ಶೋಭಾ ಕರಂದ್ಲಾಜೆಗೆ ಮುಜುಗರ ತಂದ ರೈಲ್ವೆ ಇಲಾಖೆ ಆಹ್ವಾನ ಪತ್ರಿಕೆ !

Update: 2019-02-22 12:11 GMT

ಚಿಕ್ಕಮಗಳೂರು, ಫೆ.22: ಜಿಲ್ಲೆಯ ತರೀಕೆರೆ ಪಟ್ಟಣದ ರೈಲ್ವೆ ನಿಲ್ದಾಣದಲ್ಲಿ ಶುಕ್ರವಾರ ಮಧ್ಯಾಹ್ನ ಹಮ್ಮಿಕೊಳ್ಳಲಾದ ರೈಲ್ವೆ ಇಲಾಖೆಯ ಕಾರ್ಯಕ್ರಮವೊಂದರ ಆಹ್ವಾನ ಪತ್ರಿಕೆಯಲ್ಲಿ ರೈಲ್ವೆ ಅಧಿಕಾರಿಗಳು ಸಂಸದೆ ಶೋಭಾ ಕರಂದ್ಲಾಜೆ ಅವರ ಹೆಸರು ಮುದ್ರಿಸುವ ವೇಳೆ ಎಡವಟ್ಟು ಮಾಡಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ವೇದಿಕೆ ಒದಗಿಸಿದಂತಾಗಿದೆ.

ಶುಕ್ರವಾರ ಮಧ್ಯಾಹ್ನ ತರೀಕೆರೆ ಪಟ್ಟಣದಲ್ಲಿರುವ ರೈಲ್ವೆ ನಿಲ್ದಾಣದ ಪ್ಲಾಟ್ ಫಾರಂ ಅನ್ನು ಮೇಲ್ದರ್ಜೆಗೇರಿಸುವುದು ಸೇರಿದಂತೆ ವಿವಿಧ ಕಾಮಗಾರಿಗಳ ಉದ್ಘಾಟನಾ ಕಾರ್ಯಕ್ರಮಗಳನ್ನು ನೈರುತ್ಯ ರೈಲ್ವೆ ಹುಬ್ಬಳ್ಳಿ ಮುಖ್ಯ ಕಚೇರಿ ವತಿಯಿಂದ ಹಮ್ಮಿಕೊಳ್ಳಲಾಗಿತ್ತು. ಸಂಸದೆ ಶೋಭಾ ಕರಂದ್ಲಾಜೆ ಅವರು ಈ ಕಾಮಗಾರಿಗಳ ಉದ್ಘಾಟನೆಗೆ ಆಗಮಿಸುವವರಿದ್ದರು. ಆದರೆ ಈ ಉದ್ಘಾಟನಾ ಕಾರ್ಯಕ್ರಮದ ಅಂಗವಾಗಿ ಎಲ್ಲೆಡೆ ವಿತರಿಸಲಾದ ಆಹ್ವಾನ ಪತ್ರಿಕೆಯಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಅವರ ಹೆಸರನ್ನು ಕುಮಾರಿ ಶೋಭಾ ಕರಂದ್ಲಾಜೆ ಎಂದು ಮುದ್ರಿಸುವ ಬದಲು ಶ್ರೀಮತಿ ಶೋಭಾ ಕರಂದ್ಲಾಜೆ ಎಂದು ಮುದ್ರಿಸಿರುವುದು ಕಂಡು ಬಂದಿದೆ.

