ಪುಲ್ವಾಮ ದಾಳಿಗೆ ಶೋಕಾಚರಣೆ ಮಾಡದ ಸರಕಾರ ಕ್ರಿಕೆಟ್ ಪಂದ್ಯ ಬಹಿಷ್ಕರಿಸಬೇಕು ಎನ್ನುತ್ತಿದೆ: ಶಶಿ ತರೂರ್

Update: 2019-02-22 10:19 GMT

ಹೊಸದಿಲ್ಲಿ, ಫೆ.22: ಮ್ಯಾಂಚೆಸ್ಟರ್ ನಲ್ಲಿ ಜೂನ್ 16ರಂದು ಪಾಕಿಸ್ತಾನದ ವಿರುದ್ಧ ಆಡಬೇಕಿರುವ ವಿಶ್ವಕಪ್ ಕ್ರಿಕೆಟ್ ಪಂದ್ಯವನ್ನು ಬಹಿಷ್ಕರಿಸಬೇಕು ಎಂಬ ಆಗ್ರಹಗಳ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮುಖಂಡ ಶಶಿ ತರೂರ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ದಾಳಿ ಬಳಿಕ ರಾಷ್ಟ್ರೀಯ ಶೋಕವನ್ನೂ ಘೋಷಿಸದ ಸರ್ಕಾರ, ಮೂರು ತಿಂಗಳ ಬಳಿಕ ಇರುವ ಪಂದ್ಯವನ್ನು ಬಹಿಷ್ಕರಿಸಲು ಮುಂದಾಗಿದೆ ಎಂದು ಟೀಕಿಸಿದ್ದಾರೆ.

"ರಾಷ್ಟ್ರೀಯ ಶೋಕಾಚರಣೆಯನ್ನು ಕೂಡಾ ಘೋಷಿಸದ ಸರ್ಕಾರ, ಮೂರು ತಿಂಗಳ ಬಳಿಕ ಇರುವ ಪಂದ್ಯವನ್ನು ಬಹಿಷ್ಕರಿಸಲು ನಿರ್ಧರಿಸಿದೆ?. 40 ಯೋಧರ ಬಲಿ ಪಡೆದಿರುವುದಕ್ಕೆ ಇದು ಗಂಭೀರ ಪ್ರತಿಕ್ರಿಯೆಯೇ?, ಘಟನೆಯನ್ನು ಅಸಮರ್ಪಕವಾಗಿ ನಿಭಾಯಿಸಿರುವ ಸರ್ಕಾರ ಇದೀಗ ಗಮನವನ್ನು ಬೇರೆಡೆಗೆ ಸೆಳೆಯಲು ಯತ್ನಿಸುತ್ತಿದೆ. ನಮಗೆ ಪರಿಣಾಮಕಾರಿ ಕ್ರಮ ಅಗತ್ಯವೇ ವಿನಃ ರಾಜಕೀಯ ಸಂಜ್ಞೆಯಲ್ಲ" ಎಂದು ಟ್ವಿಟರ್‍ ನಲ್ಲಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ 1999ರ ವಿಶ್ವಕಪ್ ನಡೆದದ್ದನ್ನು ಉಲ್ಲೇಖಿಸಿದ ತರೂರ್, ಆ ಪಂದ್ಯದಲ್ಲಿ ಭಾರತ ಪಾಕಿಸ್ತಾನದ ವಿರುದ್ಧ ಜಯ ಸಾಧಿಸಿತ್ತು. ಈ ಬಾರಿಯ ಪಂದ್ಯವನ್ನು ರದ್ದುಪಡಿಸುವುದು ಕೇವಲ ಎರಡು ಅಂಕಗಳನ್ನು ಕಳೆದುಕೊಳ್ಳಲು ಕಾರಣವಾಗುವುದಷ್ಟೇ ಅಲ್ಲ; ಹೋರಾಟವೂ ಇಲ್ಲದೇ ಸೋಲೊಪ್ಪಿಕೊಂಡಂತೆ ಶರಣಾಗತಿಯನ್ನೂ ಸೂಚಿಸುತ್ತದೆ ಎಂದು ವ್ಯಾಖ್ಯಾನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News