ಗಡಿ ಸಂಘರ್ಷಕ್ಕೆ ಸಜ್ಜಾಗುತ್ತಿದೆಯೇ ಪಾಕ್ ?

Update: 2019-02-22 04:21 GMT

ಶ್ರೀನಗರ, ಫೆ. 22: ಪುಲ್ವಾಮ ಘಟನೆಗೆ ಪ್ರತೀಕಾರವಾಗಿ ಭಾರತ ದಾಳಿ ಮಾಡುವ ಸಾಧ್ಯತೆಯ ಹಿನ್ನೆಲೆಯಲ್ಲಿ ಮುಂಚೂಣಿ ಗಡಿ ಪ್ರದೇಶದಲ್ಲಿ ಪಾಕಿಸ್ತಾನ ಯುದ್ಧ ಸಿದ್ಧತೆಗಳನ್ನು ಆರಂಭಿಸಿದೆ. ಈ ಮಧ್ಯೆ ಭಾರತದ ಒತ್ತಡದ ಹಿನ್ನೆಲೆಯಲ್ಲಿ ಯಾವುದೇ ವಿನಾಯಿತಿ ಬೇಡ ಎಂದು ಜೆಇಎಂ ಮುಖ್ಯಸ್ಥ ಮಸೂದ್ ಅಝರ್ ಇಮ್ರಾನ್ ಸರ್ಕಾರಕ್ಕೆ ಸಲಹೆ ಮಾಡಿದ್ದಾನೆ.

ಭಾರತದ ಜತೆ ಯುದ್ಧ ಸಿದ್ಧತೆಗಳಿಗೆ ನೆರೆರಾಷ್ಟ್ರ ಸಜ್ಜಾಗುತ್ತಿರುವುದಕ್ಕೆ ಸಂಬಂಧಿಸಿದಂತೆ ಎರಡು ಮಹತ್ವದ ದಾಖಲೆಗಳು ಲಭ್ಯವಾಗಿವೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಬಲೂಚಿಸ್ತಾನದಲ್ಲಿರುವ ಪಾಕಿಸ್ತಾನಿ ಸೇನೆಯಿಂದ ಬರೆದ ಪತ್ರ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಸ್ಥಳೀಯಾಡಳಿತಕ್ಕೆ ನೀಡಿದ ನೋಟಿಸ್‌ನ ಪ್ರತಿ ಲಭ್ಯವಾಗಿದೆ ಎಂದು ಸ್ಪಷ್ಟಪಡಿಸಿದೆ.

ಕ್ವೆಟ್ಟಾ ದಂಡು ಪ್ರದೇಶದಲ್ಲಿರುವ ಹೆಡ್‌ಕ್ವಾಟ್ರರ್ಸ್ ಕ್ವಟ್ಟಾ ಲಾಜಿಸ್ಟಿಕ್ ಏರಿಯಾ (ಎಚ್‌ಕ್ಯೂಎಲ್‌ಎ) ವತಿಯಿಂದ ಫೆ. 20ರಂದು ಜಿಲಾನಿ ಆಸ್ಪತ್ರೆಗೆ ಪತ್ರ ಬರೆದು, ಭಾರತದ ಜತೆಗಿನ ಯುದ್ಧ ಸಾಧ್ಯತೆ ಹಿನ್ನೆಲೆಯಲ್ಲಿ ಅಗತ್ಯ ವೈದ್ಯಕೀಯ ನೆರವನ್ನು ಯೋಜಿಸಿಕೊಳ್ಳುವಂತೆ ಮತ್ತು ವ್ಯವಸ್ಥೆ ಮಾಡುವಂತೆ ಸೂಚಿಸಿದೆ.

"ತುರ್ತು ಸಂದರ್ಭದಲ್ಲಿ ಪೂರ್ವಗಡಿಯಲ್ಲಿ ಯುದ್ಧ ಸಂಭವಿಸಿದಲ್ಲಿ, ಗಾಯಾಳು ಸೈನಿಕರು ಸಿಂಧ್ ಮತ್ತು ಪಂಜಾಬ್ ಪ್ರದೇಶದ ಸಿವಿಲ್ ಮತ್ತು ಮಿಲಿಟರಿ ಆಸ್ಪತ್ರೆಗಳಿಂದ ಚಿಕಿತ್ಸೆ ಪಡೆಯುವ ಸಾಧ್ಯತೆ ಇದೆ. ಆರಂಭಿಕ ಚಿಕಿತ್ಸೆ ಬಳಿಕ, ಈ ಸೈನಿಕರನ್ನು ಬಲೂಚಿಸ್ತಾನದ ಸಿವಿಲ್ ಆಸ್ಪತ್ರೆಗೆ ಕರೆದೊಯ್ಯಲಾಗುತ್ತದೆ" ಎಂದು ಎಚ್‌ಕ್ಯೂಎಲ್‌ಎ ಫೋರ್ಸ್ ಕಮಾಂಡರ್ ಆಸಿಯಾ ನಾರ್ ಎಂಬುವವರು ಪತ್ರ ಬರೆದಿದ್ದಾರೆ.

ಈ ಮಧ್ಯೆ ಪಾಕ್ ಆಕ್ರಮಿತ ಕಾಶ್ಮೀರ ಪ್ರಾಂತ್ಯ ಸರ್ಕಾರ, ವಾಸ್ತವ ನಿಯಂತ್ರಣ ರೇಖೆಯುದ್ದಕ್ಕೂ ಇರುವ ನೀಲಮ್, ಜೆಲಮ್, ರಾವಲ್‌ಕೋಟ್, ಹವೇಲಿ, ಕೊತ್ಲಿ ಮತ್ತು ಭಿಂಬೇರ್ ಸ್ಥಳೀಯಾಡಳಿತಗಳಿಗೆ ಪತ್ರ ಬರೆದು, ಭಾರತ ಸೇನೆಯ ಪ್ರತೀಕಾರದ ದಾಳಿಯನ್ನು ಎದುರಿಸಲು ಸಜ್ಜಾಗಿರುವಂತೆ ನಾಗರಿಕರಿಗೆ ಸೂಚನೆ ನೀಡುವಂತೆ ಆದೇಶಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News