ಶಾರೂಖ್ ಖಾನ್‍ ಗೆ ಗೌರವ ಡಾಕ್ಟರೇಟ್: ಜೆಎಂಐ ಮನವಿ ತಿರಸ್ಕರಿಸಿದ ಸರಕಾರ

Update: 2019-02-22 10:24 GMT

ಹೊಸದಿಲ್ಲಿ, ಫೆ.22: ಖ್ಯಾತ ಬಾಲಿವುಡ್ ನಟ ಶಾರೂಖ್ ಖಾನ್ ಅವರಿಗೆ ಗೌರವ ಡಾಕ್ಟರೇಟ್ ನೀಡುವ ಸಂಬಂಧ ದೆಹಲಿಯ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿಶ್ವವಿದ್ಯಾನಿಲಯ ಸಲ್ಲಿಸಿದ್ದ ಪ್ರಸ್ತಾವವನ್ನು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ತಳ್ಳಿಹಾಕಿದೆ.

ಈಗಾಗಲೇ ಶಾರೂಖ್‍ ಖಾನ್ ಬೇರೆ ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ ಪಡೆದಿರುವುದರಿಂದ ಮತ್ತೆ ನೀಡುವ ಅಗತ್ಯವಿಲ್ಲ ಎಂದು ಸಚಿವಾಲಯ ಅಭಿಪ್ರಾಯಪಟ್ಟಿರುವುದು ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಿದ ಪ್ರಶ್ನೆಗೆ ಸಿಕ್ಕಿದ ಉತ್ತರದಿಂದ ತಿಳಿದುಬಂದಿದೆ. ಜೆಎಂಐನ ಹಳೆವಿದ್ಯಾರ್ಥಿಯಾಗಿರುವ ಖಾನ್, ಈ ವಿವಿಯಿಂದ ಗೌರವ ಡಾಕ್ಟರೇಟ್ ಪ್ರಸ್ತಾವಕ್ಕೆ ಸಮ್ಮತಿ ಸೂಚಿಸಿದ್ದರು.

ಈ ಹಿನ್ನೆಲೆಯಲ್ಲಿ ವಿವಿ, ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯಕ್ಕೆ ಪ್ರಸ್ತಾವ ಸಲ್ಲಿಸಿತ್ತು. "ಶಾರೂಖ್‍ಖಾನ್ ಅವರಿಗೆ ಗೌರವ ಡಾಕ್ಟರೇಟ್ ನೀಡುವ ಪ್ರಸ್ತಾವವನ್ನು ಜೆಎಂಐ ಎಚ್‍ಆರ್‍ಡಿ ಸಚಿವಾಲಯಕ್ಕೆ ಕಳುಹಿಸಿತ್ತು. ಆದರೆ ಖಾನ್ ಅವರಿಗೆ ಈಗಾಗಲೇ ಮೌಲಾನಾ ಆಝಾದ್ ರಾಷ್ಟ್ರೀಯ ಉರ್ದು ವಿವಿಯಿಂದ 2016ರಲ್ಲಿ ಗೌರವ ಡಾಕ್ಟರೇಟ್ ನೀಡಿರುವುದರಿಂದ ಸರ್ಕಾರ ಇದಕ್ಕೆ ಒಪ್ಪಿಗ ನೀಡಿಲ್ಲ" ಎಂದು ಜೆಎಂಐ, ಇಂಡಿಯನ್ ಎಕ್ಸ್‍ಪ್ರೆಸ್ ಸಲ್ಲಿಸಿದ ಆರ್‍ಟಿಐ ಅರ್ಜಿಗೆ ಉತ್ತರಿಸಿದೆ.

"ಹಲವು ಬಾರಿ ಗೌರವ ಡಾಕ್ಟರೇಟ್ ನೀಡುವುದಕ್ಕೆ ಸಂಬಂಧಿಸಿದಂತೆ ಯಾವುದೇ ನಿಗದಿತ ನಿಯಮಾವಳಿ ಇಲ್ಲ. ಆದರೆ ಇಂಥ ಕ್ರಮವನ್ನು ಸಾಮಾನ್ಯವಾಗಿ ಉತ್ತೇಜಿಸುವುದಿಲ್ಲ. ಈ ನಟ ಜೆಎಂಐ ಸಮೂಹ ಮಾಧ್ಯಮ ಸಂಶೋಧನಾ ಕೇಂದ್ರದ ಸ್ನಾತಕೋತ್ತರ ವಿದ್ಯಾರ್ಥಿಯಾಗಿದ್ದವರು. ಆದರೆ ಹಾಜರಾತಿ ಕೊರತೆಯಿಂದ ಪರೀಕ್ಷೆಗೆ ಹಾಜರಾಗಿರಲಿಲ್ಲ" ಎಂದು ಎಚ್‍ಆರ್‍ಡಿ ಅಧಿಕಾರಿಗಳು ಪ್ರತಿಕ್ರಿಯೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News