ವಿಶ್ವಕಪ್‌ನಲ್ಲಿ ಪಾಕಿಸ್ತಾನ ಭಾಗವಹಿಸುವುದನ್ನು ತಡೆಯಲು ನಮ್ಮಿಂದ ಅಸಾಧ್ಯ: ಬಿಸಿಸಿಐ

Update: 2019-02-22 06:06 GMT

ಹೊಸದಿಲ್ಲಿ, ಫೆ.21: ಪುಲ್ವಾಮ ಭಯೋತ್ಪಾದಕ ದಾಳಿಯಿಂದ ಸಿಆರ್‌ಪಿಎಫ್‌ನ 40 ಯೋಧರು ಹುತಾತ್ಮರಾಗಿದ್ದು, ಈ ಘಟನೆಯ ಬಳಿಕ ಭಾರತ ಹಾಗೂ ಪಾಕಿಸ್ತಾನದ ಮಧ್ಯೆ ರಾಜತಾಂತ್ರಿಕ ಬಿಕ್ಕಟ್ಟು ಉಲ್ಬಣಿಸಿದೆ. ಇದು ಕ್ರೀಡಾವಲಯದಲ್ಲೂ ಪ್ರತಿಫಲಿಸುತ್ತಿದೆ.

ಸಮಯಕ್ಕೆ ಸರಿಯಾಗಿ ವೀಸಾ ಪಡೆಯಲು ವಿಫಲವಾದ ಪಾಕಿಸ್ತಾನದ ಶೂಟರ್‌ಗಳು ದಿಲ್ಲಿಯಲ್ಲಿ ಶನಿವಾರದಿಂದ ಆರಂಭವಾಗಲಿರುವ ವಿಶ್ವಕಪ್‌ನಿಂದ ಈಗಾಗಲೇ ಹೊರಗುಳಿದಿದ್ದಾರೆ. ಜೂ.16 ರಂದು ಇಂಗ್ಲೆಂಡ್‌ನ ಮ್ಯಾಂಚೆಸ್ಟರ್‌ನಲ್ಲಿ ಪಾಕ್‌ವಿರುದ್ಧ ವಿಶ್ವಕಪ್ ಗ್ರೂಪ್ ಪಂದ್ಯವನ್ನು ಭಾರತ ಬಹಿಷ್ಕರಿಸಬೇಕೆಂಬ ಬೇಡಿಕೆಜೋರಾಗಿ ಕೇಳಿಬರುತ್ತಿದೆ. ಈ ವಿಚಾರ ಫೆ.27ರಿಂದ ಮಾ.2ರ ತನಕ ದುಬೈನಲ್ಲಿ ನಡೆಯುವ ಐಸಿಸಿ ಸಭೆಯಲ್ಲಿ ಪ್ರಸ್ತಾವವಾಗುವ ಸಾಧ್ಯತೆಯಿದೆ.

‘‘ಇಂತಹದ್ದು ನಡೆಯಲು ಖಚಿತವಾಗಿ ಯಾವುದೇ ಸಾಂವಿಧಾನಿಕ ಅಥವಾ ಒಪ್ಪಂದದ ಹಾದಿಯಿಲ್ಲ. ಅರ್ಹತೆ ಇರುವವರೆಗೂ ಐಸಿಸಿ ಟೂರ್ನಿಗಳಲ್ಲಿ ಭಾಗವಹಿಸಲು ತನ್ನ ಸದಸ್ಯರಿಗೆ ಐಸಿಸಿ ಸಂವಿಧಾನ ಅವಕಾಶ ನೀಡುತ್ತದೆ’’ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

 ದಿಲ್ಲಿಯಲ್ಲಿ ಶುಕ್ರವಾರ ಆಡಳಿತಾಧಿಕಾರಿಗಳ ಸಮಿತಿ(ಸಿಒಎ)ಸಭೆ ನಡೆಯಲಿದ್ದು ಸಭೆಯಲ್ಲಿ ಸಮಿತಿಯ ಚೇರ್ಮನ್ ವಿನೋದ್ ರಾಯ್ ಹಾಗೂ ಮಹಿಳಾ ತಂಡದ ಮಾಜಿ ನಾಯಕಿ ಡಯಾನಾ ಎಡುಲ್ಜಿ ಭಾಗವಹಿಸಿ ಹಲವು ವಿಚಾರ ಚರ್ಚಿಸಲಿದ್ದಾರೆ. ಪಾಕಿಸ್ತಾನದ ವಿಚಾರ ಸಭೆಯಲ್ಲಿ ಚರ್ಚೆಯಾಗುವ ಸಾಧ್ಯತೆಯಿಲ್ಲ.

