ಜೈಶ್-ಎ- ಮುಹಮ್ಮದ್ ಸಂಘಟನೆಯಿಂದ ಇನ್ನೂ 'ಉಗ್ರ' ದಾಳಿ?

Update: 2019-02-21 04:16 GMT

ಶ್ರೀನಗರ, ಫೆ.21: ಪುಲ್ವಾಮಾ ಆತ್ಮಹತ್ಯಾ ಬಾಂಬ್ ದಾಳಿಯ ಯಶಸ್ಸಿನಿಂದ ಉತ್ತೇಜಿತವಾಗಿರುವ ಜೈಶ್-ಎ- ಮುಹಮ್ಮದ್ ಉಗ್ರ ಸಂಘಟನೆ, ಇನ್ನಷ್ಟು ದೊಡ್ಡ ಪ್ರಮಾಣದ "ಫಿದಾಯಿನ್ ದಾಳಿ" ನಡೆಸಲು ಸಿದ್ಧತೆ ನಡೆಸುತ್ತಿದೆ ಎನ್ನುವ ಅಂಶವನ್ನು ಗುಪ್ತಚರ ವಿಭಾಗ ಬಹಿರಂಗಪಡಿಸಿದೆ ಎಂದು 'ದಿ ಟೈಮ್ಸ್ ಆಫ್ ಇಂಡಿಯಾ' ವರದಿ ಮಾಡಿದೆ.

ಪಾಕಿಸ್ತಾನದಲ್ಲಿರುವ ಜೆಇಎಂ ನಾಯಕರು ಮತ್ತು ಕಾಶ್ಮೀರದಲ್ಲಿರುವ ಉಗ್ರರ ನಡುವೆ ಫೆಬ್ರವರಿ 16 ಮತ್ತು 17ರಂದು ನಡೆದ ಸಂಭಾಷಣೆಯನ್ನು ಕದ್ದಾಲಿಕೆ ಮಾಡಿದಾಗ ಈ ಅಂಶ ತಿಳಿದುಬಂದಿದೆ ಎಂದು ಗುಪ್ತಚರ ವಿಭಾಗದ ಮೂಲಗಳು ಹೇಳಿವೆ.

ಭಾರತದ ಭದ್ರತಾ ಪಡೆಗಳಿಗೆ ದೊಡ್ಡ ಹಾನಿ ಉಂಟು ಮಾಡುವ ಮತ್ತೊಂದು ಬಾಂಬ್‌ ದಾಳಿಯನ್ನು ನಡೆಸಲು ಯೋಜಿಸಿದ್ದು, ಇದನ್ನು ಜಮ್ಮು ಅಥವಾ ಜಮ್ಮು ಕಾಶ್ಮೀರದ ಹೊರಗೆ ನಡೆಸಲು ಉದ್ದೇಶಿಸಿದೆ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಇದೆ ಎಂದು ಗುಪ್ತಚರ ಅಧಿಕಾರಿಗಳು ಹೇಳಿದ್ದಾರೆ.

ಮೂವರು ಆತ್ಮಹತ್ಯಾ ಬಾಂಬರ್‌ಗಳು ಸೇರಿದಂತೆ 21 ಮಂದಿ ಜೆಇಎಂ ಸದಸ್ಯರು ಈಗಾಗಲೇ ಭಾರತದ ಗಡಿಯೊಳಕ್ಕೆ ನುಸುಳಿದ್ದು, ಕಾಶ್ಮೀರ ಕಣಿವೆಯ ಹೊರಗೆ ಎರಡು ದಾಳಿ ಸೇರಿದಂತೆ ಮೂರು ದಾಳಿಗಳನ್ನು ನಡೆಸಲು ಯೋಜಿಸಿದೆ ಎಂದು ತಿಳಿದುಬಂದಿದೆ. ಜೆಇಎಂ ಪುಲ್ವಾನಾ ದಾಳಿಯ ಸಿದ್ಧತೆಯ ವೀಡಿಯೊವನ್ನು ಕೂಡಾ ಇಷ್ಟರಲ್ಲೇ ಬಿಡುಗಡೆ ಮಾಡಲಿದೆ ಎಂದು ಭದ್ರತಾ ಪಡೆ ಮೂಲಗಳು ಹೇಳಿವೆ.

ಸ್ಫೋಟಕ ತುಂಬಿದ್ದ ಕಾರನ್ನು ಭದ್ರತಾ ಪಡೆ ವಾಹನಗಳಿಗೆ ಢಿಕ್ಕಿ ಹೊಡೆಸಿದ 20 ವರ್ಷದ ಅದಿಲ್ ಅಹ್ಮದ್ ದಾರ್‌ನನ್ನು ವೈಭವೀಕರಿಸುವುದು ಈ ದಾಳಿಯ ಉದ್ದೇಶ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News