ಪಾಕಿಸ್ತಾನದೊಂದಿಗೆ ಕ್ರೀಡಾ ಸಂಬಂಧ ಕಡಿತ ಬೇಡ: ಕುಸ್ತಿ ತಾರೆ ಸುಶೀಲ್ ಕುಮಾರ್ ಅಭಿಮತ

Update: 2019-02-22 05:57 GMT

ನಾಗ್ಪುರ, ಫೆ.21: ಪಾಕಿಸ್ತಾನದ ಜೊತೆ ಕ್ರೀಡಾ ಸಂಬಂಧವನ್ನು ಕಡಿದುಕೊಳ್ಳುವ ಬಗ್ಗೆ ಹಲವರು ತಮ್ಮದೇ ಆದ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಭಾರತದ ಖ್ಯಾತ ಕುಸ್ತಿ ತಾರೆ ಸುಶೀಲ್‌ಕುಮಾರ್ ಕೂಡ ಈ ಕುರಿತು ಮಾತನಾಡಿದ್ದು, ಕ್ರೀಡಾ ಸಂಬಂಧಗಳು ಜನರನ್ನು ಒಟ್ಟುಗೂಡಿಸುವ ಕಾರಣ ಉಭಯ ದೇಶಗಳ ಮಧ್ಯೆ ಕ್ರೀಡಾ ಚಟುವಟಿಕೆಗಳು ನಿಲ್ಲಕೂಡದೆಂದು ಅಭಿಪ್ರಾಯಿಸಿದ್ದಾರೆ.

ಇಲ್ಲಿಯ ಹಿಂಗ್ನಾ ರೋಡ್ ಪ್ರದೇಶದ ಆವರಣದಲ್ಲಿ ಬುಧವಾರ ಪ್ರಿಯದರ್ಶಿನಿ ಸಮೂಹ ಸಂಸ್ಥೆಗಳಿಂದ ಆಯೋಜಿತವಾದ ಅಂತರ್‌ಕಾಲೇಜು ಕ್ರೀಡಾ ಸ್ಪರ್ಧೆ ‘‘ಉಡಾನ್ 19.0’’ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

‘‘ಪುಲ್ವಾಮ ಭಯೋತ್ಪಾದಕ ದಾಳಿಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ಹುತಾತ್ಮ ಯೋಧರು ಹಾಗೂ ಅವರ ಕುಟುಂಬಗಳಿಗೆ ನಮನಗಳು. ದೇಶ ಒಗ್ಗಟ್ಟಾಗಿದೆ ಮತ್ತು ಸೈನಿಕರ ಬಗ್ಗೆ ಹೆಮ್ಮೆ ಉಂಟಾಗಿದೆ. ಆದಾಗ್ಯೂ ಈ ಬೆಳವಣಿಗೆಯು ಕ್ರೀಡೆಯ ಮೇಲೆ ಪರಿಣಾಮ ಬೀರಬಾರದು. ಉಭಯ ದೇಶಗಳ ಮಧ್ಯದ ಪಂದ್ಯಗಳು ಸಂಪರ್ಕವನ್ನು ಬೆಸೆಯುತ್ತವೆ. ಕ್ರೀಡೆ ಎಲ್ಲ ಜನರನ್ನು ಒಗ್ಗೂಡಿಸುತ್ತದೆ ಹಾಗಾಗಿ ಅದನ್ನು ಪ್ರೋತ್ಸಾಹಿಸಬೇಕು’’ ಎಂದು ಸುಶೀಲ್ ಹೇಳಿದ್ದಾರೆ. ಪುಲ್ವಾಮ ದಾಳಿಯ ಕುರಿತು ಎರಡು ದಿನಗಳ ಹಿಂದೆ ಮಾತನಾಡಿದ್ದ ಭಾರತ ಕ್ರಿಕೆಟ್ ತಂಡದ ಹಿರಿಯ ಸ್ಪಿನ್ನರ್ ಹರ್ಭಜನ್‌ಸಿಂಗ್, ಮುಂಬರುವ ವಿಶ್ವಕಪ್‌ನಲ್ಲಿ ಭಾರತ ಪಾಕಿಸ್ತಾನ ವಿರುದ್ಧದ ಪಂದ್ಯವನ್ನು ಆಡಬಾರದೆಂದು ಹೇಳಿದ್ದರು. ಭಾರತದ ಖ್ಯಾತ ಟೆನಿಸ್ ತಾರೆ ಸಾನಿಯಾ ಮಿರ್ಝಾ ‘‘ದ್ವೇಷ ಹರಡುವುದರ ಬದಲು ಶಾಂತಿಗಾಗಿ ಆಟವಾಡೋಣ’’ ಎಂದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News