ಲೋಕಸಭಾ ಚುನಾವಣೆ ಸೀಟು ಹಂಚಿಕೆಯಲ್ಲಿ ಯಾವುದೇ ಗೊಂದಲವಿಲ್ಲ: ಮುಖ್ಯಮಂತ್ರಿ ಕುಮಾರಸ್ವಾಮಿ

Update: 2019-02-21 18:39 GMT

ಬೆಂಗಳೂರು, ಫೆ.21: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸೀಟು ಹಂಚಿಕೆ ವಿಚಾರದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ಯಾವುದೇ ಗೊಂದಲಗಳಿಲ್ಲ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.

ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೀಟು ಹಂಚಿಕೆಗೆ ಸಂಬಂಧಿಸಿದ ಎಲ್ಲ ವಿಚಾರಗಳು ಇನ್ನು ಮೂರ್ನಾಲ್ಕು ದಿನಗಳಲ್ಲಿ ಬಗೆಹರಿಯಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಮ್ಮನ್ನು ಭಿಕ್ಷುಕರಂತೆ ನಡೆಸಿಕೊಳ್ಳಬೇಡಿ ಎಂದು ಹೇಳಿದ್ದೇನೆಯೇ ಹೊರತು, ಯಾರನ್ನೂ ಬೊಟ್ಟು ಮಾಡಿ ತೋರಿಸಿರಲಿಲ್ಲ. ಆದರೆ, ಮಾಧ್ಯಮಗಳು ನನ್ನ ಅರ್ಧ ಹೇಳಿಕೆಯನ್ನು ಮಾತ್ರ ಪ್ರಸಾರ ಮಾಡಿವೆ. ಸಂಪೂರ್ಣ ಹೇಳಿಕೆಯನ್ನು ಹಾಕಿಲ್ಲ ಎಂದು ಅವರು ಹೇಳಿದರು.

ಮಾಧ್ಯಮದವರು ಮತ್ತೊಮ್ಮೆ ನನ್ನ ಹೇಳಿಕೆಯನ್ನು ಸಂಪೂರ್ಣವಾಗಿ ಕೇಳಿಸಿಕೊಳ್ಳಿ. ಸರಕಾರದ ಅಸ್ತಿತ್ವದ ಕುರಿತು ಮಾಧ್ಯಮಗಳಲ್ಲಿ ಬಂದಿದ್ದ ಗಡುವುಗಳು ಯಾವುದೇ ಸಮಸ್ಯೆಯಿಲ್ಲದೆ ಬಗೆಹರಿಯಿತು. ಸೀಟು ಹಂಚಿಕೆ ಪ್ರಕ್ರಿಯೆಯೂ ಯಾವುದೇ ಸಮಸ್ಯೆಯಿಲ್ಲದೆ ಬಗೆಹರಿಯುತ್ತದೆ ಎಂದು ಕುಮಾರಸ್ವಾಮಿ ತಿಳಿಸಿದರು.

ಆಪರೇಷನ್ ಕಮಲಕ್ಕೆ ಸಂಬಂಧಿಸಿದ ಆಡಿಯೋ ಕುರಿತು ತನಿಖೆ ಮಾಡಲು ಎಸ್‌ಐಟಿ ರಚನೆ ಮಾಡಲು ಆಗುತ್ತಿರುವ ವಿಳಂಬ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ತನಿಖೆಯು ನ್ಯಾಯಯುತವಾಗಿ ನಡೆಯಬೇಕು ಎಂಬುದು ನಮ್ಮ ಉದ್ದೇಶ. ಯಾರನ್ನೋ ಹೆದರಿಸಲು ಈ ತನಿಖೆ ಮಾಡಿಸುತ್ತಿಲ್ಲ ಎಂದರು.

ವ್ಯವಸ್ಥೆಯನ್ನು ಸರಿ ಮಾಡಲು ಯಾವ ರೀತಿಯ ಕ್ರಮ ಕೈಗೊಳ್ಳಬೇಕೋ ಅದನ್ನು ಮಾಡಬೇಕು. ಅದಕ್ಕೆ ಸಮಯ ಬೇಕಾಗುತ್ತದೆ. ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ಈಗಾಗಲೇ ಆರೋಪ ಮುಕ್ತರಾಗಿದ್ದಾರೆ. ಆತುರವಾಗಿ ಎಲ್ಲ ಮಾಡಬೇಕಿಲ್ಲ. ಆಡಿಯೋದಲ್ಲಿರುವ ಬೇರೆ ವಿಷಯಗಳ ಕುರಿತು ತನಿಖೆಯಾಗಬೇಕು ಎಂದು ಅವರು ಹೇಳಿದರು.

ಹಿರಿಯ ನಟಿ ಸಮಲತಾ ಅಂಬರೀಶ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಭೇಟಿ ಮಾಡಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಅದಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ. ಆದುದರಿಂದ, ಈ ಬಗ್ಗೆ ಪ್ರತಿಕ್ರಿಯಿಸಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News