ಹಿಂದೂ ಧರ್ಮದ ಪ್ರಕಾರ ವಿವಾಹಿತ ಮಹಿಳೆಯನ್ನು ಶ್ರೀಮತಿ ಎಂದು ಸಂಬೋಧಿಸಲಾಗುತ್ತದೆ. ಅವಿವಾಹಿತರನ್ನು ಕುಮಾರಿ ಎಂದೇ ಕರೆಯಲಾಗುತ್ತದೆ. ಸಂಸದೆ ಶೋಭಾ ಕರಂದ್ಲಾಜೆ ಅವರು ಅವಿವಾಹಿತರೆಂದೇ ಎಲ್ಲೆಡೆ ಗುರುತಿಸಿಕೊಂಡಿದ್ದಾರೆ. ಅವಿವಾಹಿತರಾಗಿರುವ ಕಾರಣಕ್ಕೆ ಯಾವುದೇ ಸರಕಾರಿ, ಖಾಸಗಿ ಕಾರ್ಯಕ್ರಮಗಳ ಆಹ್ವಾನ ಪತ್ರಿಕೆಗಳಲ್ಲಿ ಸಂಸದೆ ಶೋಭಾ ಅವರ ಅವರ ಹೆಸರನ್ನು ಕುಮಾರಿ ಶೋಭಾ ಕರಂದ್ಲಾಜೆ ಎಂದು ಇದುವರೆಗೂ ಮುದ್ರಿಸಲಾಗುತ್ತಿತ್ತು. 

ಆದರೆ ತರೀಕೆರೆ ಪಟ್ಟಣದ ನೈರುತ್ಯ ರೈಲ್ವೆ ಇಲಾಖೆಯ ಕಾರ್ಯಕ್ರಮದ ಆಹ್ವಾನ ಪತ್ರಿಕೆಗಳಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಅವರ ಹೆಸರಿನ ಮುನ್ನ ಶ್ರೀಮತಿ ಎಂದು ಮುದ್ರಿಸಲಾಗಿದ್ದು, ನೈರುತ್ಯ ರೈಲ್ವೆ ಇಲಾಖೆಯ ಹುಬ್ಬಳ್ಳಿ ಮುಖ್ಯ ಕಚೇರಿ ವತಿಯಿಂದ ಈ ಆಹ್ವಾನ ಪತ್ರಿಕೆಗಳನ್ನು ಮುದ್ರಿಸಲಾಗಿದೆ ಎಂದು ತಿಳಿದು ಬಂದಿದೆ.

ಸದ್ಯ ಶ್ರೀಮತಿ ಶೋಭಾ ಕರಂದ್ಲಾಜೆ ಎಂದು ಮುದ್ರಣಗೊಂಡಿರುವ ಪೊಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ಕುಮಾರಿ ಶೋಭಾ ಅವರು ಶ್ರೀಮತಿ ಆಗಿದ್ದು ಯಾವಾಗ? ಎಂಬಿತ್ಯಾದಿ ಪ್ರಶ್ನೆಗಳು ಸಾಮಾಜಿಕ ಜಾಲತಾಣಗಳಲ್ಲಿ ಕಂಡು ಬರುತ್ತಿವೆ.

ತರೀಕೆರೆ ರೈಲ್ವೆ ನಿಲ್ದಾಣದ ವಿವಿಧ ಕಾಮಗಾರಿಗಳ ಉದ್ಘಾಟನಾ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಸಂಸದೆಯ ಹೆಸರು ಕುಮಾರಿ ಶೋಭಾ ಎಂದಾಗಬೇಕಿತ್ತು. ಕಣ್ತಪ್ಪಿನಿಂದ ಶ್ರೀಮತಿ ಎಂದಾಗಿದೆ. ಈ ಆಹ್ವಾನ ಪತ್ರಿಕೆಗಳನ್ನು ನೈರುತ್ಯ ರೈಲ್ವೆಯ ಹುಬ್ಬಳ್ಳಿ ಮುಖ್ಯಕಚೇರಿ ವತಿಯಿಂದ ಮುದ್ರಿಸಲಾಗಿದೆ. ಕಾರ್ಯಕ್ರಮದ ಎಲ್ಲ ಆಹ್ವಾನ ಪತ್ರಿಕೆಗಳು ಹುಬ್ಬಳ್ಳಿಯಿಂದಲೇ ಬಂದಿವೆ. ಇದು ಕಣ್ತಪ್ಪಿನಿಂದ ಸಂಭವಿಸಿರಬಹುದು.
- ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ, ನೈರುತ್ಯ ರೈಲ್ವೆ ವಿಭಾಗೀಯ ಕಚೇರಿ, ಮೈಸೂರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News