ಹಳ್ಳಿಗಳಲ್ಲಿ ದಾಸ್ತಾನು ಮಳಿಗೆ ಸ್ಥಾಪನೆ: ಶಿವಶಂಕರ್ ರೆಡ್ಡಿ

Update: 2019-02-21 18:37 GMT

ಬೆಂಗಳೂರು, ಫೆ.21: ನಮಲ್ಲಿ ದಾಸ್ತಾನು ಮಳಿಗೆಗಳ ಕೊರತೆಯಿಂದಾಗಿ ಹೆಚ್ಚಿನ ಪ್ರಮಾಣದ ಆಹಾರ ಪೋಲಾಗುತ್ತಿದೆ. ಇದನ್ನು ಮನಗಂಡಿರುವ ಸರಕಾರ ಹಳ್ಳಿಗಳಲ್ಲಿ ದಾಸ್ತಾನು ಮಳಿಗೆಗಳನ್ನು ಸ್ಥಾಪಿಸಲು ವಿಶೇಷ ಆಸಕ್ತಿ ತಾಳಿದೆ ಎಂದು ಕೃಷಿ ಸಚಿವ ಶಿವಶಂಕರ್ ರೆಡ್ಡಿ ತಿಳಿಸಿದರು.

ಗುರುವಾರ ಕೃಷಿ ವಿಶ್ವವಿದ್ಯಾನಿಲಯ, ಬೇಕರಿ ತರಬೇತಿ ಕೇಂದ್ರ ಆಯೋಜಿಸಿದ್ದ ಜಾಗತಿಕ ಆರೋಗ್ಯಕ್ಕಾಗಿ ಪೌಷ್ಠಿಕಾಂಶಗಳ ಭದ್ರತೆ ಬಗ್ಗೆ ಕಾರ್ಯಾಗಾರ ಹಾಗೂ ಕೇಕ್ ಮತ್ತು ಬೇಕರಿ ಪದಾರ್ಥಗಳ ಪ್ರದರ್ಶನ ಹಾಗೂ ಮಾರಾಟದ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಹಳ್ಳಿಗಳ ಉತ್ತಮವಲ್ಲದ ರಸ್ತೆ, ದಾಸ್ತಾನು ಮಳಿಗೆಗಳು ಮತ್ತು ಶೈತ್ಯಾಗಾರಗಳ ಕೊರತೆಯಿಂದ ಹೆಚ್ಚಿನ ಪ್ರಮಾಣದಲ್ಲಿ ಆಹಾರ ಪೋಲಾಗುತ್ತಿದೆ. ಹೀಗಾಗಿ ಸುಸಜ್ಜಿತವಾದ ಶೈತ್ಯಾಗಾರಗಳನ್ನು ಸ್ಥಾಪಿಸಿ ಹಳ್ಳಿ ರಸ್ತೆಗಳನ್ನು ರಾಷ್ಟ್ರೀಯ ಹೆದ್ದಾರಿಗಳಿಗೆ ಸಂಪರ್ಕ ಕಲ್ಪಿಸಲು ಉತ್ತಮ ಗ್ರಾಮೀಣ ರಸ್ತೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.

ಉತ್ತಮ ಆರೋಗ್ಯಕ್ಕಾಗಿ ಪೌಷ್ಠಿಕಾಂಶಯುಕ್ತ ಸಮಾತೋಲನ ಆಹಾರವನ್ನು ಸೇವಿಸುವುದು ಅನಿವಾರ್ಯ. ಉತ್ತಮ ಆಹಾರವನ್ನು ಪಡೆಯಲು ಉತ್ತಮ ಬೆಳೆ ಬೆಳೆಯುವುದು ಅವಶ್ಯಕ. ಉತ್ತಮ ಬೆಳೆ ಬೆಳೆಯಲು ಉತ್ತಮ ಮಣ್ಣು ಅನಿವಾರ್ಯ. ಆದುದರಿಂದ ನಾವು ಮಣ್ಣನ್ನು ಸಮರ್ಪಕ ರೀತಿಯಲ್ಲಿ ಉಳಿಸಿ, ಮುಂದಿನ ಪೀಳಿಗೆಗೆ ನೀಡವುದು ನಮ್ಮೆಲ್ಲರ ಆದ್ಯ ಕರ್ತವ್ಯವೆಂದು ಅವರು ಹೇಳಿದರು.

ರಾಜ್ಯ ಸರಕಾರವು ಹೆಚ್ಚಿನ ಸಂಖ್ಯೆಯ ರೈತರು ಸಿರಿಧಾನ್ಯಗಳನ್ನು ಬೆಳೆಯುವಂತೆ ಪ್ರೋತ್ಸಾಹಿಸಲು ಪ್ರತಿ ಹೆಕ್ಟೇರ್‌ಗೆ 10 ಸಾವಿರ ರೂ.ಗಳನ್ನು ಪ್ರೋತ್ಸಾಹಧನವಾಗಿ ನೀಡಲು ನಿರ್ಧರಿಸಿದೆ. ಮುಖ್ಯಮಂತ್ರಿಗಳು 2019-20ನೆ ಸಾಲಿನ ಆಯವ್ಯಯದಲ್ಲಿ ಇದನ್ನು ಘೋಷಿಸಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

ಆಹಾರದ ಉತ್ಪಾದನೆಗೆ ನೀಡುವ ಮಹತ್ವವನ್ನು ಆಹಾರ ಪೋಲಾಗುವುದನ್ನು ತಡೆಗಟ್ಟುವುದಕ್ಕ್ಕೂ ನೀಡಬೇಕು. ಮದುವೆ ಮುಂತಾದ ಶುಭ ಸಮಾರಂಭಗಳಲ್ಲಿ ಉಳಿದ ಆಹಾರವನ್ನು ಬಡವರಿಗೆ ಮತ್ತು ತುಂಬ ಅವಶ್ಯಕವಿರುವವರಿಗೆ ನೀಡುವಂತಾಗಲು ಮೊಬೈಲ್ ಆಪ್‌ಗೆ ಮಾಹಿತಿ ನೀಡುವುದು ಅವಶ್ಯಕ. ಇದರ ಬಗ್ಗೆ ಜಾಗೃತಿ ಮೂಡಿಸುವುದು ಅನಿವಾರ್ಯವೆಂದು ಅವರು ತಿಳಿಸಿದರು. ಕೃಷಿ ವಿವಿ ಕುಲಪತಿ ಡಾ.ಎಸ್.ರಾಜೇಂದ್ರಪ್ರಸಾದ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಹಾಗೂ ಡಾ.ಎಂ.ಎಸ್. ನಟರಾಜು ಮತ್ತಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News