ಯಾರಾದರೂ ಕೋಮು ದ್ವೇಷ ಹರಡಲೆಂದು ನಮ್ಮವರು ಸತ್ತದ್ದಲ್ಲ: ಸಿಆರ್‌ಪಿಎಫ್

Update: 2019-02-21 18:51 GMT

ಹೊಸದಿಲ್ಲಿ,ಫೆ.21: ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಫೆ.14ರಂದು ಕೇಂದ್ರೀಯ ಮೀಸಲು ಪೊಲೀಸ್ ಪಡೆ(ಸಿಆರ್‌ಪಿಎಫ್) ಯ ಸಿಬ್ಬಂದಿಗಳನ್ನು ಸಾಗಿಸುತ್ತಿದ್ದ ವಾಹನಗಳ ಸಾಲಿನ ಮೇಲೆ ಭಯೋತ್ಪಾದಕ ದಾಳಿ ನಡೆದು 40 ಯೋಧರು ಪ್ರಾಣ ಕಳೆದುಕೊಂಡರು. ಘಟನೆ ನಡೆದ ಕೆಲವೇ ಗಂಟೆಗಳ ಬಳಿಕ ದಿಲ್ಲಿಯ ಕಚೇರಿಯೊಂದರಲ್ಲಿ ಸಿಆರ್‌ಪಿಎಫ್ ಯೋಧರ ತಂಡವೊಂದು ತಮ್ಮ ಕಂಪ್ಯೂಟರ್ ಪರದೆಗಳಲ್ಲಿ ಮತ್ತು ಮೊಬೈಲ್ ಫೋನ್‌ಗಳಲ್ಲಿ ಪ್ರವಾಹದೋಪಾದಿಯಲ್ಲಿ ಹರಿದುಬರುತ್ತಿದ್ದ ಫೋಟೊಗಳು ಮತ್ತು ಪೋಸ್ಟ್‌ಗಳನ್ನು ತದೇಕಚಿತ್ತದಿಂದ ವೀಕ್ಷಿಸುತ್ತಿತ್ತು.

ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ಗಳು,ಫೋಟೊಗಳು ಮತ್ತು ವೀಡಿಯೊಗಳ ಮಹಾಪೂರವೇ ಇತ್ತು. ಕೆಲವು ರಕ್ತಸಿಕ್ತ,ಭೀಭತ್ಸವಾಗಿದ್ದರೆ ಇನ್ನುಳಿದವು ಕೋಮುದ್ವೇಷದಿಂದ ತುಂಬಿದ್ದವು. ಅದು ನಿಜಕ್ಕೂ ಆತಂಕಕಾರಿಯಾಗಿತ್ತು ಎಂದು ಸಿಆರ್‌ಪಿಎಫ್ ಡಿಐಜಿ ಹಾಗೂ ಮುಖ್ಯ ವಕ್ತಾರ ಎಂ.ದಿನಕರನ್ ನೆನಪಿಸಿಕೊಂಡರು.

ಕೆಲವು ಪೋಸ್ಟ್‌ಗಳಂತೂ ನಮ್ಮ ಯೋಧರನ್ನು ಅವಮಾನಿಸಿದ್ದವು. ತಮ್ಮ ಸಾವು ಕೋಮುದ್ವೇಷಕ್ಕೆ ಕಾರಣವಾಗಲಿ ಎಂದು ನಮ್ಮ ಯೋಧರು ತಮ್ಮ ಪ್ರಾಣತ್ಯಾಗ ಮಾಡಿರಲಿಲ್ಲ. ಇಂತಹ ಸ್ಥಿತಿಯಲ್ಲಿ ನಾವೇನಾದರೂ ಮಾಡಲೇಬೇಕು ಎನ್ನುವ ಅರಿವು ನಮಗಿತ್ತು ಎಂದರು.

ಇದೇ ಅರಿವು ಸಿಆರ್‌ಪಿಎಫ್ ರೂಪಿಸಿದ್ದ ಸತ್ಯಶೋಧನಾ ತಂಡದ ಹುಟ್ಟಿಗೆ ಕಾರಣವಾಗಿತ್ತು. ದಿಲ್ಲಿ ಮತ್ತು ಇತರ ಕೆಲವು ಪ್ರಾದೇಶಿಕ ಕಚೇರಿಗಳಲ್ಲಿ ಕುಳಿತುಕೊಂಡಿದ್ದ 12ರಿಂದ 15 ಯೋಧರ ತಂಡಗಳು ಅಂದಿನಿಂದ ದಿನಕ್ಕೆ ಕನಿಷ್ಠ ಐದು ಸುಳ್ಳುಮಾಹಿತಿಗಳ ಪೋಸ್ಟ್‌ಗಳನ್ನು ಬಯಲಿಗೆಳೆದಿವೆ.

