ಮಸೀದಿ ಮುಂಭಾಗದಲ್ಲಿ ಮದ್ಯದಂಗಡಿಗೆ ಅನುಮತಿ ಖಂಡಿಸಿ ಧರಣಿ

Update: 2019-02-22 12:29 GMT

ಚಿಕ್ಕಮಗಳೂರು, ಫೆ.22: ನಗರದ ರಾಮನಹಳ್ಳಿಯ ಮಸೀದಿ ಮುಂಭಾಗ ಮದ್ಯದಂಗಡಿ ತೆರೆಯಲು ನೀಡಿರುವ ಪರವಾನಗಿಯನ್ನು ತಕ್ಷಣ ರದ್ದುಪಡಿಸುವಂತೆ ಒತ್ತಾಯಿಸಿ ಮುಸ್ಲಿಂ ಸಮುದಾಯದವರು ಆಝಾದ್ ಪಾರ್ಕ್ ವೃತ್ತದ ಬಳಿ ಧರಣಿ ನಡೆಸಿದರು.

ಶುಕ್ರವಾರ ಮಧ್ಯಾಹ್ನದ ನಮಾಝ್ ನಂತರ ಆಜಾದ್ ಪಾರ್ಕ್ ವೃತ್ತದ ಬಳಿ ಜಮಾಯಿಸಿದ ನೂರಾರು ಮುಸ್ಲಿಮರು ಬಾರ್ ಮತ್ತು ರೆಸ್ಟೋರೆಂಟ್‍ಗೆ ಪರವಾನಗಿ ನೀಡಿರುವುದರ ವಿರುದ್ಧ ತೀವ್ರ ಆಕ್ರೋಶ, ಅಸಮಾಧಾನ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಧರ್ಮಗುರು ಮುಫ್ತೀ ತೌಶೀರ್ ಅಹ್ಮದ್ ಸಾಬ್, ಬಾರ್ ಮತ್ತು ರೆಸ್ಟೋರೆಂಟ್ ಆರಂಭವಾಗಲಿರುವ ರಾಮನಹಳ್ಳಿ ರಸ್ತೆಯಲ್ಲಿ ತಮ್ಮ ಸಮುದಾಯದ ಸ್ಮಶಾನ, ಮಸೀದಿ, ಶಿಕ್ಷಕರ ತರಬೇತಿ ಕೇಂದ್ರ, ಬಾಲಕಿಯರ ಹಾಸ್ಟೆಲ್ ಇದೆ. ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ನೂರಾರು ಸಾರ್ವಜನಿಕರು ಈ ರಸ್ತೆಯಲ್ಲಿ ವಾಯುವಿಹಾರ ಮಾಡುತ್ತಾರೆ. ಇಂತಹ ಸ್ಥಳದಲ್ಲಿ ಬಾರ್ ತೆರೆಯುವುದರಿಂದ ನಿವಾಸಿಗಳ ನೆಮ್ಮದಿ ಹಾಳಾಗುತ್ತದೆ, ಯಾವುದೇ ಕಾರಣಕ್ಕೂ ಆ ಜಾಗದಲ್ಲಿ ಮದ್ಯದಂಗಡಿ ತೆರೆಯಲು ಅವಕಾಶ ನೀಡಬಾರದು ಎಂದು ಆಗ್ರಹಿಸಿದ ಅವರು, ಮದ್ಯದಂಗಡಿಯನ್ನು ತೆರೆದಲ್ಲಿ ಮುಂದಾಗುವ ಅನಾಹುತಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಡಳಿತ, ಅಬಕಾರಿ ಇಲಾಖೆ, ಪೋಲೀಸ್ ಇಲಾಖೆ ಹೊಣೆಯಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.

ಜಿಲ್ಲಾ ವಕ್ಫ್ ಮಂಡಳಿ ಅಧ್ಯಕ್ಷ ಅತೀಕ್ ಖೈಸರ್ ಮಾತನಾಡಿ, ಬಾರ್ ಮತ್ತು ರೆಸ್ಟೋರೆಂಟ್‍ಗೆ ಪರವಾನಿಗೆ ಕುರಿತಂತೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಸಮುದಾಯದಿಂದ ಹಲವು ಬಾರಿ ಮನವಿ ಮಾಡಲಾಗಿದೆ. ಆದರೆ ಅದನ್ನು ನಿರ್ಲಕ್ಷಿಸಿ ಲಂಚದ ಆಸೆಗಾಗಿ ಅಬಕಾರಿ ಅಧಿಕಾರಿಗಳು ಅನುಮತಿ ನೀಡಿದ್ದಾರೆ. ಮಸೀದಿ, ಬಾಲಕಿಯರ ಹಾಸ್ಟೆಲ್ ಇರುವ ಜಾಗದಲ್ಲಿ ಮದ್ಯದಂಗಡಿ ತೆರೆಯಲು ನಿಷೇದವಿದ್ದರೂ ಸಹ ನಿಯಮಗಳನ್ನು ಗಾಳಿಗೆ ತೂರಿ ಪರವಾನಿಗೆ ನೀಡಿದ್ದಾರೆಂದು ದೂರಿದರು.

ನಂತರ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಲಾಯಿತು. ಜಾಮಿಯ ಮಸೀದಿ ಧರ್ಮಗುರು ರಾಹೀಲ್ ಕಾಶ್ಮೀ ಸಾಬ್, ಅಧ್ಯಕ್ಷ ನಝೀರ್ ಅಹ್ಮದ್, ಕಾರ್ಯದರ್ಶಿ ಅಫ್ಝಲ್ ಖಾನ್, ಜಂಟಿ ಕಾರ್ಯದರ್ಶಿ ಝುಬೇದುಲ್ಲಾ ಶರೀಫ್, ಉಪಾಧ್ಯಕ್ಷ ಅಬ್ದುಲ್ ಕರೀಂ, ಮುಖಂಡರಾದ ರಾಹೀಲ್ ಶರೀಫ್, ಮುಹಮ್ಮದ್ ಇಬ್ರಾಹಿಂ, ಷರೀಫ್ ಮುದಸೀರ್ ತಬರೇಝ್ ಸೇರಿ ಹಲವರು ಧರಣಿಯಲ್ಲಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News