ಪಾಕಿಸ್ತಾನವನ್ನು ಉಗ್ರ ರಾಷ್ಟ್ರ ಎಂದು ಘೋಷಿಸಲು ದಿನೇಶ್ ಗುಂಡೂರಾವ್ ಒತ್ತಾಯ

Update: 2019-02-20 18:46 GMT

ಕಾಳಮಯದ್ದನದೊಡ್ಡಿ,ಫೆ.20: ಪಾಕಿಸ್ತಾನವನ್ನು ಉಗ್ರ ರಾಷ್ಟ್ರ ಎಂದು ಘೋಷಿಸಿ ಸರಿಯಾದ ಪಾಠ ಕಲಿಸಬೇಕೆಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಒತ್ತಾಯಿಸಿದ್ದಾರೆ.

ಸಮೀಪದ ಗುಡಿಗೆರೆ ಕಾಲನಿಯ ಹುತಾತ್ಮ ಯೋಧ ಗುರು ಕುಟುಂಬಕ್ಕೆ ಸಾಂತ್ವನ ಹೇಳಿ ನಂತರ ಮಾತನಾಡಿದ ಅವರು, ವಿಶ್ವ ಸಂಸ್ಥೆ ಪಾಕ್ ವಿರುದ್ಧ ಕಠಿಣ ನಿರ್ಧಾರ ತೆಗೆದು ಕೊಳ್ಳುವ ಮೂಲಕ ಉಗ್ರ ರಾಷ್ಟ್ರ ಎಂದು ಘೋಷಿಸಬೇಕೆಂದರು.

ಪ್ರಧಾನಿ ಮೋದಿ ಅವರು ಉಗ್ರರ ದಾಳಿಗೆ ಸರಿಯಾದ ಪ್ರತ್ಯುತ್ತರ ನೀಡಲಿದ್ದಾರೆ. ರಾಹುಲ್‍ಗಾಂಧಿ ಅವರು ಸಹ ಮೋದಿ ಅವರಿಗೆ ಪಾಕಿಸ್ತಾನವನ್ನು ಮಟ್ಟಹಾಕಲು ಬೆಂಬಲ ನೀಡಿದ್ದಾರೆ. ಇದಕ್ಕೆ ನಾವು ಮೋದಿಯವರ ಜೊತೆಗಿದ್ದೇವೆ. ಕಳೆದ 5 ವರ್ಷದಲ್ಲಿ ಈ ರೀತಿಯ ದಾಳಿಗಳು ನಡೆಯುತ್ತಿವೆ, ಅದಕ್ಕೆ ಪ್ರತಿ ಉತ್ತರ ನೀಡಬೇಕು. ಇತ್ತೀಚಿನ ದಿನಗಳಲ್ಲಿ ಯೋಧರ ಹತ್ಯೆಯಾಗುತ್ತಿದೆ. ಮಾತಿನಿಂದ ಏನು ಆಗಲ್ಲ, ಮೋದಿ ಮಾಡಿ ತೋರಿಸಬೇಕು ಎಂದರು.

ಕಾಂಗ್ರೆಸ್ ಪಕ್ಷದಿಂದ 5 ಲಕ್ಷ, ಮನ್ಮುಲ್‍ನಿಂದ 3 ಲಕ್ಷ, ಡಿಸಿಸಿ ಬ್ಯಾಂಕ್‍ನಿಂದ 2ಲಕ್ಷ ಸೇರಿ ಒಟ್ಟಾರೆ 10 ಲಕ್ಷ ಗುರು ಕುಟುಂಬಕ್ಕೆ ನೀಡಲಾಗಿದೆ. ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಯೋಧನ ಕುಟುಂಬದ ಜೊತೆ ನಿಲ್ಲುವುದು ನಮ್ಮ ಧರ್ಮ ಹಾಗಾಗಿ. ಇಂದು ಗುರು ಕುಟುಂಬಕ್ಕೆ ಅಳಿಲು ಸೇವೆ ಮಾಡಿದ್ದೇವೆ ಎಂದರು.

ಮಾಜಿ ಶಾಸಕರಾದ ಎನ್.ಚಲುವರಾಯಸ್ವಾಮಿ, ಪಿ.ನರೇಂದ್ರಸ್ವಾಮಿ, ಮಧು ಜಿ. ಮಾದೇಗೌಡ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್, ಮನ್‍ಮುಲ್ ಅಧ್ಯಕ್ಷ ಕದಲೂರು ರಾಮಕೃಷ್ಣ, ಡಾ.ಕೆ.ರಾಮಚಂದ್ರಭಟ್ ಸೇರಿದಂತೆ ಹಲವು ಮುಖಂಡರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News