ನಮ್ಮ ಸಹೋದ್ಯೋಗಿಗಳು ಮತ್ತು ಸ್ನೇಹಿತರ ಅಂತ್ಯಕ್ರಿಯೆ ಕಾರ್ಯಗಳಲ್ಲಿ ಮತ್ತು ಗಾಯಾಳುಗಳಿಗೆ ನೆರವು ಒದಗಿಸುವಲ್ಲಿ ನಾವು ವ್ಯಸ್ತರಾಗಿದ್ದಾಗ ವಾಟ್ಸ್‌ಆ್ಯಪ್‌ನಲ್ಲಿ ಹಲವಾರು ತಪ್ಪು ಮತ್ತು ಸುಳ್ಳು ಪೋಸ್ಟ್‌ಗಳು ಹರಿದಾಡುತ್ತಿದ್ದನ್ನು ನಾವು ಗಮನಿಸಿದ್ದೆವು ಎಂದು ಪುಲ್ವಾಮಾ ದಾಳಿಯ ಬಳಿಕ ಸುಳ್ಳು ಸುದ್ದಿಗಳ ಮೇಲೆ ನಿಗಾಯಿರಿಸಿದ್ದ ಸಾಮಾಜಿಕ ಮಾಧ್ಯಮ ತಂಡದ ಸದಸ್ಯರಾಗಿದ್ದ ಹಿರಿಯ ಸಿಆರ್‌ಪಿಎಫ್ ಅಧಿಕಾರಿಯೋರ್ವರು ತಿಳಿಸಿದರು. ಮೃತ ಯೋಧರ ಅಂತಿಮ ಅವಶೇಷಗಳ ತಪ್ಪು ಫೋಟೊಗಳು ಮತ್ತು ದಾಳಿಯ ಮೊದಲಿನದೆಂದು ಹೇಳಲಾಗಿದ್ದ ಫೋಟೊಗಳು ಈ ಪೋಸ್ಟ್‌ಗಳಲ್ಲಿ ಸೇರಿದ್ದವು ಎಂದರು.

ಕೆಲವು ಪೋಸ್ಟ್‌ಗಳನ್ನು ಕೋಮು ಉದ್ವಿಗ್ನತೆಯನ್ನು ಸೃಷ್ಟಿಸಲು ಬಯಸಿದ್ದ ದುಷ್ಕರ್ಮಿಗಳು ಹರಡಿದ್ದರು. ಕೆಲವು ಪೋಸ್ಟ್‌ಗಳು ನಿಂದಾತ್ಮಕವಾಗಿದ್ದು ದ್ವೇಷದಿಂದ ಕೂಡಿದ್ದವು. ನಾವು ಅವೆಲ್ಲವನ್ನು ಸಂಗ್ರಹಿಸಿ ನಿಗಾಯಿರಿಸಲು ಆರಂಭಿಸಿದ್ದೆವು ಎಂದ ಅವರು,ನಾವು ನಮ್ಮೆಲ್ಲ ಸಿಬ್ಬಂದಿಗಳು ಮತ್ತು ಪರಿಚಿತ ನಾಗರಿಕರನ್ನು ಸಂಪರ್ಕಿಸಿ ಅವರು ಸುಳ್ಳು ಎಂದು ಭಾವಿಸಿದ್ದ ಯಾವುದೇ ಪೋಸ್ಟ್ ಮತ್ತು ಫೋಟೊಗಳನ್ನು ಕಳುಹಿಸುವಂತೆ ಕೋರಿದ್ದೆವು. ದೇಶಾದ್ಯಂತ ಪ್ರಾದೇಶಿಕ ಕಚೇರಿಗಳಲ್ಲಿಯ ಸಿಬ್ಬಂದಿಗಳಿಗೂ ಸಾಮಾಜಿಕ ಮಾಧ್ಯಮಗಳ ಮೇಲೆ ನಿಗಾಯಿರಿಸುವಂತೆ ಸೂಚಿಸಿದ್ದೆವು. ಹಲವಾರು ಸುಳ್ಳು ಸುದ್ದಿಗಳನ್ನು ಬಯಲಿಗೆಳೆದು ಅವುಗಳನ್ನು ತಡೆಯಲು ನಮಗೆ ಸಾದ್ಯವಾಗಿತ್ತು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News