‘‘ನಾವು ನಾಳೆ ಸಂಭವನೀಯ ಆಯ್ಕೆಗಳ ಬಗ್ಗೆ ಚರ್ಚಿಸಲಿದ್ದೇವೆ. ದೇಶಕ್ಕೆ ಉತ್ತಮವಾದುದನ್ನು ಮಾಡಲಿದ್ದೇವೆ’’ ಎಂದು ಎಡುಲ್ಜಿ ಪಿಟಿಐಗೆ ತಿಳಿಸಿದರು.

ಒಂದು ವೇಳೆ ಭಾರತ, ಪಾಕಿಸ್ತಾನವನ್ನು ವಿಶ್ವಕಪ್‌ನಿಂದ ಹೊರಗಿಡಬೇಕೆಂದು ಐಸಿಸಿಗೆ ಪತ್ರ ಬರೆದರೆ, ನಾವು ಮೊದಲಿಗೆ ಒಮ್ಮತ ಮೂಡಿಸಿ ಎಪ್ರಿಲ್‌ನಲ್ಲಿ ನಡೆಯುವ ಐಸಿಸಿ ವಾರ್ಷಿಕ ಮಂಡಳಿ ಸಭೆಯಲ್ಲಿ ನಿರ್ಣಯ ಮಂಡಿಸಬೇಕು. ಈಗ ನಮಗೆ ಐಸಿಸಿ ಮಂಡಳಿಯಲ್ಲಿ ಬಹುಮತವಿಲ್ಲ. ನಮ್ಮ ನಿರ್ಣಯವನ್ನು ಐಸಿಸಿ ಮತಕ್ಕಾಗಿ ಸದಸ್ಯ ಮಂಡಳಿ ಮುಂದಿಟ್ಟರೆ, ಇತರ ದೇಶಗಳು ಭಾರತಕ್ಕೆ ಬೆಂಬಲ ನೀಡುವ ಸಾಧ್ಯತೆಯಿಲ್ಲ. ಆಗ ನಮಗೆ ಸೋಲಾಗುವುದು ಖಚಿತ. ಮಾತ್ರವಲ್ಲ, 2021ರ ಚಾಂಪಿಯನ್ಸ್ ಟ್ರೋಫಿ ಹಾಗೂ 2023ರ ವಿಶ್ವಕಪ್ ಆತಿಥ್ಯವಹಿಸುವ ಅವಕಾಶ ನಮಗೆ ಸಿಗುವುದು ಅನುಮಾನ’’ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಭಾರತದ ಹಿರಿಯ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ ಹಾಗೂ ಭಾರತದ ಮಾಜಿ ನಾಯಕ ಹಾಗೂ ಬಂಗಾಳ ಕ್ರಿಕೆಟ್ ಸಂಸ್ಥೆ(ಸಿಎಬಿ)ಅಧ್ಯಕ್ಷ ಸೌರವ್ ಗಂಗುಲಿ ಸಹಿತ ಹಲವು ಪ್ರಮುಖರು ಪಾಕಿಸ್ತಾನ ವಿರುದ್ಧ ಪಂದ್ಯವನ್ನು ಬಹಿಷ್ಕರಿಸಬೇಕೆಂದು ಧ್ವನಿ ಎತ್ತಿದ್ದಾರೆ. ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆಗಳು ನಡೆಸುತ್ತಿರುವ ಪೈಶಾಚಿಕದಾಳಿಗೆ ನಿರ್ಣಾಯಕ ಕ್ರಮ ಕೈಗೊಳ್ಳಬೇಕೆಂದು ಹಾಲಿ ಆಟಗಾರರಾದ ಲೆಗ್ ಸ್ಪಿನ್ನರ್ ಯುಜುವೇಂದ್ರ ಚಹಾಲ್ ಹಾಗೂ ವೇಗಿ ಮುಹಮ್ಮದ್ ಶಮಿ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News