ತುಮಕೂರು: ಎಕ್ಸ್ ಪ್ರೆಸ್ ಕೆನಾಲ್‍ ವಿರೋಧಿಸಿ ಹೆದ್ದಾರಿ ತಡೆದು ಬಿಜೆಪಿ ಪ್ರತಿಭಟನೆ- ಕಾರ್ಯಕರ್ತರ ಬಂಧನ

Update: 2019-02-20 18:50 GMT

ತುಮಕೂರು,ಫೆ.20: ಜಿಲ್ಲೆಯ ಪಾಲಿನ ಹೇಮಾವತಿ ನೀರನ್ನು ಹರಿಸಲು ಮಲತಾಯಿ ಧೋರಣೆ ಅನುಸರಿಸುತ್ತಿರುವುಲ್ಲದೆ, ಕಡಬ ಬಳಿಯಿಂದ ಪೈಪ್‍ಲೈನ್ ಮೂಲಕ ಚನ್ನಪಟ್ಟಣ, ರಾಮನಗರಕ್ಕೆ ಹೇಮಾವತಿ ನೀರಿನ ಯೋಜನೆಯನ್ನು ಕೈಬಿಡುವಂತೆ ಒತ್ತಾಯಿಸಿ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ರಾಷ್ಟ್ರೀಯ ಹೆದ್ದಾರಿಯನ್ನು ತಡೆದು ಪ್ರತಿಭಟಿಸಿದರು.

ಪ್ರತಿಭಟನಾ ನಿರತರನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಸಂಸದ ಜಿ.ಎಸ್.ಬಸವರಾಜು, ಎಕ್ಸ್ ಪ್ರೆಸ್ ಕೆನಾಲ್ ಹೆಸರಿನಲ್ಲಿ ಜಿಲ್ಲೆಯ ನೀರಾವರಿಗೆ ಮರಣ ಶಾಸನವನ್ನು ಬರೆಯಲು ಸಮ್ಮಿಶ್ರ ಸರ್ಕಾರ ಮುಂದಾಗಿದ್ದು, ನ್ಯಾಯೋಚಿತವಾಗಿ ನೀರನ್ನು ನೀಡದೇ ಲಿಂಕ್ ಕೆನಾಲ್ ಮೂಲಕ ಕುಣಿಗಲ್ ಮೂಲಕ ಚನ್ನಪಟ್ಟಣ, ರಾಮನಗರಕ್ಕೆ ನೀರು ಹರಿಸುವ ಷಡ್ಯಂತ್ರವನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಮಾಡಿದ್ದಾರೆ ಎಂದು ಆರೋಪಿಸಿದರು.

ಸಚಿವರಾದ ಡಿ.ಕೆ.ಶಿವಕುಮಾರ್, ಶಾಸಕರಾದ ಡಾ.ರಂಗನಾಥ್ ಅವರೊಂದಿಗೆ ಸೇರಿಕೊಂಡಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಜಿಲ್ಲೆಗೆ ಅನ್ಯಾಯ ಮಾಡಲು ಹೊರಟಿದ್ದು, ಜಿಲ್ಲೆಯ ಜನರೇ ನೀರಿನ ಹಾಹಾಕಾರದಿಂದ ತತ್ತರಿಸುತ್ತಿದ್ದಾರೆ. ಈ ಯೋಜನೆಯನ್ನು ತಕ್ಷಣ ಕೈಬಿಡಬೇಕು. ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಈ ಯೋಜನೆಗೆ ಒಪ್ಪಿಗೆ ದೊರೆತರೆ ಉಗ್ರ ಹೋರಾಟವನ್ನು ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ರೈತಮೋರ್ಚಾ ರಾಜ್ಯ ಉಪಾಧ್ಯಕ್ಷರಾದ ಎಸ್.ಶಿವಪ್ರಸಾದ್ ಮಾತನಾಡಿ, ಹಲವು ದಶಕಗಳಿಂದ ಹಾಸನ ರಾಜಕಾರಣದ ಕುತಂತ್ರದಿಂದ ತುಮಕೂರು ಜಿಲ್ಲೆಗೆ ಅನ್ಯಾಯ ಮಾಡುತ್ತಿದ್ದು, ಈಗಲೂ ಸಮ್ಮಿಶ್ರ ಸರ್ಕಾರ ಮಲತಾಯಿ ಧೋರಣೆಯನ್ನು ಅನುಸರಿಸುತ್ತಿದೆ. ತುಮಕೂರು ಜಿಲ್ಲೆ ಭೀಕರ ಬರದಿಂದ ತತ್ತರಿಸುತ್ತಿದ್ದು, ಸಂಕಷ್ಟದ ಪರಿಸ್ಥಿತಿಯಲ್ಲಿ ನಮ್ಮ ಪಾಲಿನ ನೀರನ್ನು ವ್ಯವಸ್ಥಿತ ಹುನ್ನಾರ ಮಾಡಿ ತೆಗೆದುಕೊಂಡು ಹೋಗುತ್ತಿರುವುದು ಸರಿಯಲ್ಲ ಎಂದರು.

