ಕಾಶ್ಮೀರಿಗಳಿಗೆ ರಕ್ಷಣೆ ಒದಗಿಸಲು 11 ರಾಜ್ಯಗಳ ಮುಖ್ಯ ಕಾರ್ಯದರ್ಶಿ, ಡಿಜಿಪಿಗೆ ಸುಪ್ರೀಂ ಆದೇಶ

Update: 2019-02-22 18:41 GMT

ಹೊಸದಿಲ್ಲಿ, ಫೆ. 22: ಪುಲ್ವಾಮ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ ಕಾಶ್ಮೀರಿಗಳು ಹಾಗೂ ಅಲ್ಪಸಂಖ್ಯಾತ ಸಮುದಾಯಗಳನ್ನು ಮುಖ್ಯವಾಗಿ ವಿದ್ಯಾರ್ಥಿಗಳನ್ನು ರಕ್ಷಿಸಲು ಸುಪ್ರೀಂ ಕೋರ್ಟ್ ಶುಕ್ರವಾರ ಕೇಂದ್ರ ಸರಕಾರ ಹಾಗೂ ಹಲವು ರಾಜ್ಯ ಸರಕಾರಗಳಿಗೆ ನಿರ್ದೇಶನಗಳನ್ನು ನೀಡಿದೆ.

ಹಿಂಸಾಚಾರದ ಪ್ರವೃತ್ತಿಯನ್ನು ಮೊಗ್ಗಿನಲ್ಲೇ ಚಿವುಟಿ ಹಾಕುವಂತೆ ಹಿಂಸಾಚಾರ ತಲೆದೋರಿದ ಹಲವು ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು ಹಾಗೂ ಪೊಲೀಸ್ ವರಿಷ್ಠರಿಗೆ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯಿ ನೇತೃತ್ವದ ಪೀಠ ಆದೇಶಿಸಿದೆ.

 ದೂರಿನ ಬಗ್ಗೆ ಪ್ರಾಮಾಣಿಕವಾಗಿ ಕ್ರಮ ಕೈಗೊಳ್ಳುವಂತೆ ರಾಜ್ಯ ಪೊಲೀಸ್ ವರಿಷ್ಠರು ತಮ್ಮ ಕೆಳಗಿನ ಅಧಿಕಾರಿಗಳಿಗೆ ನಿರ್ದೇಶಿಸುವಂತೆ ಪೀಠ ಹೇಳಿದೆ. ಕೇಂದ್ರ ನಿಯೋಜಿಸಿದ ನೋಡಲ್ ಅಧಿಕಾರಿಗಳು ಉದ್ವಿಗ್ನತೆ ತಡೆಯಬೇಕು ಹಾಗೂ ಶಾಂತವಾಗಿಸಲು ಕಾರ್ಯ ನಿರ್ವಹಿಸಬೇಕು ಎಂದು ನ್ಯಾಯಾಲಯ ಹೇಳಿದೆ.

 ವಿದ್ಯಾರ್ಥಿಗಳು ಸೇರಿದಂತೆ ಕಾಶ್ಮೀರಿಗಳ ಮೇಲಿನ ಬೆದರಿಕೆ, ಹಲ್ಲೆ, ಸಾಮಾಜಿಕ ಬಹಿಷ್ಕಾರದ ಘಟನೆಗಳನ್ನು ತಡೆಯುವಂತೆ ಮಹಾರಾಷ್ಟ್ರ, ಪಂಜಾಬ್, ಉತ್ತರಪ್ರದೇಶ, ಬಿಹಾರ್, ಜಮ್ಮು ಕಾಶ್ಮೀರ, ಹರ್ಯಾಣ, ಮೇಘಾಲಯ, ಪಶ್ಚಿಮಬಂಗಾಳ, ಚತ್ತೀಸ್‌ಗಢ, ಉತ್ತರಾಖಂಡದ ಮುಖ್ಯ ಕಾರ್ಯದರ್ಶಿಗಳು, ಡಿಜಿಪಿಗಳು ಹಾಗೂ ದಿಲ್ಲಿ ಪೊಲೀಸ್ ಆಯುಕ್ತರಿಗೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ.

ದೂರು ದಾಖಲಿಸಿದ ಬಳಿಕ ವಿವಿಧ ರಾಜ್ಯಗಳಲ್ಲಿ 10ಕ್ಕಿಂತಲೂ ಅಧಿಕ ಹಲ್ಲೆಯ ಘಟನೆಗಳನ್ನು ನಡೆದಿವೆ. ಆದುದರಿಂದ ಇದನ್ನು ತಡೆಯಲು ಅಗತ್ಯವಿರುವ ನಿರ್ದೇಶನಗಳನ್ನು ತ್ವರಿತವಾಗಿ ನೀಡಬೇಕು ಎಂದು ದೂರುದಾರರ ಪರವಾಗಿ ಹಾಜರಾಗಿದ್ದ ಹಿರಿಯ ವಕೀಲ ಕಾಲಿನ್ ಗೊನ್ಸಾಲ್ವೆಸ್ ಪ್ರತಿಪಾದಿಸಿದ್ದರು.

 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಪೆಬ್ರವರಿ 17ರಂದು ಅಗತ್ಯದ ಸಲಹೆಗಳನ್ನು ಸಚಿವಾಲಯ ನೀಡಿದೆ ಎಂದು ಕೇಂದ್ರ ಸರಕಾರದ ಪರವಾಗಿ ಹಾಜರಾಗಿದ್ದ ಅಟಾರ್ನಿ ಜನರಲ್ ಕೆ.ಕೆ. ಗೋಪಾಲ್ ಹೇಳಿದರು.

ಎಲ್ಲಾ ರಾಜ್ಯಗಳಿಗೆ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರಕಾರ ಜನವರಿ 17ರಂದು ಸಲಹೆ ನೀಡಿದೆ. ಆದರೆ, ಇಂತಹ ಪ್ರಕರಣಗಳಲ್ಲಿ ನಿರ್ದಿಷ್ಟ ಕ್ರಮಗಳನ್ನು ಕೈಗೊಳ್ಳಿ ಎಂದು ನಾವು ಹೇಳಲು ಸಾಧ್ಯವಿಲ್ಲ. ಯಾಕೆಂದರೆ ಅದು ರಾಜ್ಯ ಸರಕಾರದ ಕಾನೂನು ಸುವ್ಯವಸ್ಥೆಗೆ ಬಿಟ್ಟ ವಿಚಾರ ಎಂದು ಅಟಾರ್ನಿ ಜನರಲ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News