ಗೆ ವಾಪಸಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News