ರಾಮನಗರ, ಕನಕಪುರಕ್ಕೆ ತೆಗೆದುಕೊಂಡು ಹೋಗುತ್ತಿರುವ ನೀರಿನ ಬಗ್ಗೆ ಯಾಕೆ ಧ್ವನಿ ಎತ್ತುತ್ತಿಲ್ಲ. ಉಪಮುಖ್ಯಮಂತ್ರಿಗಳಾದ ಜಿ.ಪರಮೇಶ್ವರ್ ರವರಿಗೆ ಜಿಲ್ಲೆಯ ಬಗ್ಗೆ ನಿಮಗೆ ಕಾಳಜಿ ಇಲ್ಲವೆ ? 4 ಬಾರಿ ಆಯ್ಕೆಯಾದ ಮಂತ್ರಿ ಶ್ರೀನಿವಾಸ್, ಏನು ಮಾಡುತ್ತಿದ್ದೀರ ? ಅತ್ಯಂತ ಹಿಂದುಳಿದ ತಾಲೂಕು ಪಾವಗಡದಿಂದ ಆಯ್ಕೆಯಾದ ಸಚಿವ ವೆಂಕಟರಮಣಪ್ಪ ನಿಮಗೆ ಶಾಪ ತಟ್ಟುವುದಿಲ್ಲವೆ ? ನಿಮಗೆಲ್ಲ ನೈತಿಕತೆ ಇಲ್ಲ. ನೀವೆಲ್ಲರು ಅಸಮರ್ಥ ನಾಲಾಯಕ್ ಮಂತ್ರಿಗಳಾಗಿದ್ದೀರ ಎಂದು ದೂರಿದರು. 

ಹೋರಾಟದ ಸಂದರ್ಭದಲ್ಲಿ ಬಿಗಿ ಪೋಲೀಸ್ ಬಂದೋಬಸ್ತ್ ಮಾಡಲಾಗಿತ್ತು. ರಾಷ್ಟ್ರೀಯ ಹೆದ್ದಾರಿ ತಡೆಯಲು ಹೊರಟಾಗ ಕಾರ್ಯಕರ್ತರು ಮತ್ತು ಪೋಲೀಸರ ಮದ್ಯೆ ಮಾತಿನ ಚಕಮಕಿ ನಡೆಯಿತು. ರಸ್ತೆ ತಡೆಯಲು ಬಿಡದೆ ನೂರಾರು ಕಾರ್ಯಕರ್ತರನ್ನು ಬಂಧಿಸಲಾಯಿತು.

ಯುವಮೋರ್ಚಾ ಜಿಲ್ಲಾಧ್ಯಕ್ಷರಾದ ಟಿ.ಹೆಚ್.ಹನುಮಂತರಾಜು, ಜಿ.ಪಂ.ಸದಸ್ಯ ಹುಚ್ಚಯ್ಯ, ಜಿಲ್ಲಾ ಕಾರ್ಯದರ್ಶಿ ರುದ್ರೇಶ್, ಯುವಮೋರ್ಚಾ ಜಿಲ್ಲಾ ಪ್ರಧಾನಕಾರ್ಯದರ್ಶಿ ಶ್ರೀನಿವಾಸ್, ರುದ್ರೇಶ್, ಸುರೇಶ್, ಶರತ್, ರಾಕೇಶ್, ರಮೇಶ್ ಮಗದೂರು, ವಿನಯ್ ಹಿರೇಹಳ್ಳಿ, ರಕ್ಷಿತ್, ತರಕಾರಿ ಮಹೇಶ್, ಬಂಬೂ ಮೋಹನ್, ಪುರುಷೋತ್ತಮ, ಪಾಲಿಕೆ ಸದಸ್ಯರಾದ ರಮೇಶ್, ಮಂಜುಳ, ದೀಪ, ಬಿ.ಜಿ.ಕೃಷ್ಣಪ್ಪ, ನವೀನ ಅರುಣ ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. (ಫೋಟೋ ಇದೆ)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News